Shimoga District Chamber of Commerce & Industry ಎಂಎಸ್‌ಎಂಇ ಉದ್ಯಮಗಳು ದೇಶದ ಜಿಡಿಪಿ, ಉತ್ಪಾದನೆ ಮತ್ತು ರಫ್ತಿಗೆ ಗಣನೀಯ ಕೊಡುಗೆ ನೀಡುವುದರ ಮೂಲಕ ದೇಶದ ಬೆನ್ನೆಲುಬುಗಳಾಗಿವೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಷ್ಟ್ರೀಯ ಸಂಸ್ಥೆಯ ರಾಷ್ಟ್ರೀಯ ಮಹಾನಿರ್ದೇಶಕಿ ಡಾ. ಎಸ್.ಗ್ಲೋರಿ ಸ್ವರೂಪ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಾಧನೆ ಅತಿ ಉತ್ತಮವಾಗಿದೆ. ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ದೇಶದ ಜಿಡಿಪಿಯಲ್ಲಿ ಶೇ. 30 ಕ್ಕೂ ಹೆಚ್ಚು ಮತ್ತು ರಫ್ತಿನಲ್ಲಿ ಶೇ. 40 ರಷ್ಟು ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಸಂಸ್ಥೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಾಮರ್ಥ್ಯ ಹೆಚ್ಚಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ರಾಜ್ಯ ಕೈಗಾರಿಕಾ ಅಧಿಕಾರಿಗಳು ಮತ್ತು ಅಭಿವೃದ್ಧಿ ಅನುಕೂಲ ಅಧಿಕಾರಿಗಳ ಮೂಲಕ ಇತ್ತೀಚಿನ ಬೆಳವಣಿಗೆಗಳ ಬಗ್ಗೆ, ಸರ್ಕಾರದ ಕಾನೂನುಗಳು, ರಫ್ತು ಮಾಡುವ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
150 ಕ್ಕೊ ಹೆಚ್ಚು ದೇಶಗಳಿಗೆ ಅಂತರರಾಷ್ಟ್ರೀಯ ಆವಿಷ್ಕಾರಗಳ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿನಿಧಿಗಳನ್ನು ಕಳಿಸಿದೆ. ರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಉದ್ಯಮದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ನಿರಂತರವಾಗಿ ಮಾಡುತ್ತಿದ್ದು, ಸರಿಯಾದ ಉಪಯೋಗ ಪಡೆದು ದೇಶದ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸಂಸ್ಥೆಯು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಎಲ್ಲಾ ಸಲಹೆ ಮತ್ತು ಸಹಕಾರ ನೀಡಲು ತಯಾರಿದೆ ಎಂದು ಹೇಳಿದರು.
Shimoga District Chamber of Commerce & Industry ಶಿವಮೊಗ್ಗದಲ್ಲಿ ಎಕ್ಸಪೋರ್ಟ್ ಪ್ರಮೋಶನ್ ಫೆಸಿಲಿಟೇಷನ್ ಸೆಂಟರ್ ಹಾಗೂ ಐಪಿ ಫೆಸಿಲಿಟೇಷನ್ ಸೆಂಟರ್ ಸ್ಥಾಪನೆಗೆ ಸಹಕರಿಸುವುದಾಗಿ ತಿಳಿಸಿದರು.
ರಾಷ್ಟ್ರೀಯ ಕೃಷಿ ಅಭಿವೃದ್ಧಿ ಮತ್ತು ವಿಸ್ತರಣಾ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಚಂದ್ರಶೇಖರ್, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕೃಷಿ ಅಭಿವೃದ್ಧಿ ಮತ್ತು ಹಲವಾರು ಕೃಷಿಯಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿನ ಹೊಸ ಆವಿಷ್ಕಾರಗಳಿಗೆ ಮತ್ತು ನವೀನ ಪ್ರಯತ್ನಗಳಿಗೆ ಸಂಸ್ಥೆಯಿಂದ ಕೊಡುವ 25 ಲಕ್ಷ ರೂ.ಗಳ ಪ್ರೋತ್ಸಾಹ ಧನ ಹಾಗು ಆರ್ಥಿಕ ಬೆಂಬಲಗಳ ಬಗ್ಗೆ ತಿಳಿಸಿದರು. ಈ ಸಂಬಂಧ 10 ಕೋಟಿ ರೂ.ಗೂ ಹೆಚ್ಚು ಪ್ರೋತ್ಸಾಹ ಧನವನ್ನು 2000ಕ್ಕೂ ಹೆಚ್ಚು ಕೃಷಿ ಸ್ಟಾರ್ಟ್ಅಪ್‌ಗಳು ಪಡೆದಿರುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಕೃಷಿಗೆ ಮತ್ತು ಕೃಷಿಯಾಧರಿತ ಉದ್ಯಮಗಳಿಗೆ ಪೂರಕ ವಾತಾವರಣ ಇರುವುದರಿಂದ ಜಿಲ್ಲಾ ವಾಣಿಜ್ಯ ಸಂಘದೊAದಿಗೆ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ ಕುಮಾರ್, ಸಂಘದ ಸದಸ್ಯ ರಾಕೇಶ್ ಗೌಡ, ಕೆನರಾ ಬ್ಯಾಂಕ್ ಮ್ಯಾನೇಜರ್ ಕುಮಾರಿ, ಬಳ್ಳಾರಿ ಹಾಗೂ ಇತರರು ಉಪಸ್ಥಿತರಿದ್ದರು.