Shivamogga City Corporation ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಯಶಸ್ಸು ಸಾಧಿಸಲು ಸ್ವಯಂ ಪರಿಶ್ರಮ ಅತ್ಯಂತ ಮುಖ್ಯ. ಸದೃಢ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಅಲೋಚನೆಯು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಕಾರಿ ಆಗುತ್ತದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿಸಿದ್ದ “2022-23 ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಹಂತದಿಂದಲೇ ಉತ್ತಮ ಸ್ನೇಹಿತರ ಸಹವಾಸ ಬೆಳೆಸಿಕೊಳ್ಳಬೇಕು. ದಾರಿ ತಪ್ಪಿಸುವ ಹಾಗೂ ಋಣಾತ್ಮಕ ವಿಷಯಗಳಿಂದ ದೂರ ಇರಬೇಕು. ಕೆಟ್ಟ ಹವ್ಯಾಸವನ್ನು ಕಲಿಯಬಾರದು. ಸದಾ ಗೆಲುವು ಸಾಧಿಸುವ ಬಗ್ಗೆಯೇ ಅಲೋಚನೆ ಇರಬೇಕು. ನಿಮ್ಮ ಯಶಸ್ಸಿಗೆ ನೀವೇ ಕಾರಣ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್.ಪಿ. ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಅತ್ಯಂತ ಮುಖ್ಯ. ಆರಂಭಿಕ ಹಂತದಲ್ಲಿ ಕಲಿಯುವ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಅಂಶಗಳನ್ನು ಒಳಗೊಂಡಿರುವ ಶಿಕ್ಷಣ ನೀಡುವ ಕೆಲಸವನ್ನು ಡಿವಿಎಸ್ ಸಂಸ್ಥೆಯು ಮಾಡುತ್ತಿರುವುದು ಶ್ಲಾಘನೀಯ. ಸಾಮಾಜಿಕ ಕಳಕಳಿಯೊಂದಿಗೆ ಡಿವಿಎಸ್ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಏಕಾಗ್ರತೆ ಶಕ್ತಿ ಬಹಳ ಮುಖ್ಯ ಆಗಿದ್ದು, ಕ್ರೀಡಾ ಮತ್ತು ಶೈಕ್ಷಣಿಕ ಅಧ್ಯಯನದಲ್ಲಿ ಸಾಧನೆ ಮಾಡಲು ಸಹಕಾರಿ ಆಗುತ್ತದೆ. ಏಕಾಗ್ರತೆ ಶಕ್ತಿ ವೃದ್ಧಿಸಿಕೊಳ್ಳಲು ಪೂರಕ ಚಟುವಟಿಕೆಗಳನ್ನು ಪ್ರತಿ ನಿತ್ಯ ಅಭ್ಯಾಸ ಮಾಡಬೇಕು. ಕ್ರಿಯಾತ್ಮಕ ಆಲೋಚನೆ ಹಾಗೂ ಕೌಶಲ್ಯಗಳ ಕಲಿಕೆಗೂ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ಡಿವಿಎಸ್ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾಧಕರ ಜೀವನಶೈಲಿಯೇ ಪ್ರೇರಣೆ ಎಂದರು.
Shivamogga City Corporation ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್ ಮಾತನಾಡಿ, ಪ್ರತಿ ವರ್ಷ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಗುತ್ತದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಸಾಧಕರಿಂದ ಸ್ಫೂರ್ತಿ ಪಡೆದು ಉನ್ನತ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಸೇರಿದಂತೆ ಆಡಳಿತ ವರ್ಗ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದೇಶಿಯ ವಿದ್ಯಾಶಾಲಾ ಸಮಿತಿ ವತಿಯಿಂದ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರಿಯ ಶಿಕ್ಷಕ ಜಿ.ಎಸ್.ವೆಂಕಟೇಶ್, ಎಸ್.ಕೇಶವಪ್ರಸಾದ್, ದಾದಾಪೀರ್, ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.