DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಅನೀಮಿಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸುವಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯು ಅನೀಮಿಯ(ರಕ್ತಹೀನತೆ) ಮುಕ್ತ ಪೌಷ್ಠಿಕ ಜಿಲ್ಲೆ, ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಆಚರಣೆ ಹಾಗೂ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕದ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸಕಾಲದಲ್ಲಿ ಅನೀಮಿಯ ತಪಾಸಣೆ ನಡೆಸಿ, ರಕ್ತಹೀನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ, ಅದರ ವಿಧಗಳಲ್ಲಿ ಸಾಮಾನ್ಯದಿಂದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಈ ದಿಸೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿಸಿದಲ್ಲಿ ಫಲಿತಾಂಶ ನಿರಾಶಾದಾಯಕವಾಗಿರಲಿದೆ ಎಂದವರು ನುಡಿದರು.
ಗರ್ಭಿಣ ಸ್ತ್ರೀಯರು, ಹದಿಹರೆಯದ ಗಂಡು/ಹೆಣ್ಣು ಮಕ್ಕಳು, ಎಲ್ಲಾ ಪುರುಷ/ಮಹಿಳೆಯರು, ಮಕ್ಕಳು, ಮತ್ತು ವಿಶೇಷವಾಗಿ ಅಪೌಷ್ಠಿಕ ಮಕ್ಕಳು ತಮ್ಮ ಆರೋಗ್ಯವನ್ನು ತಪಾಸಿಸಿಕೊಂಡು ಸಕಾಲಿಕ ಚಿಕಿತ್ಸೆ ಪಡೆದು, ಉತ್ತಮ ಆರೋಗ್ಯ ಹೊಂದುವಂತೆ ಸೂಚಿಸಿದ ಅವರು, ರಕ್ತಹೀನತೆಯನ್ನು ನಿವಾರಿಸಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣ ಸ್ತ್ರೀಯರಿಗೆ ಪ್ರತಿ ತಿಂಗಳು ರಕ್ತಪರೀಕ್ಷೆ ನಡೆಸಿ, ಸೂಕ್ತ ಚಿಕಿತ್ಸೆ ಮತ್ತು ಅಗತ್ಯವಿದ್ದಲ್ಲಿ ರಕ್ತ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐರನ್‌ಸಿರಪ್, ಫೋಲಿಕ್ ಆಸಿಡ್ ಮತ್ತು ಆಲ್ಬೆಂಡೋಜೋಲ್ ಮಾತ್ರೆಗಳನ್ನು ವಿತರಿಸಲಾಗುವುದು. ಇದು ಮಕ್ಕಳ ಉತ್ತಮ ಆರೋಗ್ಯ ಮತ್ತು ಬೌದ್ಧಿಕ ವಿಕಾಸಕ್ಕೆ ಅನುಕೂಲವಾಗಲಿದೆ. ಎಂದು ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ|| ನಾಗರಾಜ್‌ನಾಯ್ಕ್ ಅವರು ತಿಳಿಸಿದ್ದಾರೆ.
ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಿಗೆ ಸೂಕ್ತ ಪರೀಕ್ಷೆಯೊಂದಿಗೆ ಚಿಕಿತ್ಸೆ ನೀಡಿ, ಪೌಷ್ಠಿಕತೆಯ ಅರಿವು ಮೂಡಿಸಲಾಗುವುದು. ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮತ್ತು ಪ್ರೌಢಶಾಲಾ ಮತ್ತು ಅಂಗನವಾಡಿಗಳ ಅಡಿಯಲ್ಲಿ ಶಾಲೆಗಳಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ರಕ್ತಪರೀಕ್ಷೆ ನಡೆಸಿ, ಅಗತ್ಯ ಔಷಧಗಳನ್ನು, ಜಂತುಹುಳು ನಿವಾರಣೆ ಮಾತ್ರೆಗಳನ್ನು ವಿತರಿಸಲಾಗುವುದು ಎಂದರು.
DC Shivamogga ಅಲ್ಲದೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಮನೆ ಭೇಟಿ ಸಂದರ್ಭದಲ್ಲಿ ಹಾಗೂ ಆರೋಗ್ಯ ಕಾರ್ಯಕ್ರಮಗಳಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಅರಿವು ಜಾಗೃತಿ ಮೂಡಿಸುವುದು, ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ, ಕೈತೊಳೆಯುವ ವಿಧಾನದ ಬಗ್ಗೆ ಹೆಚ್ಚು ಆರೋಗ್ಯ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಕೈ ತೊಳೆಯುವ ವಿಧಾನವನ್ನು ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳು ನಿರಂತರ ಅನುಸರಿಸುವಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಳ್ಳಲಾಗುವ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು, ಯೋಜನೆಗಳು, ಅರಿವು ಕಾರ್ಯಕ್ರಮಗಳ ಯಶಸ್ವಿ ಅನುಷ್ಟಾನಗೊಳಿಸಲು ಆರೋಗ್ಯ ಇಲಾಖಾ ಸಿಬ್ಬಂಧಿಗಳಿಗೆ ಈಗಾಗಲೇ ತರಬೇತಿಗಳನ್ನು ನೀಡಿ ಸಜ್ಜುಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳೀ, ಆರ್.ಸಿ.ಹೆಚ್. ಅಧಿಕಾರಿ ಡಾ|| ನಾಗರಾಜನಾಯ್ಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಭಂಧಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕೈತೊಳೆಯುವ ಕ,ಮದ ಬಿತ್ತಿಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು