B. Y. Raghavendra ಪ್ರಾಮಾಣಿಕವಾಗಿ ಶುದ್ಧ ಹಸ್ತದಿಂದ ಆಡಳಿತ ನಡೆಸಿದಾಗ ಬ್ಯಾಂಕ್ ನ ಅಭಿವೃದ್ಧಿ ಹಾಗೂ ಏಳಿಗೆ ಸಾಧ್ಯ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದರು.
ಶಿರಾಳಕೊಪ್ಪದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನ 111 ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿರಾಳಕೊಪ್ಪ ಈ ಭಾಗದಲ್ಲಿ ಬೆಳೆದ ಈ ಬ್ಯಾಂಕ್ ಜಿಲ್ಲೆಯ ಅತ್ಯಂತ ಶ್ರೇಷ್ಟ ಮಟ್ಟದ ಆಡಳಿತ ನೀಡುವ ಸಂಸ್ಥೆಯಾಗಿದ್ದು, ಆಡಳಿತ ಮಂಡಳಿ ಹಾಗೂ ಸದಸ್ಯರ ಶ್ರಮದಿಂದ ಸಾಕಷ್ಟು ನೆರವಿನ ಹೊಳೆ ಹರಿಸುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಶತಮಾನ ಪೂರೈಸಿದ ಸವಿನೆನಪಿಗಾಗಿ 4500 ಸದಸ್ಯರುಗಳಿಗೆ ಬೆಳ್ಳಿ ನಾಣ್ಯ ಕೊಡುಗೆ ನೀಡಲಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಣ್ಯವನ್ನು ಅನಾವರಣಗೊಳಿಸಿದರು.
111 ವರ್ಷಗಳಿಂದ ಈ ಬ್ಯಾಂಕ್ ಸಹಕಾರಿ ವ್ಯವಸ್ಥೆಯ ನಡುವೆ ಬೆಳೆಯುತ್ತಾ ಇಲ್ಲಿನ ಸಾವಿರಾರು ಜನರಿಗೆ ಸಾಲ ಸೌಲಭ್ಯ ನೀಡುತ್ತಾ ನೆರವು ನೀಡುವ ಪ್ರಮುಖ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರನ್ನು ಅಭಿನಂದಿಸುವುದಾಗಿ ಯಡಿಯೂರಪ್ಪ ಅವರು ತಿಳಿಸಿದರು.
ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶಿರಾಳಕೊಪ್ಪದ ಮ ನಿ ಪ್ರ ಸಿದ್ಧೇಶ್ವರ ಸ್ವಾಮೀಜಿಯವರು ಈ ಬ್ಯಾಂಕ್ ಇನ್ನಷ್ಟು ಬೆಳೆದು ಎಲ್ಲರ ಆರ್ಥಿಕ ಗುಣಮಟ್ಟವನ್ನು ಉಳಿಸಿ ಬೆಳಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕುಪ್ಪೇಲೂರು ವೇದಮೂರ್ತಿ ಅವರು ಇಂತಹದೊಂದು ಐತಿಹಾಸಿಕ ದಿನದಲ್ಲಿ ಅಧ್ಯಕ್ಷನಾಗಿ ಆಚರಿಸುವ ಅದೃಷ್ಟ ನೀಡಿದ ಆಡಳಿತ ಮಂಡಳಿ ಹಾಗೂ ಸದಸ್ಯರಿಗೆ ಅಭಿನಂದಿಸಿದರು.
ಶತಮಾನ ಪೂರೈಸಿದ ಜಿಲ್ಲೆಯ ಎರಡನೇ ಬ್ಯಾಂಕ್ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಮ್ಮದಾಗಿದ್ದು, 140 ಕೋಟಿ ವಹಿವಾಟು ನಡೆಸುತ್ತಿದೆ ಎಂದರು.
ಬ್ಯಾಂಕಿನ ಏಳಿಗೆಗೆ ಸದಾ ಸಕ್ರಿಯವಾಗಿ ಪ್ರಾಮಾಣಿಕ ಮತ್ತು ಶುದ್ಧ ಹಸ್ತದಿಂದ ಕೆಲಸ ಮಾಡುತ್ತೇನೆ. ಇದಕ್ಕೆ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ನ ಉದ್ಯೋಗಿಗಳು ಜೊತೆಯಾಗಿದ್ದಾರೆ ಎಂದು ತಿಳಿಸಿದರು.
B. Y. Raghavendra ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಪದಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಮತ್ತು 4000 ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.