Straight-talk ಮಹಿಳಾ ಮೀಸಲಾತಿ ವಿಧೇಯಕ ಉಭಯ ಸದನಗಳ ಒಪ್ಪಿಗೆ ಪಡೆದಿದೆ.ಲೋಕಸಭೆಯಲ್ಲಿ ಓವೈಸಿ ಪಕ್ಷದ ಇಬ್ಬರು ಮಾತ್ರ ಮಸೂದೆಯ ವಿರುದ್ಧ ಮತ ಹಾಕಿದ್ದರೆ , ರಾಜ್ಯ ಸಭೆಯಲ್ಲಿ ಸರ್ವಾನುಮತ ದೊರಕಿದೆ.
2029 ರ ಚುನಾವಣೆ ಮುಗಿದು ಪಲಿತಾಂಶ ಬಂದಾಗ ಪ್ರಪಂಚದಲ್ಲೇ ಅತಿ ಹೆಚ್ಚು ಮಹಿಳೆಯರು ಭಾರತದ ಸಂಸತ್ ಪ್ರವೇಶಿಸುವ ಅವಕಾಶ ಪಡೆದಿರುತ್ತಾರೆ.
ಮನಮೋಹನ್ ಸಿಂಗ್ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದಾಗ ಮುಲಯಂ, ಲಾಲೂ ಮತ್ತಿತರ ಯಾದವ್ ಪಕ್ಷದವರು ಮಸೂದೆಯ ಪ್ರತಿ ಹರಿದು ಗದ್ದಲ ಎಬ್ಬಿಸಿದ್ದರು.
ಮಹಿಳೆಯರ ಶೇ. 33 ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ,ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಮೀಸಲಾತಿ ಬೇಕು ಎಂದು ಅವರ ಒತ್ತಾಯ ಆಗಿತ್ತು.
ಮಮತಾ ಪಕ್ಷ ಸಹ ಮತದಾನ ಭಹಿಷ್ಕರಿಸಿತ್ತು. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ಬೆಂಬಲದಿಂದ ಮಸೂದೆ ರಾಜ್ಯ ಸಭೆಯ ಮೂರನೇ ಎರಡು ಬಹುಮತದೊಂದಿಗೆ ಅಂಗೀಕಾರ ಆಯಿತು. ಆದರೆ ಲೋಕಸಭೆಯಲ್ಲಿ ಅದರ ಮಂಡನೆ ಆಗಲೇ ಇಲ್ಲ.ಮೈತ್ರಿ ಪಕ್ಷಗಳು ಎಷ್ಟೇ ಒತ್ತಾಯ ಮಾಡಿದರೂ ಮೀಸಲಾತಿ ಒಳಗೆ ಮೀಸಲಾತಿ ಕೊಡಲು ಕಾಂಗ್ರಸ್ ಒಪ್ಪಲಿಲ್ಲ. ಆಗಿನ ಕಾನೂನಿನ ಮಂತ್ರಿ ವೀರಪ್ಪ ಮೊಯಿಲಿ ಈ ಒಳ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದಿದ್ದರು. ಈಗ ಅದೇ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿಯವರು ಒಳ ಮೀಸಲಾತಿಗೆ ಒತ್ತಾಯ ಮಾಡುತ್ತಿದ್ದಾರೆ.
ರಾಹುಲ್ ಸೇರಿದಂತೆ ಐಎನ್ ಡಿಎ ಕೂಟದ ಎಲ್ಲರದ್ದೂ ಒಕ್ಕೊರಲ ಒತ್ತಾಯ ಒಳ ಮೀಸಲಾತಿಗೆ. ಮೋದಿಯವರಿಗೆ ಐತಿಹಾಸಿಕ ಮಸೂದೆ ತಂದ ಕೀರ್ತಿ ದೊರಕದಿರುವಂತೆ ಮಾಡಲು ಇದು ವಿರೋಧ ಪಕ್ಷಗಳ ತಂತ್ರ. ಹಿಂದುಳಿದವರ ವಿರೋಧಿ ಮೋದಿ ಎಂದು ಬಿಂಬಿಸಲು ಸರ್ವ ಪ್ರಯತ್ನವನ್ನೂ ಮಾಡಲಾಗುತ್ತಿದೆ.ಹಿಂದುಳಿದ ವರ್ಗದ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ನೀಡಿದಾಗಲೂ ಜಾತಿವಾರು ಜನಗಣತಿಗೆ ಇದೇ ರೀತಿ ಒತ್ತಾಯ ತರಲಾಗಿತ್ತು. ಸ್ವಾತಂತ್ರ್ಯ ಭಾರತದ ಮೊದಲ ಜನಗಣತಿ ನಡೆದಾಗಲೇ ಜಾತಿ ಗಣತಿ ಒತ್ತಾಯ ಬಂದಿತ್ತು. ಆಗ ನೆಹರೂ,ಪಟೇಲ್ ಮತ್ತು ಅಂಬೇಡಕರ್ ರಂತವರು ಇದು ಸಮಾಜದ ವಿಘಟನೆಗೆ ದಾರಿಯಾಗುತ್ತದೆ ಎಂದು ಜಾತಿ ಗಣತಿಗೆ ವಿರೋಧಿಸಿದ್ದರು.
ಆದರೆ ಯುಪಿಎ ಸರ್ಕಾರ ಇದ್ದಾಗ ಇದೇ ಮಿತ್ರ ಪಕ್ಷಗಳ ಒತ್ತಡಕ್ಕೊಳಗಾಗಿ ಐದು ಸಾವಿರ ಕೋಟಿ ಖರ್ಚು ಮಾಡಿ 2011 ರಲ್ಲಿ ಜಾತಿ ಗಣನೆ ಮಾಡಲಾಗಿತ್ತು. ಆದರೆ ಆ ವರದಿ ಸರ್ಕಾರ ಪ್ರಕಟಿಸಲಿಲ್ಲ.ಈಗ ರಾಹುಲ ಗಾಂಧಿಯವರು ಮೋದಿ ವರದಿ ಪ್ರಕಟಿಸಿಲ್ಲ ಎಂದು ಪಟಾಕಿ ಹಾರಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಯ ಮೀಸಲಾತಿ ವಿವಾದದಲ್ಲಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಈ ಜನಗಣತಿ ಪ್ರಕಟಿಸಲು ಯೋಗ್ಯವಿಲ್ಲ ಎಂದಿದೆ.ಇಲ್ಲಿ ಜಾತಿಗಳ ಸಂಖ್ಯೆ 4000 ದಿಂದ 40 ಲಕ್ಷ ಆಗಿರುವುದನ್ನು ಕೇಂದ್ರ ಎತ್ತಿ ತೋರಿದೆ.ಜೊತೆಗೆ ಈ ಗಣತಿ ವೈರುಧ್ಯಗಳ ಜೊತೆಗೇ ಅಪರಿಪೂರ್ಣ ಎಂದು ಹೇಳಿದೆ.ಮಹಾರಾಷ್ಟ್ರದಲ್ಲಿ ಒಂದು ಕೋಟಿ ಜನರ ಫಾರಂ ನಲ್ಲಿ ಜಾತಿ ವಿವರ ಭರ್ತಿ ಆಗಿಲ್ಲ.ಈ ವರದಿ ಆಧಾರದ ಮೀಸಲಾತಿ ಅಸಾಧ್ಯ ಎಂಬ ಸಂಗತಿ ಕೇಂದ್ರ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದಿದೆ. ನಮ್ಮ ಕರ್ನಾಟಕದಲ್ಲೇ ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ನಡೆಸಿತ್ತು. ಆದರೆ ಆ ವರದಿ ಪ್ರಕಟಿಸಲಿಲ್ಲ. ನೂರಾರು ಕೋಟಿ ಖರ್ಚಿನ ಈ ವರದಿ ಈಗಿನ ಸಿದ್ದರಾಮಯ್ಯ ಸರ್ಕಾರವೂ ಪ್ರಕಟಿಸುವುದು ಅನುಮಾನ. ರಾಹುಲ ಗಾಂಧಿಯವರು ತಮ್ಮ ಪಕ್ಷದ ಸರ್ಕಾರ ವರದಿ ಬಹಿರಂಗ ಪಡಿಸದಿರುವಾಗಲೂ ಮೋದಿಯವರ ಮೇಲೆ ಆಪಾದನೆ ಮಾಡುತ್ತಿದ್ದಾರೆ.
Straight-talk ಹಿಂದುಳಿದ ವರ್ಗದ ಮೇಲೆ ಅವರಿಗೆ ಯಾಕೋ ಪ್ರೀತಿ ಉಕ್ಕುತ್ತಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಹಿಂದುಳಿದವರಿದ್ದಾರೆ,ನನಗೆ ಸಿಟ್ಟು ಬರುತ್ತಿದೆ ಎಂದು ಅವರು ಮೋದಿಯವರನ್ನ ಖಂಡಿಸಿದ್ದಾರೆ!.
ಕೇಂದ್ರ ಸರ್ಕಾರದ ಮಂತ್ರಿಗಳಲ್ಲಿ ಪ್ರದಾನ ಮಂತ್ರಿಯೂ ಸೇರಿ 29 ಹಿಂದುಳಿದ ವರ್ಗದವರಿದ್ದಾರೆ.ಇದು ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು. 303 ಆಡಳಿತ ಪಕ್ಷದ ಲೋಕಸಭೆಯ ಸದಸ್ಯರಲ್ಲಿ 85 ಹಿಂದುಳಿದ ವರ್ಗದವರು.1358 ಬಿಜೆಪಿಯ ಶಾಸಕರಲ್ಲಿ 365 ಹಿಂದುಳಿದ ವರ್ಗದವರು.ಈ ಎಲ್ಲಾ ಸಂಖ್ಯೆಯೂ ಒಂದು ದಾಖಲೆ.ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಿಸುವಾಗಲೇ ಹಿಂದುಳಿದ ವರ್ಗದವರಿಗೆ ಬಿಜೆಪಿ ಹೆಚ್ಚು ಸ್ಥಾನ ಕೊಟ್ಟಿದೆ.ಇದನ್ನು ಮಾಡಲು ಯಾವ ಕಾಯ್ದೆ ತಿದ್ದಬೇಕಿಲ್ಲ.ವಿರೋಧ ಪಕ್ಷಗಳಿಗೆ ನೈಜ ಹಿಂದುಳಿದ ವರ್ಗದವರ ಮೇಲೆ ಪ್ರೀತಿ ಇದ್ದರೆ ಅವರು ತಮ್ಮ ಅಭ್ಯರ್ಥಿ ಆಯ್ಕೆಯಲ್ಲೇ ಮೀಸಲಿಟ್ಟರಾಯಿತು.ಈಗ ಮೊಸಳೆ ಕಣ್ಣೀರು ಸುರಿಸುವ ಇವರ್ಯಾರೂ ಚುನಾವಣೆಯ ಸಂಧರ್ಭ ಇದನ್ನೆಲ್ಲಾ ಮರೆತು ಬಿಡುತ್ತಾರೆ.
ಮಹಿಳೆಯರ ಮೀಸಲಾತಿಯಲ್ಲೂ ಇದೇ ಕ್ರಮ ಮಾಡಲು ಯಾರ ಅಡ್ಡಿ ಇದೆ.ಬಿಜೆಪಿ ತನ್ನ ಎಲ್ಲಾ ಸಮಿತಿಯಲ್ಲೂ ಮಹಿಳೆಯರಿಗೆ ಶೇಕಡ 33 ಮೀಸಲಾತಿ ಕೊಟ್ಟಿದೆ.ಅದು ಬದ್ದತೆ.ಬರಿದೇ ಬಾಯಿ ಇದೆ ಎಂದು ಬೇಕಾ ಬಿಟ್ಟಿ ಮಾತನಾಡುವ ಒಬ್ಬನಾದರೂ ವಿರೋಧ ಪಕ್ಷದ ನಾಯಕನಿಗೆ ಬದ್ಧತೆ ಇಲ್ಲವಲ್ಲ.
ಹೀಗೀದ್ದೂ ಮಹಿಳೆಯರ ಪ್ರಾತಿನಿಧ್ಯಕ್ಕೆ ಭಯಂಕರ ವಿರೋಧ ಇದ್ದವರಿಲ್ಲಾ ಈಗ ಬಾಯಿ ಮುಚ್ಚಿ ಮೀಸಲಾತಿ ಬೆಂಬಲಕ್ಕೆ ನಿಂತಿದ್ದು ಮೋದಿ ಫೋಬಿಯಾ ಪರಿಣಾಮ. ಈ ವ್ಯಕ್ತಿ ನಾವೆಲ್ಲ ಮಹಿಳೆಯರ ವಿರುದ್ಧ ಇರುವವರು ಎಂದು ಅಚ್ಚೊತ್ತಿ ಬಿಟ್ಟರೆ ಗತಿ ಏನು ಎಂದು ಹೆದರಿ ಬೆಂಬಲ ನೀಡೇ ಬಿಟ್ಟಿದ್ದಾರೆ.
ದೇಶದ ಚುಕ್ಕಾಣಿ ಹಿಡಿದಿರುವ ಮೋದಿಯವರಿಗೆ ಯಾವ ಕೀರ್ತಿಯೂ ಬರಬಾರದು ಎಂದು ವಿರೋಧ ಪಕ್ಷದ ಬಯಕೆ.ಅದಕ್ಕಾಗೇ ಏನೇ ಮಾಡಿದಾಗಲೂ ಮೆಚ್ಚುವ ಪ್ರಶ್ನೆ ಇಲ್ಲ.ಚಂದ್ರಯಾನ ಕೀರ್ತಿ ಬರಬಾರದು ಎಂದು ಇಸ್ರೋ ಸಂಬಳ ಕೊಡುತ್ತಿಲ್ಲ ಎಂದು ಸಾರಿದರು.ಇಸ್ರೋ ಅಧ್ಯಕ್ಷ ಸೇರಿದಂತೆ ಅನೇಕರು ಇದು ಅಸತ್ಯ ಎಂದ ಮೇಲೂ ಪಾರ್ಲಿಮೆಂಟಿನಲ್ಲೇ ಸಂಬಳ ಕೊಡದವರು ಎಂದು ಮಹಿಳಾ ಸದಸ್ಯರೊಬ್ಬರು ಕೂಗಾಡಿದರು!.ಈ ಕೂಗಾಟ ಸಾಮಾಜಿಕ ಜಾಲತಾಣ ಮೂಲಕ ವೈರಲ್ ಮಾಡುವ ತಂತ್ರ.ಭಾರತದಲ್ಲಿ ಆಗಿದ್ದೆಲ್ಲಾ ನೆಹರೂ ಕನಸು,ಇಂದಿರಾ ಶ್ರಮ ಮತ್ತು ರಾಜೀವರ ಪ್ರಯತ್ನ ಎಂದು ಸುಳ್ಳು ಸಾರುವ ಕಾಂಗ್ರೆಸ್ ಉಳಿದೆಲ್ಲರೂ ಅಪ್ರಯೋಜಕರು ಎಂದು ಬೊಬ್ಬಿರಿಯುತ್ತದೆ. ರಾಜೀವ್ ಮಹಿಳೆಯರ ಪ್ರಾತಿನಿಧ್ಯ ಸ್ಥಳೀಯ ಆಡಳಿತದಲ್ಲಿ ತರ ಹೊರಟಾಗ ಆದ್ವಾಣಿ, ವಾಜಪೇಯಿ ಮುಂತಾದ ಬಿಜೆಪಿಯ ಪಡೆ ವಿರೋಧಿಸಿತು ಎಂದು ವೇಣುಗೋಪಾಲ್ ಹೇಳಿದರು.
ಆದರೆ ಆಗ ಕಾಂಗ್ರೆಸ್ಸಿನ ಹೊರತಾದ ಎಲ್ಲರೂ ರಾಜ್ಯದ ಅಧಿಕಾರದಲ್ಲಿ ಆ ಮಸೂದೆಯ ಹಸ್ತಕ್ಷೇಪ ವಿರೋಧಿಸಿದ್ದು. ನರಸಿಂಹ ರಾವ್ ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರ ಮೀಸಲಾತಿ ತಂದವರು.ಆದರೆ ಕಾಂಗ್ರೆಸ್ ಅವರ ಹೆಸರು ಹೇಳದು.
ಈಗಿಂದೀಗ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತನ್ನಿ ಎಂದು ಕಾಂಗ್ರೆಸ್ಸಿನ ಒತ್ತಾಯ.ಆದರೆ ಯಾವ ಕ್ಷೇತ್ರ ಮಹಿಳೆಯರಿಗೆ ಎಂದು ಸರ್ಕಾರ ನಿರ್ಧಾರ ಮಾಡಿದರೆ ಯಾರೂ ಒಪ್ಪುವುದಿಲ್ಲ. ಅದಕ್ಕಾಗೇ ಪ್ರಥಮ ಮೀಸಲಾತಿ ಸಂವಿಧಾನಿಕ ಸಂಸ್ಥೆಯೇ ಮಾಡಿದರೆ ಮುಂದೆ ಅನುಕ್ರಮದ ಆಧಾರದಲ್ಲಿ ಮುಂದುವರೆಸಬಹುದು. ಈ ಐತಿಹಾಸಿಕ ನಿರ್ಣಯದ ಕೀರ್ತಿ ಮೋದಿಯವರಿಗೆ ಕೊಡಲೇ ಬಾರದು ಎಂದು ವಿರೋಧ ಪಕ್ಷಗಳ ದೊಂಬರಾಟ ಯಶಸ್ವಿ ಆಗಲಾರದು. ಮುಂದಿನ ಬಾರಿ ಮೋದಿಯವರ ಸರ್ಕಾರ ಸಮಾನ ನಾಗರೀಕ ಸಂಹಿತೆ,ಒಂದು ದೇಶ ಒಂದು ಚುನಾವಣೆ ಜಾರಿಗೆ ತರುವ ಎಲ್ಲಾ ಸಾಧ್ಯತೆ ಇದೆ.ಮೂರನೇ ಅವಧಿಯಲ್ಲೂ ಅನೇಕ ಐತಿಹಾಸಿಕ ನಿರ್ಣಯದ ಮೂಲಕ ಭಾರತ ಭಾಗ್ಯವಿಧಾತ ಆಗಿ ಮೋದಿ ದಾಖಲಾಗಲಿದ್ದಾರೆ.
ಲೇಖಕ:
ಪ್ರಭಾಕರ ಕಾರಂತ,
ಹೊಸಕೊಪ್ಪ ಶೃಂಗೇರಿ.