DVS College of Arts and Science ಅತಿ ಕಡಿಮೆ ಸಮಯದಲ್ಲಿ ದೇಹದ ಶಕ್ತಿ , ಸಾಮಾರ್ಥ್ಯ ಹಾಗೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಾನಿಕಾರಕ ವಸ್ತುಗಳ ಬಳಕೆ ಮಾಡಬೇಡಿ, ಉತ್ತಮ ದೈಹಿಕ ಸಾಮಾರ್ಥ್ಯ ಕಾಪಾಡಿಕೊಳ್ಳಬೇಕಾದರೆ ನಿರಂತರ ಶ್ರಮ ವಹಿಸಿ ಅಭ್ಯಾಸ ಮಾಡುವುದು ಒಂದೇ ನಮ್ಮ ಮುಂದಿರುವ ಮಾರ್ಗ ಎಂದು ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ ಸಲಹೆ ನೀಡಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಐಕ್ಯೂಎಸಿ ಘಟಕ, ಕುವೆಂಪು ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡಿವಿಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ “ಅಂತರ ಕಾಲೇಜು ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆ ಪ್ರಕ್ರಿಯೆ 2023-24 ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೇಹದಾರ್ಢ್ಯ ಸ್ಪರ್ಧೆ ದೃಷ್ಟಿಯಿಂದ ಗಮನಿಸಿದಾಗ ಯುವಜನರು ದೇಹಕ್ಕೆ ಹಾನಿ ಉಂಟು ಮಾಡಬಲ್ಲ ಪೌಡರ್ ಗಳ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ವಸ್ತುಗಳ ಬಳಕೆಯು ಕಡಿಮೆ ಸಮಯದಲ್ಲಿ ಫಲಿತಾಂಶ ನೀಡಿದಂತೆ ಕಂಡರೂ ಜೀವನ ಪೂರ್ತಿ ನೋವು ನೀಡುವ ಕಾಯಿಲೆಗಳನ್ನು ನಿಮ್ಮ ದೇಹಕ್ಕೆ ಆವರಿಸುವಂತೆ ಮಾಡುತ್ತದೆ. ಆದ್ದರಿಂದ ಯಾವುದೇ ಹಾನಿಯುಂಟು ಮಾಡುವ ವಸ್ತುಗಳ ಬಳಕೆ ಮಾಡಬೇಡಿ ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಶಿಸ್ತಿನ ಜೀವನ ಶೈಲಿ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿ. ಯುವಜನರು ಕ್ರೀಡಾ ಚಟುವಟಿಕೆ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸಬೇಕು. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರತಿಯೊಬ್ಬ ಕ್ರೀಡಾಪಟುವಿಗೂ ಅಭಿನಂದನೆ ಎಂದು ಹೇಳಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಆರೋಗ್ಯ ಜಾಗೃತಿ ದೃಷ್ಟಿಯಿಂದ ಇಂತಹ ಸ್ಪರ್ಧೆ ಕಾರ್ಯಕ್ರಮಗಳು ಅತ್ಯಂತ ಸಹಕಾರಿ. ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಸ್ಪರ್ಧೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಯುವಜನತೆ ಸಮಾಜದ ಆಸ್ತಿ, ದೇಹ ಸದೃಢ ಆಗಿಟ್ಟುಕೊಂಡರೆ ಮನಸ್ಸು ಸಹ ಸದೃಢವಾಗಿರುತ್ತದೆ. ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಕೇಂದ್ರಗಳು ಹೆಚ್ಚಾಗಬೇಕು. ಯುವ ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.
DVS College of Arts and Science ದೇಶಿಯ ವಿದ್ಯಾಶಾಲಾ ಸಮಿತಿಯ ಖಜಾಂಚಿ ಬಿ.ಗೋಪಿನಾಥ್, ಐಕ್ಯೂಎಸಿ ಸಂಚಾಲಕ ಎನ್.ಕುಮಾರಸ್ವಾಮಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಚಿನ್. ಕೆ , ಕೇತನಾ ಆರ್ತಿ, ಡಾ. ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.