Bahujana Samaj Party ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ನಡೆಸುವ ಹಂತಕರ ವಿರುದ್ಧ ರಾಜ್ಯಸರ್ಕಾರ ಕಠಿಣ ಕ್ರಮ ಕೈಗೊಂಡು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಒತ್ತಾಯಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಭ್ರೂಣಲಿಂಗ ಪತ್ತೆ ಮಾಡುವುದು ನಿಷೇಧ ವಿದ್ದರೂ ಕೂಡಾ ಮಂಡ್ಯ, ಬೆಂಗಳೂರು, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ ಗರ್ಭಪತ್ತೆ ಮಾಡಿ ಹೆಣ್ಣು ಮಗುವಿನ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಗರ್ಭದಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿನಲ್ಲಿ ನಿಷೇಧವಿದ್ದರೂ ಕೂಡಾ ಭೂಗತವಾಗಿ ಹೀನ ಕೃತ್ಯವೆಸಗಿರುವ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಜೊತೆಗೆ ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತೀಯ ಸಂಸ್ಸೃತಿಯಲ್ಲಿ ಹೆಣ್ಣನ್ನು ದೇವತೆಯೆಂದು ಪೂಜಿಸುತ್ತೇವೆ. ಇಂತಹ ಪುಣ್ಯಭೂಮಿಯಲ್ಲಿ ಕೆಲವರು ಹಣದ ಆಸೆಗಾಗಿ ಈ ನೆಲದ ಸಂಸ್ಕಾರವನ್ನು ಮೀರಿ, ಕಾನೂನನ್ನು ಗಾಳಿಗೆ ತೂರಿ ನೂರಾರು ಹೆಣ್ಣುಮಗು ವನ್ನು ಹತ್ಯೆ ಮಾಡಿರುವುದು ಸಮಾಜದಲ್ಲಿ ಭಯವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಹೆಣ್ಣಿಲ್ಲದೇ ಮಾನವ ಜನ್ಮ ಸಾಧ್ಯವೇ. ಗಂಡಿನ ಇಂತಹ ಹೀನ ಕೃತ್ಯದಿಂದ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪ್ರಸ್ತುತ ಎಲ್ಲಾ ರಂಗದಲ್ಲೂ ಅಭೂತಪೂರ್ವವಾಗಿ ಸಾಧನೆ ಮಾಡಿರುವ ಹೆಣ್ಣು ದೇಶಕ್ಕೆ ಮಾದರಿಯಾಗಿದ್ದು ಅಸಡ್ಡೆ ತೋರಿಸುವ ಸಾಂಪ್ರದಾಯಿಕ ವ್ಯವಸ್ಥೆ ಕಾರಣವಾಗಿದೆ ಎಂದಿದ್ದಾರೆ.
Bahujana Samaj Party ಮುಂದಿನ ದಿನಗಳಲ್ಲಿ ಭ್ರೂಣಲಿಂಗಪತ್ತೆ ಪ್ರಕರಣಗಳು ಮರುಕಳಿಸದಂತೆ ಭ್ರೂಣಹತ್ಯೆ ನಿಷೇಧ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು. ಹೆಣ್ಣುಮಗು ಹತ್ಯೆ ಪ್ರಕರಣದಲ್ಲಿ ತೊಡಗುವ ದಂಪತಿಗಳು ಹಾಗೂ ಇವರಿಗೆ ಸಹಕರಿ ಸುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.