Parliament House ಭಾರತದ ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ದಿನವೇ ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಎದುರಾಗಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತ ಯುವಕರು ಸಂಸದರು ಕುಳಿತುಕೊಳ್ಳುವ ವೇದಿಕೆಗೆ ಎಗರಿದ್ದಾರೆ. ತಮ್ಮ ಬಳಿ ಇದ್ದ ಬಣ್ಣದ ಹೊಗೆ ಹೊರಸೂಸುವ ವಸ್ತುಗಳನ್ನು ಸಿಡಿಸಿದ್ದಾರೆ. ಇದೊಂದು ಅತಿ ದೊಡ್ಡ ಭದ್ರತಾ ಲೋಪವಾಗಿದ್ದು, ಸಂಸದರು ಪಕ್ಷಾತೀತವಾಗಿ ಘಟನೆಯನ್ನು ಖಂಡಿಸಿದ್ದಾರೆ. ಸಂಸತ್‌ನ ಭದ್ರತೆಗೆ ಇದು ಖಂಡಿತವಾಗಿಯೂ ದೊಡ್ಡ ಸವಾಲಾಗಿದೆ.
2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದು 22 ವರ್ಷ ಆದ ದಿನವೇ ಈ ಘಟನೆ ನಡೆದಿದೆ. ಸಂಸತ್‌ನಲ್ಲಿ ಎದುರಾಗಿರುವ ಈ ಭದ್ರತಾ ಲೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂಸದರು ಭದ್ರತಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Parliament House ಘಟನೆ ನಡೆದ ವೇಳೆ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ಅವರು ಸ್ಪೀಕರ್ ಅವರ ಪೀಠದಲ್ಲಿ ಅಲಂಕೃತರಾಗಿ ಕಲಾಪವನ್ನು ನಿರ್ವಹಿಸುತ್ತಿದ್ದರು. ಈ ಘಟನೆ ಕುರಿತು ಮಾಹಿತಿ ನೀಡಿದ ಅಗರ್ವಾಲ್, ಮೊದಲಿಗೆ ಯುವಕ ಗ್ಯಾಲರಿಯಿಂದ ಕೆಳಗೆ ನೆಗೆದಾಗ ಆತ ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದು ಭಾವಿಸಿದೆವು. ಆದರೆ, ಎರಡನೇ ವ್ಯಕ್ತಿಯೂ ಗ್ಯಾಲರಿಯಿಂದ ಕೆಳಗೆ ಬಂದರು. ಅಪರಿಚಿತರು ತಮ್ಮ ಶೂನಿಂದ ಒಂದಷ್ಟು ವಸ್ತುಗಳನ್ನು ಹೊರಗೆ ತೆಗೆದರು. ಅದರಿಂದ ಹಳದಿ ಬಣ್ಣದ ಹೊಗೆ ಹೊರ ಬಂತು ಎಂದು ವಿವರಿಸಿದ್ದಾರೆ.
ಇನ್ನು ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಇದೊಂದು ಭಯಾನಕ ಅನುಭವ ಎಂದಿದ್ದಾರೆ. ದುಷ್ಕರ್ಮಿಗಳ ಟಾರ್ಗೆಟ್ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ನಾವು ಆ ಕೂಡಲೇ ಲೋಕಸಭೆಯಿಂದ ಹೊರಗೆ ಬಂದೆವು. ಆದರೆ ಇದು ಖಂಡಿತವಾಗಿಯೂ ಭದ್ರತಾ ವೈಫಲ್ಯ ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.