Madhu Bangarappa ಶಿವಮೊಗ್ಗ ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡತಡೆಯಿಲ್ಲದೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸೊರಬದ ತಾಲೂಕು ಕಚೇರಿ ಸಭಾಂಗಣದಲ್ಲಿ ಮೆಸ್ಕಾಂನ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಿರೀಕ್ಷಿತ ಪ್ರಮಾಣದ ಮಳೆ ಬಾರದೆ ಕಂಗಾಲಾಗಿರುವ ರೈತರು ಅನಿಯಮಿತ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ಇನ್ನಷ್ಟು ಸಂಕಷ್ಟಕ್ಕೀಡಾಗಿ ಅಸಂಖ್ಯಾತ ರೈತರು ನಮ್ಮಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ವಿದ್ಯುತ್ ದೊರೆಯದಿರುವುದರಿಂದ ರೈತರಿಗೆ ತೀವ್ರ ತರಹದ ತೊಂದರೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಕೃಷಿಕರು ಬೇಸರಗೊಳ್ಳುವ ಮೊದಲು ಸಂಬಂಧಿಸಿದ ಮೆಸ್ಕಾಂನ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎದುರಾಗಬಹುದಾದ ಟ್ರಾನ್ಸ್ಫಾರ್ಮರ್ ಸಮಸ್ಯೆಗೆ ಸಕಾಲಿಕ ಪರಿಹಾರ ಕ್ರಮವಾಗಿ ಅಗತ್ಯಕ್ಕಿಂತ ಹೆಚ್ಚಿನ ಟ್ರಾನ್ಸ್ಫಾರ್ಮರ್‌ಗಳನ್ನು ಕಾಯ್ದಿರಿಸಿಕೊಳ್ಳುವಂತೆ ಹಾಗೂ ರೈತರಿಗೆ ಯಾವುದೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕೆಂದು ಸೂಚಿಸಿದ ಅವರು, ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ರೈತರೊಂದಿಗೆ ವ್ಯವಹರಿಸುವಂತೆ ಅವರು ಮನವಿ ಮಾಡಿದರು.
Madhu Bangarappa ಪ್ರಸ್ತುತ ಸಂದರ್ಭದಲ್ಲಿ ಸರಬರಾಜಾಗುತ್ತಿರುವ ವಿದ್ಯುತ್ ನಿರಂತರವಾಗಿರದಿರುವುದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಅಲ್ಲದೇ ಮೆಸ್ಕಾಂ ನಿಗಧಿಪಡಿಸಿದ ಅವಧಿಯಷ್ಟು ಪ್ರಮಾಣದಲ್ಲಿಯೂ ವಿದ್ಯುತ್ ಸರಬರಾಜುಗೊಳ್ಳುತ್ತಿಲ್ಲ. ಆದ್ದರಿಂದ ಮೆಸ್ಕಾಂನ ಹಿರಿಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಲ್ಲದೆ ನಿಯೋಜಿತ ಅಧಿಕಾರಿ ಸಿಬ್ಬಂಧಿಗಳಿಗೂ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಿದ ಅವರು, ಸರ್ಕಾರ ನಿಗಧಿಪಡಿಸಿರುವಂತೆ ವಾರಕ್ಕೊಮ್ಮೆಯ ಶಿಫ್ಟ್ ಆಧಾರದ ಮೇಲೆ ದಿನಕ್ಕೆ ೫ಗಂಟೆಯ ಕಾಲ ನಿರಂತರವಾಗಿ ವಿದ್ಯುತ್ ಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ಮಂಜೂರಾಗಿರುವ ಹಾಗೂ ಪ್ರಸ್ತುತ ಹೊಸದಾಗಿ ಮಂಜೂರಾಗಿರುವ ಟ್ರಾನ್ಸ್ಫಾರ್ಮರ್‌ಗಳ ನಿರ್ಮಾಣ ಕಾರ್ಯಕ್ಕೆ ಇರಬಹುದಾದ ಅಡತಡೆಗಳನ್ನು ನಿವಾರಿಸಿಕೊಂಡು ಕೂಡಲೇ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಲಹೆ ಪಡೆದು ಸಕಾಲಿಕವಾಗಿ ಕಾರ್ಯ ಪೂರ್ಣಗೊಳಿಸಬೇಕೆಂದರು.
ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯದಲ್ಲಿ ಅರಣ್ಯ ಭೂಮಿ ಇಂಡೀಕರಣ, ಖಾತೆಗಳ ಬದಲಾವಣೆ ಮುಂತಾದವುಗಳ ವಿಳಂಬ ರಹಿತ ಕಾರ್ಯಾನುಷ್ಠಾನಕ್ಕಾಗಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಜವಾಭ್ದಾರಿಯುತ ಅಧಿಕಾರಿಗಳನ್ನು ನಿಯೋಜಿಸುವಂತೆ ಸಚಿವರು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪದ್ಮಾವತಿ ಅವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸೊರಬ ತಾಲೂಕು ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳ ವಿದ್ಯುತ್ ಸಂಬಂಧಿತ ಗಂಭೀರ ಸ್ವರೂಪದ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಪರ್ಯಾಯ ಕ್ರಮಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪದ್ಮಾವತಿ, ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಭಾರತಿ ಸಿ.ಎಸ್. ತಹಶೀಲ್ದಾರ್ ಹುಸೇನ್‌ಸಾಬ್, ಕಾರ್ಯನಿರ್ವಾಹಕ ಅಧಿಕಾರಿ ನಾಗೇಶ್ ಸೇರಿದಂತೆ ಸೊರಬ ತಾಲೂಕಿನ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು