Sankara Eye Hospital Shimoga ಕಣ್ಣುಗಳು ಮನುಷ್ಯನ ದೇಹದ ಪ್ರಮುಖ ಅಂಗ ಆಗಿದ್ದು, ಸಕಾಲದಲ್ಲಿ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ. ವರ್ಷಾ ಅಭಿಪ್ರಾಯಪಟ್ಟರು.
ಕಸ್ತೂರ ಬಾ ಬಾಲಿಕಾ ಪದವಿಪೂರ್ವ ಕಾಲೇಜು ಹಾಗೂ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ನೇತ್ರ ತಪಾಸಣಾ ಹಾಗೂ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಣ್ಣಿನಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕಣ್ಣು ಸೂಕ್ಷ್ಮ ಭಾಗ ಸಹ ಆಗಿರುವುದರಿಂದ ಎಚ್ಚರಿಕೆ ವಹಿಸಬೇಕು. ಮಕ್ಕಳು ಬಾಲ್ಯದಲ್ಲೇ ತಪಾಸಣೆ ನಡೆಸುವ ಜೊತೆಯಲ್ಲಿ ಕಾಲ ಕಾಲಕ್ಕೆ ಪರೀಕ್ಷೆ ನಡೆಸಬೇಕು. ಸಮಸ್ಯೆಗಳಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಇತ್ತೀಚೆಗೆ ಗ್ಲುಕೋಮಾ ಕಣ್ಣಿನ ಕಾಯಿಲೆ ಹೆಚ್ಚಾಗುತ್ತಿದ್ದು, ತುಂಬಾ ಆಘಾತಕಾರಿಯಾಗಿದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಸತೀಶ್ ಚಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರೋಗ್ಯದ ಬಗ್ಗೆ ಅರಿವು ಕಡಿಮೆ ಇದ್ದು, ಮಕ್ಕಳು ಮೊಬೈಲ್, ಕಂಪ್ಯೂಟರ್ ಹೆಚ್ಚು ಬಳಸುವುದರಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತದೆ. ಪೋಷಕರು ಗಮನ ವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯ ಗವರ್ನರ್ ಜಿ.ವಿಜಯ್‌ಕುಮಾರ್, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಇಂತಹ ಶಿಬಿರಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
Sankara Eye Hospital Shimoga ಶಿಬಿರ ಅಧಿಕಾರಿ ರಾಘವೇಂದ್ರ ಡಿಎಚ್, ಸಹ ಶಿಬಿರಾಧಿಕಾರಿ ಪ್ರವೀಣ್, ಲಕ್ಷ್ಮೀ, ಹಾರೋಬೆನವಳ್ಳಿ ಗ್ರಾಮದ ಮುಖಂಡರಾದ ರಾಘವೇಂದ್ರ, ಸೀತಾರಾಮ ಆಂಜನೇಯ ದೇವಸ್ಥಾನದ ಅಧ್ಯಕ್ಷ ಸುರೇಶ್, ಎಲ್ಲ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.