Chamber of Commerce Shivamogga ಕಲೆ, ಸಾಹಿತ್ಯವು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ. ಭಾರತೀಯ ಸಾಂಪ್ರದಾಯಿಕ ಕಲೆ, ಸಾಹಿತ್ಯವು ಮನುಷ್ಯನ ಜೀವನವನ್ನು ಪರಿಶುದ್ಧಗೊಳಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.
ರಾಜೇಂದ್ರನಗರದ ಶ್ರೀ ವಿಜಯ ಕಲಾನಿಕೇತನದಲ್ಲಿ ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯದ ಕಲಾ ಸಂಸ್ಕೃತಿ ವಿಕಾಸ ಯೋಜನೆಯಡಿ ಪವಿತ್ರಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಶಾಸ್ತ್ರೀಯ ನೃತ್ಯ ಮಹೋತ್ಸವ “ನೃತ್ಯ ಮೋದ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೃತ್ಯವು ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಭರತನಾಟ್ಯವು ದೇಹ, ಮನಸ್ಸು ಹಾಗೂ ಆತ್ಮದ ಸಮನ್ವಯ ಸಂಗಮವಾಗಿದೆ. ವಿಜಯ ಕಲಾನಿಕೇತನ ಈಗಾಗಲೇ ಸಾಕಷ್ಟು ಜನ ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸಿದೆ ಎಂದು ತಿಳಿಸಿದರು.
ಡಾ. ಕೆ.ಎಸ್.ಪವಿತ್ರ ಶ್ರೀಧರ್ ಅವರು ಮನೋವೈದ್ಯರಾಗಿ ತಮ್ಮ ವೃತ್ತಿಯ ಜತೆಗೆ ಕಲಾ ಪ್ರಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ ನಮ್ಮ ನಾಡಿನ ಕಲೆಗಳ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿದ್ದಾರೆ. ಇವರು ಕಲಾ ಪ್ರಕಾರ ಕ್ಷೇತ್ರದ ಸೇವೆ ನಿರಂತರವಾಗಿರಲಿದೆ ಎಂದರು.
ಇದೇ ಸಂದರ್ಭದಲ್ಲಿ ಕಟೀಲ್ ಅಶೋಕ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಮಾತನಾಡಿ, ನೃತ್ಯ ಕಲೆಗೂ ಮೆದುಳಿಗೂ ನೇರ ಸಂಬಂಧ ಇದ್ದು, ನೃತ್ಯ ಬದುಕನ್ನು ಉತ್ತಮಗೊಳಿಸುತ್ತದೆ. ಖಿನ್ನತೆಯಿಂದ ದೂರ ಇರಲು ಸಹಕಾರಿ ಆಗುತ್ತದೆ. ಉತ್ತಮ ಸಂಸ್ಕಾರ ಬೆಳೆಯುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು.
Chamber of Commerce Shivamogga ಸಮಾರಂಭದ ಅಧ್ಯಕ್ಷತೆ ವಹಿಸಿ ಸಾಹಿತಿ ವಿಜಯ ಶ್ರೀಧರ ಮಾತನಾಡಿದರು. ಕಾರ್ಯಕ್ರಮದ ನಿರ್ದೇಶಕಿ ಡಾ. ಕೆ.ಎಸ್.ಪವಿತ್ರಾ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ಆಗಿದೆ ಎಂದು ತಿಳಿಸಿದರು.
ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಡಾ. ಕೆ.ಎಸ್.ಶುಭ್ರತಾ, ಡಾ. ಶ್ರೀಧರ್ ಉಪಸ್ಥಿತರಿದ್ದರು. ಬೆಂಗಳೂರಿನ ಅವಳಿ ಸಹೋದರಿಯರಾದ ಅರ್ಚನಾ ಹಾಗೂ ಚೇತನಾ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.