World Heart Day ಇಂದು ವಿಶ್ವ ಹೃದಯ ದಿನ. ಈ ದಿನದಂದು ರಾಜಕೀಯ ಗಣ್ಯರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾರ್ವಜನಿಕರಿಗೆ ಹೃದಯ ಜಾಗೃತಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ.ಹೃದಯದ ಮಾತೊಂದಿದೆ, ಹಂಚಿಕೊಂಡು ಬಿಡುತ್ತೇನೆ. ಕೋವಿಡ್ ಬಂದು ಹೋದ ನಂತರ ಪದೇಪದೆ ನಮ್ಮನ್ನು ಕಾಡಿರುವ ಪ್ರಶ್ನೆಯಿದು: ಹೃದಯಗಳೀಗ ತೀರಾ ಮೃದುವಾಗಿ ಹೋಗಿವೆಯಾ?
ದಿನದಿನವೂ ಅಲ್ಲೊಬ್ಬ ಇಲ್ಲೊಬ್ಬರು, ಅದರಲ್ಲೂ ಗಟ್ಟಿಮುಟ್ಟಾದ ಹುಡುಗ ಹುಡುಗಿಯರೇ ದಿಢೀರನೆ ತಮ್ಮೆದೆಯೊಳಗಿನ ಕಂಪನವನ್ನು ಸ್ಥಬ್ದ ಮಾಡಿಕೊಂಡು ಮಾಯವಾಗಿ ಹೋಗುತ್ತಿದ್ದಾರಲ್ಲಾ, ಇದಕ್ಕೆ ಕಾರಣ ಕೋವಿಡ್ ವೈರಸ್ಸು ಉಳಿಸಿ ಹೋದ ಆಂತರಿಕ ದೌರ್ಬಲ್ಯವೇ ಇರಬೇಕು ಅನ್ನಿಸುತ್ತದೆ. ಅದರ ಬಗ್ಗೆ ಜಗತ್ತಿನಾದ್ಯಂತ ಅಧ್ಯಯನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಇವತ್ತಲ್ಲಾ ನಾಳೆ ಉತ್ತರ ಸಿಗುತ್ತದೆ, ನಿಜವಾಗಿಯೂ ಅದು ಅಸಹಜವೇ ಆಗಿದ್ದರೆ ಅದಕ್ಕೊಂದು ಪರಿಹಾರವೂ ಸಿಗುತ್ತದೆ. ಇದು ನಮ್ಮೆದೆಯೊಳಗಿನ ಹೃದಯದ ಮಾತಾಯಿತು. ಅದೆಂದೂ ದುರ್ಬಲವಾಗಬಾರದು, ಅಚಾನಕ್ಕಾಗಿ ನಿಂತೇ ಹೋಗುವಷ್ಟು ಮೃದುವಾಗಬಾರದು.
ಆದರೆ, ನಮ್ಮ ಮನಸ್ಸಿನೊಳಗೊಂದು – ಅಥವಾ ಮನಸ್ಸು ಅನ್ನುವುದೇ ಒಂದು – ಹೃದಯವಿದೆಯಲ್ಲಾ, ಅದು ಸದಾ ಮೃದುವಾಗಿಯೇ ಇರಬೇಕು, ದೇಹದ ಹೃದಯ ಬಡಿಯುತ್ತಿರುವ ಹಾಗೆ ಇದು ಸದಾ ಮಿಡಿಯುತ್ತಲೇ ಇರಬೇಕು. ಇನ್ನೊಬ್ಬರ ಕಷ್ಟ-ಸುಖಗಳಿಗೆ ಸುಖ-ದುಃಖಗಳಿಗೆ ನೋವು-ನಲಿವುಗಳಿಗೆ ಮಿಡಿಯುವ ಹೃದಯವಿದ್ದರೆ ಮನಸ್ಸು ಹಗುರವಾಗಿರುತ್ತದೆಯಂತೆ. ಹಗುರ ಮನಸ್ಸಿದ್ದ ಕಡೆ ಆರೋಗ್ಯ ಸಮೃದ್ಧವಾಗಿರುತ್ತದೆಯಂತೆ. ಅಂದರೆ, ಮನದ ಸ್ಪಂದನೆಯಲ್ಲಿ ನಮ್ಮೆದೆಯೊಳಗಿನ ಹೃದಯದ ಆರೋಗ್ಯದ ಗುಟ್ಟಿದೆ ಎಂದು ತಿಳಿಸಿದ್ದಾರೆ.
World Heart Day ಸಾರ್ವಜನಿಕ ಜೀವನದಲ್ಲಿರುವ ನಮಗಂತೂ ಈ ಸತ್ಯ ಗೊತ್ತಿರಲೇ ಬೇಕು. ಮಿಡಿದರಷ್ಟೇ ನಾವು ದುಡಿಯಲು ಸಾಧ್ಯ, ಬೆಳೆಯಲು ಸಾಧ್ಯ, ಬದುಕಲು ಸಾಧ್ಯ.
ನನ್ನ ಪ್ರಯತ್ನ ನಿರಂತರ.
ಹೃದಯ ಹುಷಾರು! ಜೋಪಾನವಾಗಿ ನೋಡಿಕೊಳ್ಳಿ.
ಹ್ಯಾಪಿ ವರ್ಲ್ಡ್ ಹಾರ್ಟ್ ಡೇ
ವಿಶ್ವ ಹೃದಯ ದಿನದ ಶುಭಾಶಯಗಳು ಎಂದು ಸಂಸದ ಬಿ .ವೈ. ರಾಘವೇಂದ್ರ ಅವರು ಹೇಳಿದ್ದಾರೆ.