Shimoga District chamber of commerce and Industry ದೇಶಪ್ರೇಮ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ. ದೇಶದ ಐತಿಹಾಸಿಕ ವಿಷಯಗಳ ಬಗ್ಗೆ ಅರಿವು ಬೆಳೆಯುತ್ತದೆ ಎಂದು ಉದ್ಯಮಿ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ ಹೇಳಿದರು.
ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಭದ್ರಾವತಿ ವಾಸು ಸಾರಥ್ಯದ ತಂಡದ ವತಿಯಿಂದ ಭಾವಗಾನ 7ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ದೇಶ ಭಕ್ತಿಗೀತೆಗಳ ಸಮೂಹ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಯುವ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸುವ ಆಶಯದಿಂದ ಇಂತಹ ಸ್ಪರ್ಧೆಗಳು ಮಹತ್ತರ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಗಾಯನದಲ್ಲಿ ಆಸಕ್ತಿ ಇರುವ ಪ್ರತಿಭಾನ್ವಿತರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಎಲ್ಲ ಸ್ಪರ್ಧಿಗಳಿಗೂ ಶುಭವಾಗಲಿ ಎಂದು ಹಾರೈಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸ್ಪರ್ಧಾ ಕಾರ್ಯಕ್ರಮಗಳು ಯುವ ಮತ್ತು ಹೊಸ ಗಾಯಕರಿಗೆ ವೇದಿಕೆ ಕಲ್ಪಿಸಿಕೊಡುವ ಕೆಲಸ ಮಾಡುತ್ತದೆ. ಗಾಯನದಲ್ಲಿ ಪರಿಣಿತಿ ಹೊಂದಲು ತೀರ್ಪುಗಾರರು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಗಾಯನ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಲಿಕಾರ್ಥಿಗಳು ಗುರುಗಳ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.
Shimoga District chamber of commerce and Industry ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾವಗಾನ ತಂಡದ ಅಧ್ಯಕ್ಷ ಭದ್ರಾವತಿ ವಾಸು ಮಾತನಾಡಿ, ಸಂಸ್ಥೆಯ 7ನೇ ವಾರ್ಷಿಕೋತ್ಸವ ಪ್ರಯುಕ್ತ ದೇಶಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆ ಹಮ್ಮಿಕೊಂಡಿದ್ದು, ಪ್ರತಿ ವರ್ಷವು ಸ್ಪರ್ಧೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸ್ಪರ್ಧೆಯಲ್ಲಿ ವಿಜೇತರಿಗೆ 3000 ರೂ. ಪ್ರಥಮ ಬಹುಮಾನ, 2000 ರೂ. ದ್ವಿತೀಯ ಬಹುಮಾನ ಹಾಗೂ 1000 ರೂ. ತೃತೀಯ ಬಹುಮಾನ ನೀಡಲಾಗುತ್ತಿದೆ. ವೀಣಾ, ಅನೀತಾ ಮತ್ತಿತರರು ಉಪಸ್ಥಿತರಿದ್ದರು.