Sharada Puryanaik ಪೋಷಕರು ಹಾಗೂ ಶಿಕ್ಷಕರ ಸಹಭಾಗಿತ್ವದಿಂದಾಗಿ ಶಾಲೆ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗ ತಾಲ್ಲೂಕಿನ ಕಾಚಿನಕಟ್ಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ, ನಲಿಕಲಿ ಇತರೆ ಸರ್ಕಾರದ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ. ಆದರೆ ಕೆಲವು ಶಾಲೆಗಳು ಮಾತ್ರ ಸರ್ಕಾರದ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಎಲ್ಲಾ ಶಾಲೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ಎಲ್ಲರೊಟ್ಟಿಗೆ ನಿರ್ಭೀತವಾಗಿ ಬೆರೆಯುವ ಮನಸ್ಥಿತಿ ಬೆಳೆಯಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿ ಹಾಗಾಗಿ ಪ್ರತಿಯೊಬ್ಬ ಮಗುವೂ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಹೊರತಾಗಿಲ್ಲ. ಖಾಸಗಿ ಶಾಲೆಗಳನ್ನು ಮೀರಿಸುವ ವಾತಾವರಣ ಹಾಗೂ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಇರುವ ಕಾರಣ ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಉದಾಸೀನ ಬೆಳೆಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ಮಕ್ಕಳು ಪೋಷಕರಿಗಿಂತ ಹೆಚ್ಚಾಗಿ ಶಿಕ್ಷಕರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವ ಶಿಕ್ಷಕರು ಪಠ್ಯದ ಜೊತೆಗೆ ಪಠ್ಯೇತರ ಶಿಕ್ಷಣದ ಕಡೆಗೂ ಮಕ್ಕಳಿಗೆ ಆಸಕ್ತಿ ಬೆಳೆಸಬೇಕು ಎಂದು ತಿಳಿಸಿದ್ದಾರೆ.
Sharada Puryanaik ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಬಿಇಒ ನಾಗರಾಜ್, ಗ್ರಾ.ಪಂ ಅಧ್ಯಕ್ಷೆ ಗೀತಾ ಚಂದ್ರಶೇಖರ್, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ವಿಶ್ವನಾಥ್.ಕೆ.ಎಸ್, ಮುಖ್ಯ ಶಿಕ್ಷಕ ಅಶೋಕ್ ಕುಮಾರ್, ಪ್ರಾಂಶುಪಾಲ ಪಂಡರಿನಾಥ್ ಪ್ರಮುಖರಾದ ಲೋಕೇಶಪ್ಪ, ರುದ್ರಪ್ಪ, ನಿರಂಜನಮೂರ್ತಿ, ದಿನೇಶ್, ರಾಘವೇಂದ್ರ, ಕಾಳನಾಯ್ಕ್, ನಿಂಗಪ್ಪ, ಬಸವರಾಜ್ ಮಠದ್, ಚೆನ್ನಮಲ್ಲಪ್ಪ, ಶಿವಪ್ಪ ಸಂಗಣ್ಣನವರ್, ನಾಗೇಶ್, ಜನಾರ್ಧನ್, ವೀರಭದ್ರ, ರೇಣುಕಾ ಮತ್ತಿತರರಿದ್ದರು.