Dr. Selvamani ಶಿವಮೊಗ್ಗ ನಗರದ ಮಲಿನ ನೀರು ತುಂಗಾನದಿಯ ಇಕ್ಕೆಲಗಳ ಅನೇಕ ಕಡೆಗಳಲ್ಲಿ ನದಿಗೆ ಸೇರಿ ಕಲುಷಿತಗೊಳ್ಳುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಸಂಬoಧಿಸಿದ ಇಲಾಖೆಗಳ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ, ಮಲಿನ ನೀರು ತುಂಗೆಗೆ ಸೇರದಂತೆ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.
ಅವರು, ತಮ್ಮ ಕಚೇರಿ ಸಭಾಂಗಣದಲ್ಲಿ ತುಂಗಾ ಉಳಿಸಿ ಅಭಿಯಾನದ ಅಧ್ಯಕ್ಷ-ಪದಾಧಿಕಾರಿಗಳು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ತುಂಗಾನದಿ ಕಲುಷಿತಗೊಳ್ಳುತ್ತಿರುವುದನ್ನು ನಿಯಂತ್ರಿಸಿ, ಬೇರೆಡೆಗೆ ತಿರುಗಿಸುವ ಸಂಬoಧ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಲ್ಲದೇ ನಗರದ ಭಾರೀ ಪ್ರಮಾಣದ ಕಸ ಚರಂಡಿಗಳ ಮೂಲಕ ಹೊಳೆಗೆ ಸೇರುತ್ತಿದೆ. ಅಲ್ಲದೇ ಬುದ್ದಿಜೀವಿಗಳೇ ಘನತ್ಯಾಜ್ಯವನ್ನು ನದಿಗೆ ಎಸೆದು ಕಸದಬುಟ್ಟಿಯನ್ನಾಗಿ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದರ ಬಗ್ಗೆ ಪಾಲಿಕೆ ಹಾಗೂ ಸಂಬoಧಿತ ಇಲಾಖೆಗಳ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ಕಳೆದ ಕೆಲವು ತಿಂಗಳುಗಳ ಹಿಂದೆಯೇ ತ್ಯಾಜ್ಯ ನದಿಗೆ ಸೇರುತ್ತಿರುವುದರ ಬಗ್ಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರವೆನಿಸಿದೆ. ಮುಂದಿನ 15 ದಿನಗಳೊಳಗಾಗಿ ಕ್ರಮ ಕೈಗೊಂಡು ವರದಿ ನೀಡಬೇಕು. ತಪ್ಪಿದಲ್ಲಿ ಸಂಬoಧಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ನದಿಗೆ ಹೊಂದಿಕೊoಡoತೆ 19ಕ್ಕೂ ಹೆಚ್ಚಿನ ವೆಟ್‌ವೆಲ್‌ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಮಾರು 10ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ತ್ಯಾಜ್ಯ ಬಿದ್ದಿದೆ ಅಲ್ಲದೇ ಭಾರೀ ಪ್ರಮಾಣದ ಕಳೆ ಬೆಳೆದು ಅನುಪಯುಕ್ತವಾಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಕಾಮಗಾರಿಯೇ ಅಪೂರ್ಣವಾಗಿದೆ ಎಂದು ತುಂಗಾ ಅಭಿಯಾನ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ವೆಟ್‌ವೆಲ್‌ನ ಕಾಮಗಾರಿಗಳನ್ನು ನಿಯಮಿತ ಅವಧಿಯಲ್ಲಿ ಪೂರ್ಣಗೊಳಿಸದಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. ಈ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಲು ಒಳಚರಂಡಿ ಮಂಡಳಿಯ ಅಭಿಯಂತರರು ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ನದಿ ತೀರದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ, ಕಲುಷಿತ ನೀರು ನದಿಗೆ ಸೇರದಂತೆ ಕ್ರಮ ಕೈಗೊಂಡು ವರದಿ ನೀಡಬೇಕು. ನಂತರ ತುಂಗಾ ಅಭಿಯಾನ ಸಮಿತಿಯ ಪದಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಸಂಬ0ಧಿತ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕ್ರಿಯಾಯೋಜನೆಯನ್ನು ರೂಪಿಸಿ ಸಲ್ಲಿಸುವಂತೆ ಅವರು ಸಲಹೆ ನೀಡಿದರು.
Dr. Selvamani ನಗರದ ಆಸ್ಪತ್ರೆಗಳ ಘನತ್ಯಾಜ್ಯವನ್ನು ನದಿಗೆ ಎಸೆದು ಮಲಿನ ಮಾಡುತ್ತಿರುವ ಅನೇಕ ಪ್ರಕರಣಗಳು ಕಂಡುಬರುತ್ತಿವೆ. ಆಸ್ಪತ್ರೆ ತ್ಯಾಜ್ಯವನ್ನು ನದಿಗೆ ಸೇರಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದಲ್ಲದೇ ಅಂತಹ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದರು.
ಶಿವಮೊಗ್ಗ ನಗರದಲ್ಲಿ ಹಾದು ಹೋಗುವ ಪ್ರದೇಶದಲ್ಲಿ ನದಿಯ ಇಕ್ಕೆಲಗಳ ಸ್ಥಿತಿಗತಿಗಳ ಕುರಿತು ಅಭಿಯಾನ ಸಮಿತಿಯ ಪದಾಧಿಕಾರಿಗಳು, ಪಾಲಿಕೆ ಅಭಿಯಂತರರು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಒಂದು ವಾರದೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಭದ್ರಾವತಿಯಲ್ಲಿ ಯುಜಿಡಿ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ಬೇಜವಾಬ್ದಾರಿಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಕೂಡಲೇ ಅವರಿಗೆ ನೋಟೀಸ್ ಜಾರಿಗೊಳಿಸುವಂತೆ ಸೂಚಿಸಿದ ಅವರು, ಶಿವಮೊಗ್ಗದಲ್ಲಿ ಪ್ರತಿ ಮನೆಮನೆಗೆ ಯುಜಿಡಿ ಸಂಪರ್ಕ ಆಗುವಂತೆ ನಿಯೋಜಿತ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಿದರು.
ನದಿಯ ಒಂಬತ್ತು ಕಡೆಗಳಲ್ಲಿ ವೆಟ್‌ವೆಲ್‌ಗಳ ನಿರ್ವಹಣೆ ಸರಿಯಾಗಿರದೆ ಅವ್ಯವಸ್ಥೆಯಿಂದ ಕೂಡಿದೆ. ಅದಕ್ಕೆ ಕಾರಣವಾಗಿರುವ ಸಿಬ್ಬಂಧಿ, ವಿದ್ಯುತ್ ಮತ್ತಿತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವುದಾಗಿ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ತಿಳಿಸಿದರು.
ನಗರದಲ್ಲಿನ ಚಿಕನ್ ಮತ್ತು ಮಟನ್ ಸ್ಟಾಲ್‌ಗಳ ತ್ಯಾಜ್ಯವೂ ನದಿಗೆ ಹಾಗೂ ನಗರದ ಹಲವು ಕಡೆ ಚಾನಲ್‌ಗಳಿಗೆ ಸೇರುತ್ತಿರುವ ಬಗ್ಗೆ ಮಾಹಿತಿ ಇದೆ. ಅದಕ್ಕಾಗಿ ಶೀಘ್ರದಲ್ಲಿ ಮಾಂಸ ಮಾರಾಟಗಾರರ ಸಭೆ ಕರೆದು ಸೂಚನೆ ನೀಡಲಾಗುವುದು. ತ್ಯಾಜ್ಯ ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಲ್ಲದೇ ತುಂಗಾನದಿ ಮಲಿನ ನಿಯಂತ್ರಿಸುವುದರ ಜೊತೆಗೆ ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಅನೇಕ ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಿ, ಸರ್ಕಾರದ ಅನುಮೋದನೆ ಪಡೆದು, ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ನಗರದಲ್ಲಿನ ಸ್ವಚ್ಚತೆ, ಸೌಂದರ್ಯ ಹೆಚ್ಚಾಗಲಿದೆ. ಸಾರ್ವಜನಿಕರೂ ಕೂಡ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ನಗರ ಯೋಜನಾ ನಿರ್ದೇಶಕ ಮನೋಹರ್, ತುಂಗಾ ಅಭಿಯಾನ ಸಮಿತಿ ಸಂಚಾಲಕ ಬಿ.ಎಂ.ಕುಮಾರಸ್ವಾಮಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.