Sri Uttaradi Math ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ 28ನೇ ಚಾತುರ್ಮಾಸ್ಯ ಮಹೋತ್ಸವ ಅದ್ಧೂರಿಯಾಗಿ ಸಂಪನ್ನಗೊ0ಡಿದೆ.
ಹೊಳೆಹೊನ್ನೂರಿನ ತಮ್ಮ ಸಂಸ್ಥಾನದ ಪೂರ್ವ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಶ್ರೀಗಳು ಚಾತುರ್ಮಾಸ್ಯ ವ್ರತನ್ನು ಜುಲೈ 12ರಿಂದ ಕೈಗೊಂಡಿದ್ದರು. ಸೆ.29ರ ಶುಕ್ರವಾರ ಬೆಳಗ್ಗೆ ಸಂಸ್ಥಾನ ಪೂಜೆ ನೆರವೇರಿಸಿದ ಶ್ರೀಗಳು, ನಂತರದಲ್ಲಿ ಸಂಸ್ಥಾನದ ಮೂಲರಾಮದೇವರು, ದಿಗ್ವಿಜಯ ರಾಮದೇವರು, ಮೂಲ ಸೀತಾದೇವಿ ಹಾಗೂ ಇನ್ನಿತರ ಸಂಸ್ಥಾನ ಪ್ರತಿಮೆಗಳು ಹಾಗೂ ವ್ಯಾಸಮುಷ್ಠಿಗಳ ಸನ್ನಿಧಾನದಲ್ಲಿ ಚಾತುರ್ಮಾಸ್ಯ ವ್ರತವನ್ನು ಸಮಾಪನಗೊಳಿಸಿ ದೇವರಿಗೆ ಸಮರ್ಪಿಸಿದರು.
ನಂತರ ಶ್ರೀ ಸತ್ಯಧರ್ಮ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಹಸ್ತೋದಕಗಳನ್ನು ನೆರವೇರಿಸಿದರು. ಸಂಜೆ ಸುಮಾರು 5.30ರ ವೇಳೆಗೆ ಹೊಳೆಹೊನ್ನೂರು ಸಮೀಪದ ತಳ್ಳಿಕಟ್ಟೆಯಲ್ಲಿರುವ ಶ್ರೀ ಸತ್ಯಧರ್ಮ ತೀರ್ಥರಿಗೆ ಸ್ವಪ್ನಲಬ್ಧವಾದ ಲಕ್ಷ್ಮೀ ರಂಗನಾಥ ದೇವರ ದರ್ಶನ ಪಡೆಯುವ ಮೂಲಕ ಸೀಮೋಲ್ಲಂಘನ ಕೈಗೊಂಡರು.
ಈ ವೇಳೆ ಸಾವಿರಾರು ಭಕ್ತರು ನೆರೆದಿದ್ದರು. ಪುನಃ ಅಲ್ಲಿಂದ ಶ್ರೀಗಳು ಹೊಳೆಹೊನ್ನೂರಿನ ಮಠಕ್ಕೆ ಆಗಮಿಸಿದರು.
ಸಮಾರೋಪ ಸಮಾರಂಭ :
ಗುರುವಾರ ಸಂಜೆ ಚಾತುರ್ಮಾಸ್ಯದ ಸಮಾರೋಪ ಸಮಾರಂಭ ನಡೆಯಿತು. ಈ ವೇಳೆ ಆಶೀರ್ವಚನ ನೀಡಿದ ಶ್ರೀ ಸತ್ಯಾತ್ಮ ತೀರ್ಥರು, ದೇವರ ಕಾರುಣ್ಯ ಮತ್ತು ನಮ್ಮ ಗುರುಗಳು ಹಾಗೂ ಶ್ರೀ ಸತ್ಯಧರ್ಮ ತೀರ್ಥರ ವಿಶೇಷ ಅನುಗ್ರಹದಿಂದ ಈ ಚಾತುರ್ಮಾಸ್ಯ ಅತ್ಯಂತ ವೈಭವದಿಂದ ನೆರವೇರಿದೆ ಎಂದರು.
ನವರತ್ನ ವಂಶಸ್ಥರೊoದಿಗೆ ಹೊಳೆಹೊನ್ನೂರು, ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ ಸೇರಿ ಅಕ್ಕಪಕ್ಕದ ಎಲ್ಲ ಊರಿನವರೂ ಈ ಮಹೋತ್ಸವಕ್ಕೆ ಸಹಕಾರ ನೀಡಿದ್ದಾರೆ. ದೇಶದ ವಿವಿಧೆಡೆಯಿಂದಲೂ ಭಕ್ತರು ಬಂದು ತಮ್ಮ ಸೇವೆ ಸಲ್ಲಿಸಿದ್ದಾರೆ. ಎಲ್ಲ ಭಕ್ತರಿಗೂ, ದೇಶದ ಸಮಸ್ತ ಜನತೆಗೂ ದೇವರು ಧರ್ಮಮಾರ್ಗದಲ್ಲಿ ಜೀವನ ನಡೆಸುವಂತೆ ಅನುಗ್ರಹಿಸಲಿ. ದೇಶದ ಎಲ್ಲ ಕಡೆ ಸುಭಿಕ್ಷವಾಗಲಿ ಎಂದು ಆಶೀರ್ವದಿಸಿದರು.
Sri Uttaradi Math ಇದೇವೇಳೆ ಚಾತುರ್ಮಾಸ್ಯದಲ್ಲಿ ಸೇವೆ ಸಲ್ಲಿಸಿದ ಸ್ವಯಂಸೇವಕರು, ಸಮಿತಿಯ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು. ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ, ಶ್ರೀಮಠದ ಸಿಇಓ ವಿದ್ಯಾಧೀಶಾಚಾರ್ಯ ಗುತ್ತಲ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ಆನಂದಾಚಾರ್ಯ ನವರತ್ನ, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ಪಂಡಿತರಾದ ರಘೂತ್ತಮಾಚಾರ್ಯ ಸಂಡೂರು, ಕಡೂರು ಮಧುಸೂಧನಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಜಯತೀರ್ಥಾಚಾರ್ಯ ಕಲ್ಲಾಪುರ, ಅನಿಲ್ ರಾಮಧ್ಯಾನಿ, ಶ್ರೀನಾಥ ನಗರಗದ್ದೆ ಮೊದಲಾದವರಿದ್ದರು.