Chikkamagaluru News ಚಿಕ್ಕಮಗಳೂರು, ತಾಲ್ಲೂಕಿನ ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಸಿ. ಯೋಗೀಶ್ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ಅವರಿಗೆ ನಿಶ್ಚಳ ಬಹುಮತ ಸೂಚಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶಿವಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿ ಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯವನ್ನು ಸಕಾಲ ಒದಗಿಸುವ ಮೂಲಕ ಸೇವಾಮನೋಭಾವ ಮಾದರಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಅಧಿಕಾರ ಎಂಬುದು ಹುದ್ದೆಯಲ್ಲ, ಅದೊಂದು ಜವಾಬ್ದಾರಿ. ಅರಿತುಕೊಂಡು ಸಾರ್ವಜನಿಕ ಸೇವೆ ಮಾಡು ವವರಿಗೆ ಉತ್ತಮ ಅವಕಾಶ ಇದಾಗಿದೆ. ಯೋಗೀಶ್ ಅವರು ಕೂಡಾ ಸಾರ್ವಜನಿಕ ವಲಯದಲ್ಲಿ ಅನೇಕ ವರ್ಷ ಗಳಿಂದ ಗುರುತಿಸಿಕೊಂಡಿದ್ದು ತಮ್ಮ ಅಧಿಕಾರವನ್ನು ಗ್ರಾಮಸ್ಥರ ಸಕ್ರಿಯ ಕೆಲಸಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಳಸಾಪುರ ವ್ಯಾಪ್ತಿಯು ಬಯಲುಸೀಮೆ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರು ಮೊದಲು ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಬೇಕು. ಜೊತೆಗೆ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಜಾತಿ ತಾರತಮ್ಯವೆಸಗದೇ ಸಮರ್ಪಕವಾಗಿ ಒದಗಿಸಿಕೊಡಬೇಕು ಎಂದರು.
ನೂತನ ಗ್ರಾ.ಪಂ. ಅಧ್ಯಕ್ಷ ಡಿ.ಸಿ. ಯೋಗೀಶ್ ಮಾತನಾಡಿ ದೊರೆತಿರುವ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಸಂಪೂರ್ಣವಾಗಿ ಗ್ರಾಮಸ್ಥರ ಒಳಿತಿಗೆ ಪೂರಕವಾಗಿ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನ ಮತ್ತು ಪಂಚಾಯಿತಿ ಸದಸ್ಯರ ಸಹಕಾರದ ಮೂಲಕ ಕಾರ್ಯನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಡಿ.ಕೆ.ಚಂದ್ರೇಗೌಡ ಮಾತನಾಡಿ ಅಧ್ಯಕ್ಷರಿಗೆ ಅಧಿಕಾರ ಮುಖ್ಯವಲ್ಲ. ಅನೇಕ ಸವಾಲು ಗಳು ಎದುರಾಗುವ ಹಿನ್ನೆಲೆಯಲ್ಲಿ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವುದನ್ನು ರೂಢಿಸಿಕೊಂಡಾಗ ಮಾತ್ರ ಪಂಚಾಯಿತಿಯನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
Chikkamagaluru News ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಶಿವರತ್ನ, ಸದಸ್ಯರುಗಳಾದ ಕೆ.ಹೆಚ್.ರಾಧ, ಗೌಸ್‌ಖಾನ್, ರುಕ್ಮಿಣಿ, ಮಂಜುಳಾ, ಕೆ.ಎಸ್.ವೆಂಕಟೇಶ್, ಕೆ.ಸಿ.ಚಂದ್ರಶೇಖರ್, ಕೆ.ಎಸ್.ಶ್ರೀಧರ್, ಕೆ.ಸಿ.ದೇವರಾಜ್, ನಾಗೇಗೌಡ, ಗೌರಮ್ಮ, ಲಕ್ಷ್ಮಮ್ಮ, ಮಾಜಿ ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ, ಈಶ್ವರಹಳ್ಳಿ ಗ್ರಾ.ಪಂ. ಸದಸ್ಯರಾದ ಮಧು, ಯೋಗೀಶ್, ಬೆಳವಾಡಿ ಗ್ರಾ.ಪಂ. ಅಧ್ಯಕ್ಷ ಭಾಗ್ಯಚಂದ್ರಶೇಖರ್, ಕಾಂಗ್ರೆಸ್ ಲಕ್ಯಾ ಹೋಬಳೀ ಅಧ್ಯಕ್ಷ ಶಂಕರ್ ನಾಯ್ಕ್, ಪಿಡಿಓ ಎ.ಆರ್.ಜಗದೀಶ್ ಗ್ರಾಮಸ್ಥರು ಉಪಸ್ಥಿತರಿದ್ದರು.