Samanvaya Trust ಸಮಾಜದ ಒಳಿತಿಗೆ ಹಾಗೂ ಉತ್ತಮ ಯುವ ಸಮೂಹ ನಿರ್ಮಾಣ ಮಾಡಲು ಸಲ್ಲಿಸುವ ಸೇವೆಯು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಹೊಸನಗರ ಮೂಲೆಗದ್ದೆ ಸದಾಶಿವಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಏರ್ ಪೋರ್ಟ್ ರಸ್ತೆಯಲ್ಲಿರುವ ಪೋದಾರ್ ಶಾಲೆಯ ಸಮೀಪದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿರ್ಮಿಸಿರುವ ಅಧ್ಯಯನ ಕೇಂದ್ರ “ಕೆ.ಎ.ದಯಾನಂದ ಐಎಎಸ್ ವಾಚನಾಲಯ” ಲೋಕಾರ್ಫಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಿಸ್ವಾರ್ಥ ಮನೋಭಾವದಿಂದ ಯುವಸಮೂಹದಲ್ಲಿ ಪ್ರೇರಣೆ ತುಂಬುವ ಕಾರ್ಯ ನಡೆಸುತ್ತಿದ್ದು, ಸಮಾಜದ ಸದೃಢ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವ ಶಕ್ತಿಯಾಗಿ ಯುವಜನರನ್ನು ಸಿದ್ಧಪಡಿಸುವ ಕಾರ್ಯ ಅಧ್ಯಯನ ಕೇಂದ್ರದಿಂದ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಶ್ರೀ ಅರ್ಜುನ ಅವಧೂತ ಮಹರಾಜರು ಮಾತನಾಡಿ, ತಂದೆ ತಾಯಿಯರ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ವ್ಯಕ್ತಿ ಮಾಡಬೇಕಾದ ಪುಣ್ಯದ ಕೆಲಸ ಹಾಗೂ ಸಂಕಷ್ಟದಲ್ಲಿ ಇರುವ ಜನರಿಗೆ ನೆರವು ಒದಗಿಸುವ ಕೆಲಸ ಮಾಡಬೇಕು. ಸಮಾಜಕ್ಕಾಗಿಯೇ ದುಡಿಯುವ ಮೂಲಕ ಸಾವಿರಾರು ಜನರಿಗೆ ಪ್ರೇರಣಾ ಶಕ್ತಿಯಾಗಿ ಸಮನ್ವಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಮನ್ವಯ ಟ್ರಸ್ಟ್ ದಶಕಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಇದೀಗ ಶಿವಮೊಗ್ಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಲು ಮುಂದಾಗಿದೆ. ಅತ್ಯಂತ ಯಶಸ್ವಿಯಾಗಿ ಸೇವಾ ಕಾರ್ಯ ಮುಂದುವರೆಯಬೇಕು ಎಂದು ಆಶಿಸಿದರು.
ಸಮನ್ವಯ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ನೂತನ ಕಟ್ಟಡದಲ್ಲಿ “ಕೆ.ಎ.ದಯಾನಂದ ಐಎಎಸ್, ರಾಜ್ಯದ ಮೊದಲ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯ”, ಅಲ್ಲಮ ಪ್ರಭು ಜ್ಞಾನ ಮಂದಿರ, ಅತಿಥಿಗೃಹ, ಕುವೆಂಪು ಅಂಗಳ ಹಾಗೂ ಸಮನ್ವಯ ಕಾರ್ಯಾಲಯ ಕೂಡ ಕಾರ್ಯ ನಿರ್ವಹಿಸಲಿದೆ.
Samanvaya Trust ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಡಾ. ಸಿದ್ಧಲಿಂಗ ಸ್ವಾಮೀಜಿ, ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ನಟಿ ಪ್ರೇಮಾ ಹಾಜರಿದ್ದರು.
ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಕೆ.ಎಂ.ಗಿರಿಜಾದೇವಿ, ಟ್ರಸ್ಟಿ ವಿಕ್ರಂ.ಎ.ವಿ, ನಿರ್ದೇಶಕ ಸಮನ್ವಯ ಕಾಶಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್, ಪ್ರಮುಖರಾದ ಆರ್.ಎಂ.ಮಂಜುನಾಥ್‌ಗೌಡ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಎನ್.ಗೋಪಿನಾಥ್, ಬಿ.ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು