Yuva Nidhi ಯುವ ಜನರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆದುಕೊಳ್ಳುವಂತೆ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಗೌಡ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಅದರಂತೆ ಯುವ ಜನತೆಗೆ ಅರ್ಥಿಕ ಸಹಕಾರ ನೀಡುವುದರೊಂದಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಯುವಕರು ಯೋಜನೆಯ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ’.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದಾಗ, ಅದನ್ನು ಜಾರಿ ಮಾಡಲು ಆಗುವುದಿಲ್ಲ. ಜಾರಿಯಾದರೆ ಕರ್ನಾಟಕ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿ ಹೇಳಿದ್ದರು. ಆದರೆ, ರಾಜ್ಯ ದಿವಾಳಿ ಆಗಿಲ್ಲ, ಐದು ಗ್ಯಾರಂಟಿ ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಗ್ಯಾರಂಟಿ ಜಾರಿ ಮಾಡಿದ ಮೇಲೂ ಕರ್ನಾಟಕ ಸರ್ಕಾರ ಸದೃಢವಾಗಿದೆ ಎಂದು ಚೇತನ್ ತಿಳಿಸಿದ್ದಾರೆ.
ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾದ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗ ಲಭಿಸದೇ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ.
ಆಯ್ಕೆಯಾದ ಪದವಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3,000 ರೂ., ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ನೇರವಾಗಿ ಅವರ ಖಾತೆಗೆ ಜಮಾ ಆಗಲಿದೆ. ಅರ್ಜಿ ಸಲ್ಲಿಸಿದಾಗಿನಿಂದ ಉದ್ಯೋಗ ದೊರೆಯುವವರೆಗೆ ಅಥವಾ 2 ವರ್ಷ ಗರಿಷ್ಠ ಅವಧಿಗೆ ಮಾತ್ರ ಈ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸುವಾಗ ಮತದಾರರ ಗುರುತಿನ ಚೀಟಿ, ಪದವಿ ಅಥವಾ ಡಿಪ್ಲೊಮಾದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಹಿತ ಅಗತ್ಯ ದಾಖಲೆ ಒದಗಿಸಬೇಕು ಎಂದು ತಿಳಿಸಿದ್ದಾರೆ.
Yuva Nidhi ರಾಜ್ಯದ ಜನ ಇಟ್ಟ ಭರವಸೆಯನ್ನು ಈಡೇರಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ಇದೇ ಜ.12 ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮವಿದ್ದು, ಅದೇ ದಿನ ಶಿವಮೊಗ್ಗದಲ್ಲಿ ಯುವನಿಧಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿರುವುದು ಹೆಚ್ಚು ಅರ್ಥಪೂರ್ಣ ಕಾರ್ಯಕ್ರಮ ಎಂದಿದ್ದಾರೆ.
ಇದಲ್ಲದೇ ರಾಜ್ಯ ಸರ್ಕಾರವು ವರ್ಚುವಲ್ ಉದ್ಯೋಗ ಮೇಳಗಳ ಮೂಲಕ ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶ ಒದಗಿಸಲು ಕ್ರಮ ಕೈಗೊಂಡಿದೆ. ಜೊತೆಗೆ ಒಂದು ದಿನ ಉದ್ಯಮಶೀಲತಾ ಪ್ರೇರಣಾ ಶಿಬಿರ, ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕಾ ಕಾರ್ಯಕ್ರಮಗಳು, ವೃತ್ತಿ ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಂಡಿದೆ. ಇದರ ಪ್ರಯೋಜನವನ್ನು ಯುವಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.