Dr. Selvamani R ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬoಧಿಸಿದoತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಅರ್ಹ ಪದವೀಧರರು ಹಾಗೂ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಕರೆ ನೀಡಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬoಧಿಸಿದoತೆ ಏರ್ಪಡಿಸಲಾಗಿದ್ದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಚುನಾವಣೆಯಲ್ಲಿ ಪ್ರಜ್ಞಾವಂತರಾದ ಪದವೀಧರರು ಹಾಗೂ ಶಿಕ್ಷಕರು ಮತ ಚಲಾವಣೆ ಮಾಡಬೇಕಾಗಿರುವುದರಿಂದ ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ, ನಿಗಧಿಪಡಿಸಿದ ದಿನಾಂಕದoದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ಪ್ರಸಕ್ತ ಅವಧಿಯಲ್ಲಿ ಹೊಸದಾಗಿ ಸುಮಾರು 1 ಲಕ್ಷ ಮತದಾರರನ್ನು ಪಟ್ಟಿಗೆ ಸೇರಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಕಳೆದ ಸಾಲಿನಲ್ಲಿ ಅನೇಕ ಪ್ರಯತ್ನಗಳ ನಂತರ ಸುಮಾರು 27000 ಮತದಾರರನ್ನು ಮಾತ್ರ ನೋಂದಾಯಿಸಲಾಗಿತ್ತು.
ಅರ್ಹರು ಸ್ವಯಂ ಪ್ರೇರಿತರಾಗಿ ಹೆಸರನ್ನು ನೋಂದಾಯಿಸಿಕೊಳ್ಳಲು ಮುಂದಾಗುವoತೆ ಅವರು ಮನವಿ ಮಾಡಿದರು.
ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸುವ ಸಂಬoಧ ಹೆಚ್ಚಿನ ಸಂಖ್ಯೆಯ ಪದವೀಧರರು ಇರುವ ವಿವಿಧ ಇಲಾಖೆಗಳು ಹಾಗೂ ಸಂಘ-ಸoಸ್ಥೆಗಳ ಮುಖ್ಯಸ್ಥರುಗಳಿಗೆ ಹಾಗೂ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಿಕ್ಷಣ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಮಾಹಿತಿ ನೀಡಿ, ನಿಗಧಿತ ನಮೂನೆಯಲ್ಲಿ ನೋಂದಣಿಗೆ ಅರ್ಜಿಯನ್ನು ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗುವುದು. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಮತದಾರರು ಪಟ್ಟಿಗೆ ಸೇರ್ಪಡೆಗೊಳ್ಳುವ ಆಶಯವಿದೆ ಎಂದವರು ನುಡಿದರು.
ಈ ಚುನಾವಣೆಯ ನೋಂದಣಿ ಮತ್ತು ಮತದಾನಕ್ಕೆ ಸಂಬoಧಿಸಿದoತೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಕಾರ್ಯಕ್ಷೇತ್ರದಲ್ಲಿ ಏಜೆಂಟರನ್ನು ನೇಮಿಸಿ, ಅರ್ಹ ಮತದಾರರನ್ನು ಗುರುತಿಸಿ, ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ಚುನಾವಣೆಗೆ ಸಂಬoಧಿಸಿದoತೆ ಸಕಾಲದಲ್ಲಿ ನಿಯಮಾನುಸಾರ ನಡೆಸುವ ಪ್ರಕ್ರಿಯೆಗಳು ನಡೆಯುವಂತೆ ನೋಡಿಕೊಳ್ಳಲು ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಆಯುಕ್ತರು, ವಿಧಾನಸಭಾ ಹಾಗೂ ತಾಲೂಕುಗಳ ಮತದಾರರ ಸಹಾಯಕ ನೋಂದಣಾದಿಕಾರಿಗಳು, ಪತ್ರಾಂಕಿತ ಅಧಿಕಾರಿಗಳನ್ನು ನಿಯೋಜಿಸಿ, ಅವರಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು ಎಂದರು.
Dr. Selvamani R ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಇದೇ ಮಾಹೆಯ 30 ರಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆ ಹೊರಡಿಸಲಿದ್ದಾರೆ. ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಅರ್ಹ ಮತದಾರರು ನವೆಂಬರ್ 6ರೊಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿರುವ ಅವರು, ಪದವೀಧರರ ಕ್ಷೇತ್ರಕ್ಕೆ ಹೆಸರು ನೋಂದಾಯಿಸುವವರು 2023ರ ನವೆಂಬರ್ 1ಕ್ಕೆ ಅನ್ವಯಗೊಳ್ಳುವಂತೆ ಮೂರು ವರ್ಷಗಳ ಹಿಂದಿನ ದಿನಾಂಕಕ್ಕೆ ಭಾರತದ ಸರಹದ್ದಿನಲ್ಲಿನ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಕ್ಷೇತ್ರ ವ್ಯಾಪ್ತಿಯ ನಿವಾಸಿಯಾಗಿರಬೇಕು. ಪದವೀಧರರ ಕ್ಷೇತ್ರಕ್ಕೆ ನಿಗಧಿಪಡಿಸಿದ ಅರ್ಜಿ ನಮೂನೆ-18 ಪದವಿ ಪ್ರಮಾಣಪತ್ರ, ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂಧಿಯಾಗಿದ್ದಲ್ಲಿ ನಿಗಧಿಪಡಿಸಿದ ನಮೂನೆಯಲ್ಲಿ ದೃಢೀಕರಿಸಿದ ಮಾಹಿತಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಸೇರಿದಮತೆ ಯಾವುದೇ ಸಾಮಾನ್ಯ ನಿವಾಸಿ ದಾಖಲೆಗಳನ್ನು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ದೃಢೀಕರಿಸಿ, ತಾಲೂಕು, ಮಹಾನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ತೆರೆಯಲಾದ ಕೌಂಟರುಗಳಲ್ಲಿ ಸಲ್ಲಿಸುವಂತೆ ಅವರು ಸೂಚಿಸಿದರು.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿಚ್ಚಿಸುವ ಶಿಕ್ಷಕರು 2023ರ ನವೆಂಬರ್ 1ಕ್ಕೆ ಅನ್ವಯಗೊಳ್ಳುವಂತೆ ಆರು ವರ್ಷಗಳ ಹಿಂದಿನ ದಿನಾಂಕಕ್ಕೆ ಅಂದರೆ, 2017ರ ಅಕ್ಟೋಬರ್ ನಂತರದಲ್ಲಿ ಮೂರು ವರ್ಷಗಳು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಕುರಿತು ನಮೂನೆ-19ರ ಜೊತೆಗೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದು, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಸೇರಿದಮತೆ ಯಾವುದೇ ಸಾಮಾನ್ಯ ನಿವಾಸಿ ದಾಖಲೆಗಳನ್ನು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ದೃಢೀಕರಿಸಿ, ತಾಲೂಕು, ಮಹಾನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ತೆರೆಯಲಾದ ಕೌಂಟರುಗಳಲ್ಲಿ ಸಲ್ಲಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಎಂದವರು ತಿಳಿಸಿದರು.
ಈ ಚುನಾವಣೆ ಸಂಬoಧದ ಕುರಿತು ಅಗತ್ಯ ವಿಷಯಗಳನ್ನು ಚರ್ಚಿಸಲು ಮತ್ತೊಮ್ಮೆ ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಮತದಾರರ ಯಾದಿಗೆ ಹೆಸರು ಸೇರ್ಪಡೆಗೊಳಿಸಲು ಏಕರೀತಿಯ ಅರ್ಜಿ ನಮೂನೆಗಳನ್ನು ಚುನಾವಣಾ ಶಾಖೆಯಿಂದಲೇ ನೀಡುವಂತೆ ಹಾಗೂ ಸಲ್ಲದ ಕಾರಣಕ್ಕಾಗಿ ಅರ್ಜಿಗಳನ್ನು ವಜಾಗೊಳಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸ್ಪರ್ಧಾಕಾಂಕ್ಷಿಗಳು ಹಾಗೂ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.