DVS College Shivamogga ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಆಡಳಿತ ವಿಷಯದಲ್ಲಿ ಕನ್ನಡ ಭಾಷೆಗೆ ಸಂಪೂರ್ಣ ಪ್ರಾಮುಖ್ಯತೆ ನೀಡುವುದು ಅತ್ಯಂತ ಮುಖ್ಯ ಎಂದು ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಡಿ.ಬಿ.ಶಿವರುದ್ರಪ್ಪ ಅಭಿಪ್ರಾಯಪಟ್ಟರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಸ್ವತಂತ್ರ ಪಿಯು ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ “ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದಿನಿಂದ ಸಿಗುತ್ತಿರುವ ಪ್ರತಿಯೊಂದು ಶಾಸನವು ಕನ್ನಡ ಭಾಷೆಯ ಶ್ರೀಮಂತ ಸಾಹಿತ್ಯ ಸಂಸ್ಕೃತಿ ಪರಂಪರೆಯ ಪ್ರತೀಕ ಆಗಿದ್ದು, ಕನ್ನಡದ ಶ್ರೇಷ್ಠತೆ ಬಗ್ಗೆ ಅರಿತುಕೊಳ್ಳಬಹುದಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರತಿಯೊಬ್ಬ ಸಾಹಿತಿಗಳ ಕೊಡುಗೆಯು ಅಪಾರವಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಕನ್ನಡ ಬೆಳೆಯುತ್ತದೆ. ಹೃದಯದ ಭಾಷೆ ಆಗಿರುವ ಕನ್ನಡವನ್ನು ಪ್ರತಿಯೊಬ್ಬರೂ ಬಳಸುವ ಸಂಕಲ್ಪ ಮಾಡಬೇಕು. ಕನ್ನಡ ಭಾಷೆಯು ಪ್ರತಿಯೊಬ್ಬರ ಮನೆಗಳಲ್ಲಿಯೂ ನಿತ್ಯ ಉತ್ಸವ ಆಗಬೇಕು ಎಂದು ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ ಮಾತನಾಡಿ, ಮಾತೃಭಾಷೆಗೆ ವಿಶೇಷ ಸ್ಥಾನಮಾನ ಇದ್ದು, ಕನ್ನಡ ಭಾಷೆಯಲ್ಲಿ ನಮ್ಮ ಮನಸ್ಸಿನ ಎಲ್ಲ ಸಂಗತಿಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದಾಗಿದೆ. ಬೇರೆ ಯಾವ ಭಾಷೆಗಳಲ್ಲಿಯೂ ಕನ್ನಡ ಭಾಷೆ ರೀತಿ ನಾವು ವಿಷಯಗಳನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
DVS College Shivamogga ಭಾಷೆ ಅಸ್ತಿತ್ವ ಎಂದಿಗೂ ಕಳೆದುಕೊಳ್ಳುವುದಿಲ್ಲ. ಭಾಷೆಗೆ ಎಂದಿಗೂ ಸಾವಿಲ್ಲ. ಭಾಷೆ ಹೆಚ್ಚು ಬಳಸಿದಲ್ಲಿ ಭಾಷೆಯ ಬೆಳವಣಿಗೆಯು ಸಮೃದ್ಧಿಯಾಗಿ ಸಾಗಲಿದೆ. ಕನ್ನಡ ಭಾಷೆಯನ್ನು ಶುದ್ಧ, ಪರಿಣಾಮಕಾರಿಯಾಗಿ ಬಳಸುವ ಮನೋಭಾವ ಎಲ್ಲರಲ್ಲಿಯೂ ಬರಬೇಕು. ಕನ್ನಡ ಭಾಷೆಯು ಉದ್ಯೋಗ ವಿಷಯದಲ್ಲಿಯೂ ಆದ್ಯತೆ ಭಾಷೆಯಾಗಿ ಪರಿಗಣಿಸುವ ವಾತಾವರಣ ನಿರ್ಮಾಣ ಆಗಬೇಕು. ಕನ್ನಡ ಭಾಷೆಯ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಂಗ್ಲ ಭಾಷೆಯ ಮೇಲಿನ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯಲ್ಲಿಯೇ ಪ್ರತಿಯೊಬ್ಬರೂ ಮಾತನಾಡಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಸುವಂತೆ ಆಗಬೇಕು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಖಜಾಂಚಿ ಬಿ.ಗೋಪಿನಾಥ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಎಸ್.ಕೆ.ಸಾವಿತ್ರಿ, ಐಕ್ಯೂಎಸಿ ಸಂಚಾಲಕ ಪ್ರೊ. ಎನ್.ಕುಮಾರಸ್ವಾಮಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಪ್ರೊ. ಕೇತನ ಆರ್ತಿ ಎನ್. ಡಿವಿಎಸ್ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
