National Commission for Protection of Child Rights ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಪ್ಯಾನ್ ಇಂಡಿಯಾ ರೆಸ್ಕ್ಯು & ರಿಹ್ಯಾಬಿಲಿಟೇಷನ್ ಕ್ಯಾಂಪೇನ್ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ ಇವರು ಸೂಚಿಸಿದ ಮೇರೆಗೆ ಡಿ.6 ರಂದು ಆನವಟ್ಟಿ ಪ್ರದೇಶದಲ್ಲಿ ತಪಾಸಣೆ ಹಾಗೂ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ತಪಾಸಣೆಯಲ್ಲಿ ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ತಪಾಸಣೆ ಕೈಗೊಂಡಿದ್ದು, ತಪಾಸಣೆ ವೇಳೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ರಕ್ಷಿಸಿ ಪುನಃ ಶಾಲೆಗೆ ದಾಖಲಿಸುವಂತೆ ಪೋಷಕರಿಗೆ ಮನವೊಲಿಸಲಾಯಿತು.
ಹಾಗೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರಡಿ ಇತರೆ ಅಂಗಡಿ, ವಾಣಿಜ್ಯ ಸಂಸ್ಥೆಗಳ ವ್ಯಾಪಾರಿಗಳಿಗೆ ಬಾಲಕಾರ್ಮಿಕ ಕಾಯ್ದೆಯ ಕುರಿತು ಕರಪತ್ರಗಳ ಮೂಲಕ ಅರಿವು ಮೂಡಿಸಲಾಯಿತು.
National Commission for Protection of Child Rights ತಂಡದಲ್ಲಿ ಕಾರ್ಮಿಕ ನಿರೀಕ್ಷಕಿ(ಪ್ರಭಾರ) ಶಿಲ್ಪ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಘುನಾಥ, ಶಿಕ್ಷಣ ಇಲಾಖೆಯ ದಯಾನಂದ್, ಪೊಲೀಸ್ ಇಲಾಖೆಯ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪುನೀತ್, ಮಕ್ಕಳ ಸಹಾಯವಾಣಿಯ ಪ್ರಮೋದ್, ಇತರೆ ಸಿಬ್ಬಂದಿಗಳು ಹಾಜರಿದ್ದರು.