Nobel Peace Prize 2023ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ ನಾರ್ಜಿಸ್ ಮೊಹಮ್ಮದಿ ಅವರನ್ನು ಆಯ್ಕೆ ಮಾಡಲಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ 19ನೇ ಮಹಿಳೆ ಎನಿಸಿರುವ ನರ್ಗಿಸ್ ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ.
ನಾರ್ಜಿಸ್ ಅವರನ್ನು ನಾರ್ವೆಜಿಯನ್ ನೊಬೆಲ್ ಸಮಿತಿಯು 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಸೂಕ್ತ ವ್ಯಕ್ತಿ ಎಂದು ಆರಿಸಿದೆ. “ಇರಾನ್ ಮಹಿಳೆಯರ ಶೋಷಣೆಯ ವಿರುದ್ಧದ ಹೋರಾಟಕ್ಕಾಗಿ ಮತ್ತು ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯ ದೊರಕಬೇಕು ಎಂಬುದನ್ನು ಪ್ರಚುರ ಪಡಿಸುವ ಹೋರಾಟಕ್ಕಾಗಿ ಈ ಗೌರವ ನೀಡಲಾಗುತ್ತಿದೆ” ಎಂದು ನಾರ್ವೆಜಿಯನ್ ನೊಬೆಲ್ ಸಮಿತಿ ಹೇಳಿದೆ.
Nobel Peace Prize ಮಹಿಳೆಯರ ಹಕ್ಕುಗಳ ಮೇಲೆ ಅತಿ ಹೆಚ್ಚು ದಾಳಿ ನಡೆಯುವ ದೇಶಗಳಲ್ಲಿ ಇರಾನ್ ಕೂಡ ಒಂದಾಗಿದ್ದು, ಇಲ್ಲಿನ ಮುಂಚೂಣಿ ಮಾನವ ಹಕ್ಕುಗಳ ಹೋರಾಟಗಾರರಲ್ಲಿ ನಾರ್ಜಿಸ್ಒಬ್ಬರಾಗಿದ್ದಾರೆ. ಇರಾನ್‌ನಲ್ಲಿ ಕೆಲವು ತಿಂಗಳ ಹಿಂದೆ ನೈತಿಕ ಪೊಲೀಸರ ವಶದಲ್ಲಿದ್ದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿಯ ಶಂಕಾಸ್ಪದ ಸಾವಿನ ಬಳಿಕ ಭಾರಿ ಪ್ರತಿಭಟನೆಗಳು, ಹಿಂಸಾಚಾರಗಳು ನಡೆದಿದ್ದವು. ಇದಕ್ಕೆ ನರ್ಗಿಸ್ ಅವರು ಟೆಹರಾನ್‌ನ ಎವಿನ್ ಪ್ರಿಸನ್ ಒಳಗಿನಿಂದಲೇ ಬೆಂಬಲ ವ್ಯಕ್ತಪಡಿಸಿದ್ದರು.