Rotary Shivamogga East ರೋಟರಿ ಸಂಸ್ಥೆಯು ವಿಶ್ವಾದ್ಯಂತ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಮನುಕುಲದ ಸೇವೆಗೆ ರೋಟರಿ ಸಂಸ್ಥೆಯು ಸದಾ ಸಿದ್ಧವಿದೆ ಎಂದು ರೋಟರಿ ವಲಯ 11ರ ಸಹಾಯಕ ಗವರ್ನರ್ ಕೆ.ರವಿ ಕೋಟೋಜಿ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ದತ್ತಿ ನಿಧಿಗೆ ದೇಣಿಗೆ ನೀಡುವುದರ ಮುಖಾಂತರ ಸಮಾಜ ಸೇವೆಯಲ್ಲಿ ಕೈಜೋಡಿಸಬೇಕು. ಇದರಿಂದ ಹೆಚ್ಚು ಹೆಚ್ಚು ಜನರಿಗೆ ಸೇವಾ ಕಾರ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರೋಟರಿ ಫೌಂಡೇಷನ್ ಮುಖಾಂತರ ಈಗಾಗಲೇ ಮಹಾಮಾರಿ ಪೊಲಿಯೋ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಸಂಪೂರ್ಣ ಶ್ರಮಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನ ಮಾಡುತ್ತಿದೆ. ಪ್ರತಿಯೊಬ್ಬರು ಪ್ರತಿ ವರ್ಷ ರೋಟರಿ ಫೌಂಡೇಷನ್‌ಗೆ ತಪ್ಪದೇ ಕೈಲಾದಷ್ಟು ದೇಣಿಗೆ ನೀಡಬೇಕು ಎಂದರು.
ವಲಯ ಸೇನಾನಿ ಧರ್ಮೇಂದ್ರಸಿಂಗ್ ಬಂಟಿ ಮಾತನಾಡಿ, ಸ್ನೇಹ, ಪ್ರೀತಿ, ಸೇವೆಗೆ ಸ್ಥಾಪಿತವಾದ ರೋಟರಿ ಸಂಸ್ಥೆಯು ವಿಶ್ವಾದ್ಯಂತ 36 ಸಾವಿರ ಕ್ಲಬ್‌ಗಳ 14 ಲಕ್ಷಕ್ಕೂ ಅಧಿಕ ಸದಸ್ಯರ ಮುಖಾಂತರ ಸೇವೆ ಸಲ್ಲಿಸುತ್ತ ಜನರನ್ನು ತಲುಪಿದೆ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಅತಿ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ವಿದ್ಯಾಸಂಸ್ಥೆ ಹಾಗೂ ಚಿತಾಗಾರ ಸೇವೆ ಒದಗಿಸಿದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಪ್ರಸ್ತಕ ಸಾಲಿನಲ್ಲಿ ನಿರಂತರವಾಗಿ ವಿಶೇಷ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಉತ್ತಮ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
Rotary Shivamogga East ಸಹಾಯಕ ಗವರ್ನರ್ ರವಿ ಕೋಟೋಜಿ, ವಲಯ ಸೇನಾನಿ ಧರ್ಮೇಂದ್ರ ಸಿಂಗ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ವಸಂತ ಹೋಬಳಿದಾರ್, ಡಾ. ಗುಡದಪ್ಪ ಕಸಬಿ, ಶ್ರೀಕಾಂತ್, ನಾಗವೇಣಿ, ಎಸ್.ಸಿ.ರಾಮಚಂದ್ರ, ಕೆ.ಜಿ.ರಾಮಚಂದ್ರರಾವ್, ಆದಿಮೂರ್ತಿ, ಮಂಜುನಾಥ್ ಕದಂ, ಪ್ರದೀಪ ಯಲಿ, ರಮೇಶ್ ಭಟ್, ಹೊಸತೋಟ ಸೂರ್ಯನಾರಾಯಣ, ಡಾ. ಲತಾ ಭರತ್, ಶಶಿಕಾಂತ್ ನಾಡಿಗ್, ದಿವ್ಯಾ ಪ್ರವೀಣ್, ಮಂಜುನಾಥ್ ರಾವ್, ಕಾರ್ಯದರ್ಶಿ ಕಿಶೋರ್ ಕುಮಾರ್, ಗೀತಾ, ಅರುಣ್ ದೀಕ್ಷಿತ್, ಸಂತೋಷ್, ಮುಕುಂದ್‌ಗೌಡ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.