Smt. Sundaramma Shankaramurthy Pre-Graduation College ಹರೆಯದ ವಯಸ್ಸಿನ ಯುವಕ-ಯುವತಿಯರು ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಭವಿಷ್ಯದಲ್ಲಿ ಸ್ವಾತಂತ್ಯ ಹಾಗೂ ಬಲಿಷ್ಟವಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪುಟ್ಟನಾಯ್ಕ್ ಹೇಳಿದರು.
ಚಿಕ್ಕಮಗಳೂರು ನಗರದ ಮಲೆನಾಡು ವಿದ್ಯಾಸಂಸ್ಥೆ, ಶ್ರೀಮತಿ ಸುಂದರಮ್ಮ ಶಂಕರಮೂರ್ತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ಪಠ್ಯ-ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಸಂಜೆ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಲೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪೂರಕವಾಗಿರುವುದರಿಂದ ವಿದ್ಯಾರ್ಥಿಗಳು ಕಲೆಯೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿರಬೇಕು. ತಂತ್ರಜ್ಞಾನದ ಒಳ್ಳೆಯ ಅಂಶಗಳನ್ನು ಮಾತ್ರ ಬಳಸಿಕೊಂಡು ಆ ಮೂಲಕ ಉದ್ಯೋಗದ ವಿವಿಧ ರಂಗಗಳ ಕುರಿತ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಅವಮಾನ, ಅನುಮಾನ, ಸಮ್ಮಾನಗಳಿಲ್ಲದೆ ಸಾಧನೆ ಸಾಧ್ಯವಿಲ್ಲ. ಜೀವನಪ್ರೀತಿಯಿಂದ ಅಂತರಂಗ ಗಟ್ಟಿಗೊಳ್ಳುತ್ತದೆ ಎಂದ ಅವರು ವಿದ್ಯಾರ್ಥಿ ಗಳು ಎಲ್ಲವನ್ನು ಸರಿಸಮಾನವಾಗಿ ತೆಗೆದುಕೊಂಡು ಮುನ್ನೆಡೆದರೆ ಮಾತ್ರ ಯಶಸ್ಸಿನ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.
ಸದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕ ವಾಗುತ್ತದೆ. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ. ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಎಂಇಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಶಿಕ್ಷಣದಲ್ಲಿ ಭಾರತೀ ಯತೆಯನ್ನು ಮೈಗೂಡಿಸಿಕೊಳ್ಳಬೇಕು. ಆತ್ಮಪ್ರಜ್ಞೆ, ಅಂತಸತ್ವಗಳನ್ನು ರೂಢಿಸಿಕೊಳ್ಳಬೇಕು. ಶಿಸ್ತಿನ ವ್ಯಾಸಂಗ ದೊಂದಿಗೆ ದೃಢತೆಯನ್ನು ಮೈಗೂಡಿಸಿಕೊಂಡು ಪ್ರಗತಿಯತ್ತ ಸಾಗಬೇಕು ಎಂದು ತಿಳಿಸಿದರು.
ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು. ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು. ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಎಂದಿಗೂ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಇಎಸ್ ಅಧ್ಯಕ್ಷ ಎನ್.ಕೇಶವಮೂರ್ತಿ ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ನಾವು ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
Smt. Sundaramma Shankaramurthy Pre-Graduation College ಕಾರ್ಯಕ್ರಮಕ್ಕೂ ಮುನ್ನ ವಿದ್ಯಾಸಂಸ್ಥೆಯ ಗಣ್ಯರು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ನಡೆಯಿತು.
ಈ ಸಂದರ್ಭದಲ್ಲಿ ಎಂಇಎಸ್ ಉಪಾಧ್ಯಕ್ಷೆ ರಾಧಾಸುಂದ್ರೇಶ್, ಸಹ ಕಾರ್ಯದರ್ಶಿ ಎಸ್.ಶಂಕರನಾರಾಯಣಭಟ್ , ಪದನಿಮಿತ್ತ ಸದಸ್ಯೆ ಉಮಾ ನಾಗೇಶ್ , ಕಾಲೇಜು ಪ್ರಾಂಶುಪಾಲೆ ಜಯಶ್ರೀ, ಮತ್ತಿತರರು ಇದ್ದರು.