Sunday, November 24, 2024
Sunday, November 24, 2024

ಸಾವಿನ ನಂತರವೂ ಬರುವವರ್ಯಾರು ???

Date:

ಕರ್ನಾಟಕದ ಒಂದು ಮೂಲೆಯಲ್ಲಿರೋ ಹಳ್ಳಿ. ಅಲ್ಲಿ ನೂತನ್ ಅನ್ನೋ ಒಬ್ಬ ಹುಡ್ಗ ಇದ್ದ. ಹೆಂಗೋ ಕಷ್ಟ ಪಟ್ಟು ಸೆಕೆಂಡ್ ಪಿಯುಸಿ ಜಸ್ಟ್ ಪಾಸಾಗಿದ್ದ. ಆದ್ರೆ ಕೆಲ್ಸ ಹುಡುಕ್ಕೊಂಡು ಬೀದಿ-ಬೀದಿ ಅಲಿತಿರ್ಲಿಲ್ಲ. ಅವ್ನಿಗೆ ಅಷ್ಟ್ ಸಣ್ ವಯಸ್ಸಿಗೆ ಡ್ರೈವಿಂಗಿಂದ-ಎಲೆಕ್ಟ್ರಿಕ್ ಕೆಲ್ಸದ ತನಕ ಎಲ್ಲಾ ಬರ್ತಿತ್ತು. ಒಟ್ನಲ್ಲಿ ತನ್ನ ಜೀವನನ ಹೆಂಗ್ ಮಾಡ್ಬೇಕು ಅಂತಾ ಅವ್ನಿಗ್ ಗೊತ್ತಿತ್ತು. ಹೀಗಾಗಿ ಅವ್ನು ಕಡಿಮೆ ಓದಿದ್ರು ಕೆಲ್ಸಕ್ಕೆ ಬರ ಇರ್ಲಿಲ್ಲ. ಡ್ರೈವಿಂಗ್ ಮಾಡ್ತಿದ್ದ, ಸಣ್ಣ-ಪುಟ್ಟ ವೈರಿಂಗ್, ಎಲೆಕ್ಟ್ರಿಷಿಯನ್ ಕೆಲ್ಸ, ಮೆಕಾನಿಕ್ ಕೆಲ್ಸ, ಗಾರೆ ಕೆಲ್ಸ, ಹಮಾಲಿ ಕೆಲ್ಸ, ನ್ಯೂಸ್ ಪೇಪರ್ ಹಾಕೋದು… ಹಿಂಗೇ ಎಲ್ಲಾ ತರದ್ ಕೆಲ್ಸನೂ ಮಾಡಿ ಕೈ ತುಂಬಾ ದುಡ್ಡ್ ದುಡಿತಿದ್ದ. ಆದ್ರೆ, ಅವ್ನಿಗೆ ಸಣ್ ವಯಸ್ಸಿಂದ ಬಲಗಾಲು ಸ್ವಲ್ಪ ಆಗಾಗ ನೋವ್ ಬರ್ತಿತ್ತು ಅಷ್ಟೇ.

ಹಿಂಗೆ ಒಂದಷ್ಟ್ ವರ್ಷ ಆಯ್ತು ನೂತನ್ ಗೆ ಮದುವೇನೂ ಆಯ್ತು, ಮಗುನೂ ಹುಟ್ತು, ಒಂದ್ ಮನೆನೂ ಕಟ್ಟಿದ, ಇನ್ನೇನು ಲೈಫು ಸೇಟ್ಲಾಯ್ತು ಅನ್ನೋ ಅಷ್ಟ್ರಲ್ಲಿ ಅವ್ನಿಗೆ ಡೈಲಿ ತಲೆನೋವ್ ಬರೋಕೆ ಶುರುವಾಯ್ತು. ಮೊದಮೊದಲು ಸಂಜೆ ಮೇಲೆ ಬರ್ತಿದ್ದ ತಲೆನೋವು ಒಂದ್ ತಿಂಗ್ಳು ಆಗೋ ಅಷ್ಟ್ರಲ್ಲಿ ಇಡೀ ದಿನ ಬರೋಕೆ ಶುರುವಾಯ್ತು. ಮೂರ್ ತಿಂಗ್ಳು ಆಗೋ ಅಷ್ಟ್ರಲ್ಲಿ ಡ್ರೈವಿಂಗ್ ಮಾಡೋಕ್ಕೂ ಕಷ್ಟ ಆಗೋ ಅಷ್ಟು ತಲೆನೋವ್ ಜಾಸ್ತಿ ಆಗೋಯ್ತು ನೂತನ್ ಗೆ.

ಸರಿ, ಇನ್ನೂ ಈ ತಲೆನೋವು ಹೋಗಂಗೆ ಕಾಣಲ್ಲ ಅಂತಾ ನೂತನ್ ಡಾಕ್ಟರ್ ಹತ್ರ ಹೋಗ್ತಾನೆ. ಡಾಕ್ಟರ್ ಕೂಡ ಚೆಕಪ್ ಮಾಡಿ ಮಾತ್ರೆ ಕೊಡ್ತಾರೆ. ಆದ್ರೆ ನೂತನ್ ಗೆ ಮಾತ್ರ ಮಾತ್ರೆ ತಗೊಂಡ್ರು ತಲೆನೋವ್ ಕಡಿಮೆನೇ ಆಗಲ್ಲ. ಪದೇ-ಪದೇ ಡಾಕ್ಟರ್ ಹತ್ರ ಹೋಗ್ತಾನೆ ಇರ್ತಾನೆ. ಆಗ ಡಾಕ್ಟರ್ ಕೂಡ “ಇದೇನು ಅಂತಾ ನಂಗೆ ಗೊತ್ತಾಗ್ತಿಲ್ಲ, ಸಿಟಿಗೆ ಹೋಗಿ ದೊಡ್ಡಾಸ್ಪತ್ರೆಗೆ ತೋರ್ಸಪ್ಪ” ಅಂತಾರೆ. ಸರಿ, ನೂತನ್ ಸಿಟಿಗೆ ಹೋಗಿ ದೊಡ್ಡಾಸ್ಪತ್ರೆಗೆ ತೋರ್ಸಿದಾಗ ಅಲ್ಲಿನ ಡಾಕ್ಟ್ರು ಗಿರಿಧರ್ ಒಂದಷ್ಟು ತರದ ಸ್ಕ್ಯಾನಿಂಗ್ ಗೆ ಬರ್ಕೊಡ್ತಾರೆ. ಸರಿ ಅಂತಾ ಸಿಟಿ ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್, ಎಕ್ಸ್ ರೇ, ಬ್ಲಡ್ ಟೆಸ್ಟ್, ಯೂರಿನ್ ಟೆಸ್ಟ್ ಎಲ್ಲಾ ಮಾಡ್ಸಿ ಡಾಕ್ಟ್ರ್ರಿಗೆ ರಿಪೋರ್ಟ್ ತಂದ್ಕೊಡ್ತಾನೆ ನೂತನ್.

ಕಹಾನಿ ಮೇ ಟ್ವಿಸ್ಟ್ ಆಗಯಾ! ಅನ್ನೋ ಹಾಗೆ ಚೆನ್ನಾಗ್ ಹೋಗ್ತಿದ್ದ ನೂತನ್ ಲೈಫ್ ಗೆ ಶಾಕಿಂಗ್ ಟ್ವಿಸ್ಟ್ ಕೊಡ್ತಾರೆ ರಿಪೋರ್ಟ್ ನೋಡಿದ ಡಾಕ್ಟ್ರು ಗಿರಿಧರ್…!

ಡಾಕ್ಟ್ರು ಗಿರಿಧರ್ ಹೇಳ್ತಾರೆ “ಮಿಸ್ಟರ್ ನೂತನ್ ಇಟ್ಸ್ ಎ ಮೆಡಿಕಲ್ ಮಿರಾಕಲ್. ನಿಮ್ಗೆ ಬ್ರೈನ್ ಕ್ಯಾನ್ಸರ್ ಆಗ್ಲೇ ಲಾಸ್ಟ್ ಸ್ಟೇಜ್ ಗೆ ಬಂದಿದೆ. ನಿಮ್ಗೆ ಸಾಕಷ್ಟು ಸಿಂಪ್ಟಮ್ಸ್ ಕಾಣ್ಸಿದ್ರು ಅದನ್ನ ನೀವು ಇಗ್ನೋರ್ ಮಾಡಿದ್ದೀರ. ಈಗಾಗ್ಲೇ ನಿಮ್ಮ ಬ್ರೈನ್ 70% ಕೆಲ್ಸನೇ ಮಾಡ್ತಿಲ್ಲ. ಇನ್ನು 30% ಮಾತ್ರ ನಿಮ್ಮ ಬ್ರೈನ್ ವರ್ಕ್ ಮಾಡ್ತಿರೋದು. ಈಗ ನಂಗೆ ಆಶ್ಚರ್ಯ ಆಗ್ತಿದೆ ಅದೆಂಗೆ ನೀವು ನನ್ ಮುಂದೆ ಆರಾಮಾಗಿ ಇಷ್ಟ್ ಖುಷಿಯಿಂದ ಕೂತಿದ್ದೀರಾ ಅಂತಾ ನಂಗ್ ಅರ್ಥನೇ ಆಗ್ತಿಲ್ಲಾ” ಅಂತಾರೆ. ಅಲ್ಲಿ ತನಕ ಡಾಕ್ಟ್ರು ಏನ್ ತೊಂದ್ರೆ ಇಲ್ಲ ಅಂತ ನಾಲ್ಕು ಮಾತ್ರೆ ಬರ್ಕೊಡ್ತಾರೆ ಅನ್ಕೊಂಡು ನಗ್ ನಗ್ತಾ ಕೂತಿದ್ದ ನೂತನ್ ಗೆ ಒಂದೇ ಸಲ ಆಕಾಶನೇ ಕಳಚಿ ತಲೆ ಮೇಲೆ ಬಿದ್ದಂಗಾಗುತ್ತೆ. ತಕ್ಷಣ ಡಾಕ್ಟರ್ ಹೇಳ್ತಾರೆ. “ಡೋಂಟ್ ವರಿ ಮಿಸ್ಟರ್ ನೂತನ್. ನೀವು 70% ಬ್ರೈನ್ ವರ್ಕ್ ಮಾಡ್ತಿಲ್ಲ ಅಂದ್ರು ಹೀಗಿರೋದು ನೋಡ್ತಿದ್ರೆ ನಿಮ್ಮ ಮನಸ್ಸು ಎಷ್ಟ್ ಸ್ಟ್ರಾಂಗ್ ಇದೆ ಮತ್ತೆ ನಿಮ್ಮ ಆತ್ಮಶಕ್ತಿ ಎಷ್ಟಿದೆ ಅಂತ ಗೊತ್ತಾಗುತ್ತೆ. ಐ ಯಾಮ್ ಅಪ್ರಿಷಿಯೇಟ್ ಯುವರ್ ಸೆಲ್ಫ್ ಕಾನ್ಫಿಡೆನ್ಸ್” ಅಂತಾರೆ.

ಆಗ ನೂತನ್ “ಡಾಕ್ಟ್ರೆ ನಾನಿನ್ನು ಬದುಕೋಕೆ ಆಗೋಲ್ವಾ, ನಾನು ಸತ್ತೋಗ್ತೀನಾ ಡಾಕ್ಟ್ರೇ” ಅಂತಾ ಕೇಳ್ತಾನೆ.

ಆಗ ಡಾಕ್ಟರ್ ಗಿರಿಧರ್ “ನಂಗೂ ಗೊತ್ತಿಲ್ಲಾ, ನೀವು ಭವಿಷ್ಯಃ ಬದುಕಿರೋದು ನಿಮ್ಮ ಆತ್ಮವಿಶ್ವಾಸದಿಂದಲೇ ಅನ್ಸುತ್ತೆ. ನೀವು ಹೀಗೆ ಇನ್ನು ಎಷ್ಟು ದಿನದವರೆಗೂ ಧೈರ್ಯದಿಂದ, ಆತ್ಮವಿಶ್ವಾಸದಿಂದ ಇರ್ತೀರೋ ಅಲ್ಲಿವರ್ಗು ನೀವು ಖಂಡಿತ ಬದುಕ್ಬೋದು” ಅಂತ ಹೇಳ್ತಾರೆ.

ನೂತನ್ ಡಾಕ್ಟ್ರು ಕ್ಯಾಬಿನಿಂದ ಏನೂ ಮಾತಾಡದೆ ಸುಮ್ನೆ ಎದ್ದು ಬರ್ತಾನೆ. ನೂತನ್ ಗೆ ಮೂವರು ಪರಮಾಪ್ತ ಪ್ರಾಣ ಮಿತ್ರರಿರ್ತರೆ. ಅವ್ನು ಡೈರೆಕ್ಟಾಗಿ ಅವ್ನ ಮೊದಲನೇ ಮಿತ್ರನ ಹತ್ರ ಹೋಗಿ ನಡ್ದಿದೇಲ್ಲಾ ಹೇಳ್ತಾನೆ. ಕೊನೆಗೆ “ನಾನು ಸತ್ತ ಮೇಲೆ ನನ್ ಜೊತೆ ಬರ್ತೀಯಾ ಗೆಳೆಯಾ” ಅಂತಾನೆ. ಆಗ ಅವ್ನ ಮಿತ್ರ “ಗೆಳೆಯಾ, ನಿನ್ ಸತ್ತ ಮೇಲೆ ನಾನು ಸಿಕ್ಕಾಪಟ್ಟೆ ಅಳ್ತಿನಿ, ನಿನ್ನ ಚಟ್ಟ ಕಟ್ಟಿ ನಾನೇ ಭುಜದ ಮೇಲೆ ಹೊತ್ಕೊಂಡು ಹೋಗಿ ಮಣ್ಣು ಮಾಡಿ ಅಂತಿಮ ವಿಧಿ-ವಿಧಾನ, ಅಂತ್ಯಸಂಸ್ಕಾರ ಎಲ್ಲಾ ಮಾಡ್ತೀನಿ. ಜೊತೆಗೆ ಪ್ರತಿ ವರ್ಷ ನಿಂಗೆ ಪಿಂಡ ಇಟ್ಟು ನಿನ್ನ ಆತ್ಮಕ್ಕೆ ಶಾಂತಿ ಕೋರ್ತಿನಿ. ಆದ್ರೆ, ಇಲ್ಲಿಂದ ಮುಂದಕ್ಕೆ ನಿನ್ ಜೊತೆ ಬರಕಾಗಲ್ಲ ಗೆಳೆಯ ನಂಗೆ” ಅಂತಾನೆ.

ನೂತನ್ ಗೆ ತುಂಬಾ ಬೇಜಾರಾಗಿ ತನ್ನ ಎರಡನೇ ಮಿತ್ರನ ಹತ್ರ ಹೋಗಿ ನಡೆದಿದ್ದನ್ನ ಹೇಳಿ, ಮತ್ತೆ “ನಾನ್ ಸಾಯೋವಾಗ ನನ್ ಜೊತೆ ಬರ್ತೀಯಾ ಗೆಳೆಯ” ಅಂತ ಕೇಳ್ತಾನೆ. ಆಗ ಅವ್ನ ಮಿತ್ರ “ನೀನೇ ನನ್ ಜೀವಾ ಕಣೋ. ನಿನ್ ಸತ್ತ ಮೇಲೆ ನಿನ್ನ ಶವಪೆಟ್ಟಿಗೆನ ಬಂಗಾರದಲ್ಲೇ ಮಾಡಿಸ್ತೀನಿ, ನಿನ್ನ ಸಮಾದಿಯನ್ನ ಸಂಪೂರ್ಣವಾಗಿ ಬಂಗಾರದಲ್ಲೇ ನಿರ್ಮಾಣ ಮಾಡ್ತೀನಿ, ನಿನ್ನ ಶವ ಸಂಸ್ಕಾರಕ್ಕೆ ಸಾವಿರಾರು ಜನರನ್ನ ಕರ್ದು ನಿನ್ನ ಹೆಸ್ರಲ್ಲಿ ಊಟ ಹಾಕ್ಸಿ ಎಲ್ರು ಹೊಟ್ಟೆನು ತುಂಬುಸ್ತೀನಿ, ಎಲ್ಲಾ ನ್ಯೂಸ್ ಪೇಪರಲ್ಲೂ, ಸರ್ಕಲ್ ಗಳಲ್ಲೂ ದೊಡ್ಡದಾಗಿ ನಿನ್ನ ಫೋಟೋ ಹಾಕ್ಸಿ ಶ್ರದ್ಧಾಂಜಲಿ ಅಂತ ಹಾಕುಸ್ತೀನಿ. ಆದ್ರೆ, ಇಲ್ಲಿಂದ ಮುಂದೆ ನಂಗೆ ಬರಕಾಗಲ್ಲ ಕಣೋ” ಅಂತಾನೆ.

ನೂತನ್ ಗೆ ಇನ್ನಷ್ಟು ಬೇಜಾರಾಗಿ ತನ್ನ ಮೂರನೇ ಗೆಳೆಯನ ಹತ್ರ ಬಂದು ನಡ್ದಿದೆಲ್ಲಾ ಹೇಳಿ “ನಾನ್ ಸತ್ತ ಮೇಲೆ ನಂಜೊತೆ ಬರ್ತೀಯಾ ಗೆಳೆಯ” ಅಂತ ಅಳುತ್ತಾ ನೂತನ್ ಕೇಳ್ದಾಗ ಆ ಮಿತ್ರ ಹೇಳ್ತಾನೆ “ನಾನು ಖಂಡಿತ ಬರ್ತೀನಿ ಗೆಳೆಯ, ಆ ಸಮಾಧಿ ತನಕ ಬರ್ತೀನಿ, ಸಮಾಧಿ ಒಳಗೂ ಬರ್ತೀನಿ, ದೇವತೆಗಳು ನಿನ್ನ ಸರಿ-ತಪ್ಪುಗಳನ್ನು ಲೆಕ್ಕಾಚಾರ ಮಾಡುವಾಗ ಅಲ್ಲಿ ನಿನ್ನ ಪರವಾಗಿ ನ್ಯಾಯ ಮಂಡಿಸಿ ನಿಂಗೆ ಮುಕ್ತಿ ಸಿಗೋತನಕನೂ ನಿನ್ ಜೊತೆಗೇ ನಾನಿರ್ತೀನಿ ಗೆಳೆಯ” ಅಂತಾನೆ. ಆಗ ನೂತನ್ ನ ಕಣ್ಣೀರು ಆನಂದಭಾಷ್ಪ ಆಗಿ ಉಕ್ಕಿ ಹರಿಯುತ್ತೆ. ತನ್ನ ಗೆಳೆಯನನ್ನ ಅಪ್ಪಿಕೊಂಡು ಅಳ್ತಾ-ಅಳ್ತಾನೇ ತನ್ ಜೀವಾ ಬಿಡ್ತಾನೆ. ತಕ್ಷಣ ಆ ಗೆಳೆಯನೂ ಸಂತೋಷದಿಂದ ನೂತನ್ ಜೊತೆಗೇ ಹೋಗ್ತಾನೆ. ಕಥೆ ಇಲ್ಲಿಗೆ ಮುಗಿಯುತ್ತೆ.

ಸ್ನೇಹಿತ್ರೆ, ನಿಮ್ಗೆಲ್ಲಾ ಈ ಕಥೆ ಓದಿ ತಲೆಗ್ ಹುಳ ಬಿಟ್ಟಂಗ್ ಆಗಿರ್ಬೇಕು ಅಲ್ವಾ. ಯಾರ್ ಗುರೂ ಸತ್ಮೇಲೆ ಜೊತೆಗ್ ಬರಕಾಗುತ್ತೆ ಅಂತ ನಿಮ್ ಮನ್ಸಲ್ಲಿ ಪ್ರಶ್ನೆ ಬರ್ತಿರ್ಬೋದು….. ಆ ಪ್ರಶ್ನೆಗ್ ಉತ್ರನ ಈಗ್ ನೋಡೋಣ.

ನೂತನ್ ನ ಮೊದಲನೇ ಸ್ನೇಹಿತ ಮಾನವನ ರಕ್ತ ಸಂಬಂಧಿಗಳು, ಹೆಂಡ್ತಿ, ಮಕ್ಳು, ಎಕ್ಸೆಟ್ರಾ…ಇವ್ರೆಲ್ಲಾ ಅಳ್ಬೋದು, ಸಮಾಧಿ ಮಾಡ್ಬೋದು, ಅಲ್ಲಿಂದ ಮುಂದೆ ಬರಕ್ಕಾಗಲ್ಲ…! ಎರಡನೇ ಸ್ನೇಹಿತ ಮನುಷ್ಯ ಗಳಿಸಿದ ಆಸ್ತಿ, ಅಂತಸ್ತು, ಹಣ, ಜನಬಲ, ಹೆಸ್ರು, ಇದ್ರಿಂದ ಬಂಗಾರದ ಸಮಾಧಿ ಕಟ್ಬೋದು. ಆದ್ರೆ ಅಲ್ಲಿಂದ ಮುಂದಕ್ಕೆ ಬರೋಕಾಗಲ್ಲ…! ಮೂರನೇ ಸ್ನೇಹಿತ ಮಾನವ ತನ್ನ ಜೀವನದಲ್ಲಿ ಮಾಡಿದ ಪುಣ್ಯಕರ್ಮಗಳು, ದಾನ-ಧರ್ಮ, ಇನ್ನೊಬ್ಬರ ಕಣ್ಣೀರನ್ನ ಒರೆಸೋ ಕೆಲ್ಸ, ಒಟ್ಟಾರೆ ಜೀವನದ ಒಳ್ಳೆಯ ಮೌಲ್ಯಗಳು….. ಇದು ಮಾತ್ರ ಸತ್ತ ನಂತರವೂ ಬರೋ ಒಬ್ಬನೇ ಒಬ್ಬ ಸ್ನೇಹಿತ…! ಈ ಕಥೆಯ ಕಥಾನಾಯಕ ನೂತನ್ ಅಂದ್ರೆ ಅದು ನಾವೇ! ಈ ಕಥೆ ನಮ್ ನಮ್ಮ ಜೀವನದ ಕಥೆನೇ…!

ಸ್ನೇಹಿತ್ರೆ, ಸ್ವರ್ಗ-ನರಕ, ಪಾಪ-ಪುಣ್ಯ ಇವೆಲ್ಲ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಸಾಯೋವರ್ಗೂ ಸಾಧ್ಯವಾದ್ರೆ ಒಳ್ಳೆದುನ್ನೆ ಮಾಡೋಣ, ಒಂದ್ ವೇಳೆ ಒಳ್ಳೆದು ಮಾಡೋಕೆ ಆಗ್ಲಿಲ್ಲ ಅಂದ್ರು ನಮ್ ಪಾಡಿಗೆ ನಾವಿರೋಣ, ಇನ್ನೊಬ್ರಿಗೆ ಕೆಟ್ಟದನ್ನ ಬಯಸೋದು ಬೇಡ, ಕೆಟ್ಟದ್ದನ್ನ ಮಾಡೋದು ಬೇಡ ಅಂತಾ ಹೇಳ್ತಾ ಸದಾ ಸಕಾರಾತ್ಮಕತೆಯೆಡೆಗೆ ಮುಖ ಮಾಡೋಣ…….

  • ನಾಗೇಂದ್ರ ಟಿ.ಆರ್, ಅಂತಿಮ ವರ್ಷದ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿ,
    ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N Gopinath ಪಾಠದ ಜೊತೆ ವಿದ್ಯಾರ್ಥಿಗಳಿಗೆ ಸಾಹಸ,ಸಾಮಾಜಿಕ ಅರಿವು ಮೂಡಿಸುವುದು ಮುಖ್ಯ- ಎನ್.ಗೋಪಿನಾಥ್

N Gopinath ವಿದ್ಯಾರ್ಥಿಗಳ ಪಾಠ ಪ್ರವಚನ ಜೋತೆಗೆ ಸಾಹಸ, ಪ್ರವಾಸ, ಸಾಮಾಜಿಕ...

Sri Sri Prasannanatha Swamiji ಶ್ರೀ ಪ್ರಸನ್ನನಾಥ ಶ್ರೀಗಳಿಗೆ ಮಾತೃ ವಿಯೋಗ

Sri Sri Prasannanatha Swamiji ಶಿವಮೊಗ್ಗ,ನ.22 ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ...

Karnataka Rajyotsava ನಮ್ಮ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ- ಡಾ.ಎಚ್.ಬಿ.ಮಂಜುನಾಥ್

Karnataka Rajyotsava "ನಮ್ಮ ದೇಶೀಯ ಸಂಸ್ಕೃತಿಯು ವಿಶ್ವದಲ್ಲೇ ಶ್ರೇಷ್ಠವಾಗಿದೆ" ಬಿ ಜೆ...

Poorna Prajna School ಓದು & ಕ್ರೀಡೆ ಎರಡನ್ನೂ ಸಮಾನ ಸ್ವೀಕರಿಸಿ- ಶ್ರೀಕೃಷ್ಣ ಉಪಾಧ್ಯಾಯ

Poorna Prajna School ಭದ್ರಾವತಿ,ನ.22, ದೈಹಿಕ ಶಿಕ್ಷಣ ಶಿಕ್ಷಕರು ಸಂಸ್ಥೆಯ ಆಧಾರಸ್ಥಂಭ...