Private Cyber Center ರಾಜ್ಯ ಸರಕಾರದ ವಿವಿಧ ಆನ್‌ಲೈನ್ ಸೇವೆಗಳನ್ನು ನಾಗರೀಕ ವೆಬ್‌ಸೈಟ್‌ನಲ್ಲಿ ಹಿಂದಿನಂತೆ ಮುಂದುವರಿಸಬೇಕು ಎಂದು ತಾಲೂಕು ಕಾಮನ್ ಸರ್ವಿಸ್ ಸೆಂಟರ್ ಹಾಗೂ ಖಾಸಗಿ ಸೈಬರ್ ಸೆಂಟರ್ ಮಾಲೀಕರು ಮುಖ್ಯಮಂತ್ರಿ ಅವರಿಗೆ ತಲುಪಿಸಲು ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಡಿತರ ಚೀಟಿ ತಿದ್ದುಪಡಿ, ಹೊಸ ಅರ್ಜಿ, ಸೇವಾಸಿಂಧು, ಗೃಹಲಕ್ಷ್ಮಿ ಯೋಜನೆ, ವಿವಿಧ ನಿಗಮ ಮಂಡಳಿ ಅಡಿ ಸಾಲ ಸೌಲಭ್ಯ ಸೇರಿದಂತೆ ಇನ್ನಿತರೆ ರಾಜ್ಯ ಸರಕಾರದ ಆನ್‌ಲೈನ್ ಅರ್ಜಿ ಸಲ್ಲಿಕೆ ಹಾಗೂ ಸೇವೆಗಳು ಪಬ್ಲಿಕ್ ಸೈಟ್‌ನಲ್ಲಿ ಅವಕಾಶ ಇತ್ತು. ಆದರೆ ಇತ್ತೀಚೆಗೆ ರಾಜ್ಯ ಸರಕಾರವು ಈ ಎಲ್ಲಾ ಆನ್‌ಲೈನ್ ಸೇವೆಗಳನ್ನು ಕರ್ನಾಟಕ ಒನ್, ಗ್ರಾಮ ಒನ್, ಶಿವಮೊಗ್ಗ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದ ಕಾಮನ್ ಸರ್ವಿಸ್ ಸೆಂಟರ್ ಹಾಗೂ ಸೈಬರ್ ಸೆಂಟರ್‌ಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಮಾಲೀಕರಿಗೆ ತುಂಬಾ ತೊಂದರೆ ಹಾಗೂ ಅನ್ಯಾಯವಾಗುತ್ತಿದೆ. ವಿದ್ಯಾವಂತರು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿದ್ದ ಕಾರಣ ಅನೇಕ ವರ್ಷಗಳಿಂದ ಸ್ವ-ಉದ್ಯೋಗದಿಂದ ಸ್ವಾವಲಂಭಿಗಳಾಗಿ ದುಡಿದು ಜೀವನ ನಡೆಸುತ್ತಿದ್ದಾರೆ. ಆದರೆ ಈ ರೀತಿಯ ಸರಕಾರದ ನಿರ್ಧಾರದಿಂದ ತಮ್ಮ ಸೆಂಟರ್ ಹಾಗೂ ಜೀವನ ನಡೆಸುವುದು ತೀರಾ ಕಷ್ಟಕರವಾಗಿದೆ. ಹತ್ತಾರ ವರ್ಷಗಳು ಸೈಬರ್ ಸೆಂಟರ್ ನಡೆಸಿಕೊಂಡು ಬರುತ್ತಿರುವವರ ಈಗ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆಗದೆ ಇದ್ದ ಆದಾಯಕ್ಕೆ ಪೆಟ್ಟು ಬಿದ್ದಿರುವುದರಿಂದ ನಿರುದ್ಯೋಗಿ ಆಗುವ ಆತಂಕ ಹೆಚ್ಚಿದೆ.
Private Cyber Center ಮಾತ್ರವಲ್ಲ ಜನರು ಹತ್ತಿರದ ಸೈಬರ್ ಸೆಂಟರ್ ಬಿಟ್ಟು ದೂರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ದಿನಗಟ್ಟಲೆ ಕಾಯುವಂತಾಗಿದೆ. ಇದರಿಂದ ಜನರ ಕೆಲಸ, ಸಮಯ ಹಾಗೂ ಆದಾಯಕ್ಕೆ ಪೆಟ್ಟು ಬಿಳುತ್ತಿದೆ. ಆದ್ದರಿಂದ ಸರಕಾರದ ಎಲ್ಲಾ ಆನ್‌ಲೈನ್ ಸೇವೆಗಳನ್ನು ಹಿಂದಿನಂತೆ ಕಾಮನ್ ಸರ್ವಿಸ್ ಸೆಂಟರ್ ಹಾಗೂ ಸೈಬರ್ ಸೆಂಟರ್‌ಗಳಿಗೆ ಅರ್ಜಿ ಸಲ್ಲಿಸಲು ಪಬ್ಲಿಕ್ ಸೈಟ್‌ನಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
ಕಾಮನ್ ಸರ್ವಿಸ್ ಸೆಂಟರ್ ಹಾಗೂ ಖಾಸಗಿ ಸೈಬರ್ ಸೆಂಟರ್ ಮಾಲೀಕರಾದ ಎಸ್.ಬಿ.ಗೋಪಿ, ಎನ್.ಜೆ.ಶೈಲೇಶ್, ಮಾಧವ, ಕೆ.ಆರ್.ಹರೀಶ್, ಗೀತಾಂಜಲಿ, ಮಂಜುಳಾ, ಕವಿತಾ, ಕೆ.ಅಭಿಷೇಕ್, ಅಪ್ಪು, ಜೆ.ಪದ್ಮಾವತಿ, ಮಂಜುನಾಥ್ ಹಾಜರಿದ್ದರು.