District Chamber of Commerce ಯೋಗದ ಪ್ರಭಾವ ಜಗದಗಲ ವ್ಯಾಪಿಸಿದ್ದು, ಯೋಗದ ಕುರಿತು ಅನೇಕ ಸಂಶೋಧನೆಗಳು, ಪ್ರಯೋಗಗಳು ಯೋಗದ ಶಕ್ತಿಯನ್ನು ಬೆಳಕಿಗೆ ತಂದಿವೆ ಎಂದು ಬೆಂಗಳೂರಿನ ಯೋಗಿ ಡಾ. ದೇವರಾಜ್ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಯೋಗ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಶ್ವಸಂಸ್ಥೆಯು ಜೂನ್ 21 ಅನ್ನು ವಿಶ್ವ ಯೋಗ ದಿನಾಚರಣೆ ಎಂದು ಘೋಷಿಸಿದ ನಂತರ ವಿಶ್ವದೆಲ್ಲೆಡೆ ಯೋಗಾಭ್ಯಾಸವನ್ನು ಮಾಡುವವರ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ ಎಂದು ತಿಳಿಸಿದರು.
ನಮಗಿಂತ ಹೆಚ್ಚು ಶ್ರದ್ಧೆಯಿಂದ ವಿದೇಶಿಯರು ಯೋಗವನ್ನು ಜೀವನದ ಅವಿಭಾಜ್ಯ ಅಂಗ ಆಗಿಸಿಕೊಂಡಿದ್ದಾರೆ. ಆದರೆ ಯೋಗದ ತವರಾದ ನಮ್ಮ ದೇಶದಲ್ಲಿ ಯೋಗದ ಬಗ್ಗೆ ಅಭಿಪ್ರಾಯ, ಅರಿವು ಕಡಿಮೆ ಇದೆ. ಈ ನಿಟ್ಟಿನಲ್ಲಿ ಭಾರತೀಯರಾದ ನಮಗೆ ಯೋಗ ಎಂದರೆ ಯೋಗಾಸನ ಮಾತ್ರವಲ್ಲ, ಅದರ ವ್ಯಾಪ್ತಿ ನಮ್ಮ ಊಹೆಗೂ ನಿಲುಕದಷ್ಟು ಎನ್ನುವ ಅರಿವು ಮೂಡಿಸಬೇಕಿದೆ ಎಂದರು.
2023ರ ಡಿಸೆಂಬರ್ 23, 24 ರ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯಲಿರುವ ಅಭೂತಪೂರ್ವ ಯೋಗ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವುದರ ಮೂಲಕ ಯೋಗದ ಬಗ್ಗೆ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಕ್ಯುಪ್ರೆಷರ್ ಥೆರಪಿ ಪರಿಣಿತ ದಕ್ಷಿಣಾ ಮೂರ್ತಿ ಮಾತನಾಡಿ, ನಮ್ಮ ಸುತ್ತ ಮುತ್ತ ಉಚಿತವಾಗಿ ದೊರೆಯುವ ಅಮೃತಬಳ್ಳಿ, ಪಾರಿಜಾತ, ನಿತ್ಯ ಪುಷ್ಪ, ಎಕ್ಕದ ಎಲೆಗಳನ್ನು ಬಳಸಿಕೊಂಡು ಖರ್ಚಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
District Chamber of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಾದ ಯೋಗ ಫೌಂಡೇಷನ್ ಬೆಲಗೂರು ಮಂಜುನಾಥ್ ವಹಿಸಿದ್ದರು.
ನಂದಿನಿ ನಾಗರಾಜ್ ಅತಿಥಿಗಳ ಪರಿಚಯ ನೆರವೇರಿಸಿದರು. ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ ನಿರೂಪಣೆ ನಡೆಸಿದರು. ಕಾರ್ನಳ್ಳಿ ಮಂಜುನಾಥ್ ಸ್ವಾಗತ, ರಾಜಶೇಖರ ವಂದನಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಣ ಸಮಿತಿಯ ಬಾ.ಸು.ಅರವಿಂದ, ಲೋಕೆಶ್, ಶಿವಗಂಗಾ ಯೋಗಕೇಂದ್ರದ ಎ.ಎಸ್ ಚಂದ್ರಶೇಖರ್, ಜಿ.ವಿಜಯಕುಮಾರ್, ಮಧು ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.