Chamber Of Commerce ಚಾರಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಜತೆಯಲ್ಲಿ ಶಿವಮೊಗ್ಗ ಜನತೆ ಹೆಚ್ಚು ಚಾರಣ ಪ್ರವಾಸ ಕೈಗೊಳ್ಳುವಲ್ಲಿ ಅ.ನಾ.ವಿಜಯೇಂದ್ರರಾವ್ ಅವರು ಸಂಘಟನಾತ್ಮಕವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಸಾಹಸಿ ಅ.ನಾ.ವಿಜಯೇಂದ್ರರಾವ್ ಅವರನ್ನು ಸನ್ಮಾನಿಸಿ ಮಾತನಾಡಿ, ವಿಜಯೇಂದ್ರ ಅವರು ಶಿವಮೊಗ್ಗದ ಸಾಂಸ್ಕೃತಿಕ ರಾಯಭಾರಿ ಆಗಿದ್ದು, ಈ ವಯಸ್ಸಿನಲ್ಲಿ ಪದವಿ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ಪೂರೈಸಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ತರುಣೋದಯ ಸಾಹಸ ಮತ್ತು ಸಂಸ್ಕೃತಿ ಸಂಸ್ಥೆ, ಯೂತ್ ಹಾಸ್ಟೆಲ್ಸ್, ನನ್ನ ಕನಸಿನ ಶಿವಮೊಗ್ಗ, ಸೈಕಲ್ ಕ್ಲಬ್, ಬೋಟ್ ಕ್ಲಬ್, ಬೈಕ್ ಕ್ಲಬ್, ಸಂಸ್ಕೃತ ಪಾಠಶಾಲೆ ಹೀಗೆ ಹಲವಾರು ಸಂಘಟನೆ ಹುಟ್ಟು ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಂದ ಪ್ರಭಾವಿತರಾಗಿ ಅನೇಕ ಪ್ರತಿಭಾವಂತರು ನಗರದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಇವರು ಸ್ವತಃ ಹಲವಾರು ಬಾರಿ ತುಂಗಾ ನದಿ ತುಂಬಿದಾಗ ರಾಜಕಾರಣಿ, ಹಿರಿಯ ಅಧಿಕಾರಿ, ಪತ್ರಿಕಾಪ್ರತಿನಿಧಿಗಳನ್ನು ಹುರಿದುಂಬಿಸಿ ದೋಣಿಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದರು.
ಅನೇಕ ಬಾರಿ ಹಿಮಾಲಯ ಚಾರಣ ಮಾಡಿ ಸಾವಿರಾರು ಚಾರಣಿಗರನ್ನು ಕರೆದು ಕೊಂಡು ಹೋಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸಂಸ್ಕೃತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಈ ಇಳಿವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ಪದವಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆಯನ್ನು ಬರೆದು ಉನ್ನತ ಸ್ಥಾನದಲ್ಲಿ ಪದವಿ ಪೂರೈಸಿರುತ್ತಾರೆ. ಆದ್ದರಿಂದ ಎಲ್ಲಾ ಸಂಘಟನೆ ಪರವಾಗಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
Chamber Of Commerce ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ವತಿಯಿಂದ ಸನ್ಮಾನಿಸಲಾಯಿತು. ನನ್ನ ಕನಸಿನ ಶಿವಮೊಗ್ಗ ವತಿಯಿಂದಲೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ಸ್ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ತರುಣೋದಯ ಘಟಕದ ಚೇರ‍್ಮನ್ ಎಸ್.ಎಸ್.ವಾಗೇಶ್, ಕಾರ್ಯದರ್ಶಿ ಸುರೇಶ್ ಕುಮಾರ್, ಸಾಗರದ ಸತೀಶ್ ಕುಮಾರ್, ಮೈಸೂರಿನ ರವಿಕುಮಾರ್, ಕನಕಪುರದ ಪಾಪರಾಜು , ಪುರುಷೋತ್ತಮ್, ಸುಬ್ಬರಾವ್, ಮುಂತಾದವರು ಇದ್ದರು.