Kannadasene ಆಂಗ್ಲಭಾಷೆಯ ನಾಮಫಲಕ ತೆರವುಗೊಳಿಸುವ ವೇಳೆಯಲ್ಲಿ ಕನ್ನಡಪರ ಹೋರಾಟಗಾರರನ್ನು ಬಂಧಿಸಿದ್ದು ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಕನ್ನಡಸೇನೆ ಜಿಲ್ಲಾ ಘಟಕವು ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂಬಂಧ ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕನ್ನಡಸೇನೆ ಮುಖಂಡರುಗಳು ರಾಜ್ಯಮಟ್ಟದ ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ತಕ್ಷಣ ಬಿಡುಗಡೆಗೊಳಿಸಬೇಕು ಎಂದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ನಾಡಿನಲ್ಲಿ ಅಂಗಡಿ ಮುಂಗಟ್ಟುದಾರರು ಶೇ. 70ರಷ್ಟು ಭಾಗ ಕನ್ನಡ ಹಾಗೂ ಶೇ.30ರಷ್ಟು ಭಾಗ ಆಂಗ್ಲಭಾಷೆಯ ನಾಮಫಲಕ ಅಳವಡಿಸಲು ಸರ್ಕಾರದ ಸೂಚನೆಗಳಿದ್ದರೂ ಸಹ ಅವುಗಳನ್ನು ಧಿಕ್ಕರಿಸಿ ರಾಜಾರೋಷವಾಗಿ ಆಂಗ್ಲಭಾಷೆಗೆ ಬೆಲೆ ಕೊಟ್ಟಿರುವುದು ಸರಿಯಲ್ಲ ಎಂದರು.
Kannadasene ಈ ವಿಚಾರವಾಗಿ ರಾಜ್ಯದ ಹಲವಾರು ಕನ್ನಡಪರ ಸಂಘಟನೆಗಳು ನಾಮಫಲಕ ತೆರವುಗೊಳಿಸುವ ಸಂಬಂಧ ಅಂಗಡಿದಾರರ ಮಳಿಗೆಗಳ ನಾಮಫಲಕ ತೆರವಿಗೆ ಮುಂದಾದ ವೇಳೆಯಲ್ಲಿ ಪೊಲೀಸ್ ಇಲಾಖೆ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಹೀಗಾಗಿ ಮುಖ್ಯಮಂತ್ರಿಗಳು ಕನ್ನಡಪರ ಸಂಘಟನೆಗಳ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆದು ಅವರನ್ನು ಬಿಡುಗಡೆಗೊಳಿಸಬೇಕು. ವಿಳಂಭಧೋರಣೆ ವಹಿಸಿದರೆ ರಾಜ್ಯಾದ್ಯಂತ ಹೋರಾಟ ರೂಪಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಹರಿಶಂಕರ್, ಪಾಲಾಕ್ಷಿ, ಹೆಚ್.ಎನ್.ಶಿವಕುಮಾರ್ ಉಪಸ್ಥಿತರಿದ್ದರು.