M.B. Patil ಉದ್ಯಮ ಚಟುವಟಿಕೆ ಹೆಸರಿನಲ್ಲಿ ರೈತರಿಂದ ಬೇಕಾಬಿಟ್ಟಿ ಭೂ ಸ್ವಾಧೀನಕ್ಕೆ ಬ್ರೇಕ್ ಹಾಕಿರುವ ರಾಜ್ಯ ಸರಕಾರ, ಇದೀಗ ಜಮೀನು ಪಡೆದುಕೊಂಡು ಕೈಗಾರಿಕೆ ಆರಂಭಿಸದ ಉದ್ಯಮಿಗಳಿಗೆ ಶಾಕ್ ನೀಡಲು ಮುಂದಾಗಿದೆ.
ಕೈಗಾರಿಕೆ ಹೆಸರಿನಲ್ಲಿ ಹಂಚಿಕೆ ಮಾಡಿಸಿಕೊಂಡು ನಾನಾ ಕಂಪನಿಗಳು ಸಾವಿರಾರು ಎಕರೆ ಭೂಮಿಯನ್ನು ಏನೂ ಮಾಡದೆ ಖಾಲಿ ಉಳಿಸಿಕೊಂಡಿವೆ. ಇದರಿಂದ ನೈಜ ಹೂಡಿಕೆದಾರರಿಗೆ ಭೂಮಿ ಸಿಗುತ್ತಿಲ್ಲ. ನಿರ್ದಿಷ್ಟ ಉದ್ದೇಶಕ್ಕೆ ಬಳಕೆ ಆಗದೆ ವ್ಯರ್ಥವಾಗಿ ಪಾಳುಬಿದ್ದಿರುವ ಇಂತಹ ಭೂಮಿಯನ್ನು ಗುರುತಿಸಿ ವಾಪಸ್ ಪಡೆಯುವ ಕೆಲಸವನ್ನು ಆಂದೋಲನದ ರೂಪದಲ್ಲಿ ಸರಕಾರ ಕೈಗೆತ್ತಿಕೊಂಡಿದೆ.
ಕೆಐಎಡಿಬಿ ಮೂಲಕ ರಾಜ್ಯದ ನಾನಾ ಭಾಗಗಳಲ್ಲಿ ಬೆಲೆಬಾಳುವ ಭೂಮಿ ಮಂಜೂರು ಮಾಡಿಸಿಕೊಂಡು, ಒಪ್ಪಂದದಂತೆ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಸದ ಕಂಪನಿಗಳ ಹಂಚಿಕೆಯನ್ನು ರದ್ದುಪಡಿಸುವ ದಿಟ್ಟ ಪ್ರಯತ್ನಕ್ಕೆ ಕೈಹಾಕಿದೆ.
ಮೊದಲ ಹೆಜ್ಜೆಯಾಗಿ, ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಜಸ್ಟ್ ಡಯಲ್ ಲಿಮಿಟೆಡ್‌ಗೆ ನೀಡಲಾಗಿದ್ದ 15 ಎಕರೆ ಭೂಮಿ ಹಂಚಿಕೆಯನ್ನು ರದ್ದುಪಡಿಸಲಾಗಿದೆ.
M.B. Patil ಬೆಂಗಳೂರು ಹೊರವಲಯದ ಪ್ರತಿಷ್ಠಿತ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡು ಹಲವು ಕಡೆಗಳಲ್ಲಿ ದಶಕಗಳ ಹಿಂದೆ ಹಂಚಿಕೆಯಾದ ಭೂಮಿಯೂ ಬಳಕೆಯಾಗಿಲ್ಲ. ಇಂತಹ ಎಲ್ಲ ಪ್ರಕರಣಗಳಲ್ಲಿ ಹಂಚಿಕೆ ರದ್ದುಪಡಿಸಲು ನೋಟಿಸ್ ನೀಡಲಾಗುತ್ತಿದೆ ಎಂದು ಕೈಗಾರಿಕಾ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಹಂಚಿಕೆಯಾದ ಭೂಮಿಯನ್ನು ಬಳಕೆ ಮಾಡಿಕೊಂಡು ಉದ್ಯಮ ಚಟುವಟಿಕೆ ಆರಂಭಿಸದ ಪ್ರಕರಣಗಳಲ್ಲಿ ಭೂಮಿ ಹಂಚಿಕೆ ರದ್ದು ಖಚಿತ. ಇದನ್ನು ಆಂದೋಲನ ರೀತಿಯಲ್ಲಿ ಕೈಗೆತ್ತಿಕೊಳ್ಳಲು ಕೆಐಎಡಿಬಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ನೈಜ ಹೂಡಿಕೆದಾರರಿಗೆ ಭೂಮಿ ಹಂಚಿಕೆ ಆಗಬೇಕು ಮತ್ತು ಸದ್ಬಳಕೆ ಆಗಬೇಕು ಎಂಬುದು ಸರಕಾರದ ಉದ್ದೇಶ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.