Ganesh Chaturthi ಹಬ್ಬ-ಉತ್ಸವಗಳು ಶಾಂತಿ-ಸೌಹಾರ್ದತೆಯ ಸಂದೇಶವನ್ನು ಬಿತ್ತಿದಾಗ ಉತ್ತಮ ಸಮಾಜ ಮತ್ತಷ್ಟು ಬಲಿಷ್ಟವಾಗುತ್ತದೆ ಎಂದು ಆನಂದಪುರದ ಹೆಡ್‌ಕಾನ್ಸ್ಟೇಬಲ್ ಮುಹಮ್ಮದ್ ತಾಹೀರ್ ಹುಸೇನ್ ಹೇಳಿದರು.
ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 18ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗೋ ಸಂರಕ್ಷಣಾ ಹೋರಾಟ ಸಮಿತಿಯವರು ಗೋವುಗಳ ರಕ್ಷಣೆಯಂತ ಕೆಲಸ ಮಾಡುತ್ತಿದ್ದಾರೆ.
ಗಣೇಶೋತ್ಸವದ ಸಂದರ್ಭದಲ್ಲಿ ತಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಸರ್ಕಾರಿ ವೃತ್ತಿಯಲ್ಲಿ ಅನೇಕ ಒತ್ತಡಗಳು ಇರುತ್ತದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ. ವೃತ್ತಿಗೆ ಸೇರ್ಪಡೆಯಾದ ದಿನದಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಸಂಕಲ್ಪ ಮಾಡಿದ್ದೆನು. ಮುಂದೆಯೂ ಸಹ ಇದೇ ಹಾದಿಯಲ್ಲಿ ನಡೆಯುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗೋಪಾಲಕರ ಅಭಾವದಿಂದ ದೇಶೀಯ ತಳಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ದೇಶೀಯ ತಳಿಯ ಗೋವುಗಳ ರಕ್ಷಣೆಗೆ ಗೋಪಾಲಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಮಿತಿಯಿಂದ ಪ್ರತಿ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಗೋಪಾಲಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಈ ವರ್ಷದ ಉತ್ಸವದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ಸರ್ಕಾರಿ ಇಲಾಖೆಯಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಪ್ರಾಮಾಣಿಕರು ಎನಿಸುವುದು ಸಮಾಜದಲ್ಲಿ ಕಷ್ಟಸಾಧ್ಯ. ಮುಹಮ್ಮದ್ ತಾಹೀರ್ ಅವರನ್ನು ಸಮಾಜವೇ ಉತ್ತಮ ವ್ಯಕ್ತಿ ಎಂದು ಗುರುತಿಸಿದೆ. ಸಮಾಜದಲ್ಲಿ ಸೇವೆ ಸಲ್ಲಿಸಲು ಅನೇಕ ಮಾರ್ಗಗಳಿವೆ. ಈ ನಿಟ್ಟಿನಲ್ಲಿ ಮಹೇಶ್ ಕಾಳೆ ಅವರು ಬಸ್ ಏಜೆಂಟ್ ಆಗಿ ಸುಮಾರು 43 ವರ್ಷಗಳಿಂದ ಹಾಗೂ ಸಹಕಾರಿ ಕ್ಷೇತ್ರದಲ್ಲಿಯೂ ಸಾರ್ವಜನಿಕರಿಗೆ ಸ್ಪಂದಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಮಿತಿಯಿಂದ ಕಳೆದ 18 ವರ್ಷಗಳಿಂದ ಸಮಾಜಮುಖಿಯಾಗಿ ಜನ ಮತ್ತು ಜಾನುವಾರುಗಳ ಸೇವೆ ಮಾಡುತ್ತಾ ಬರುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸ್ ಏಜೆಂಟ್ ಮಹೇಶ್ ಕಾಳೆ, ಗೋಪಾಲಕ ನಾಗರಾಜ ಹಳೇಸೊರಬ ಅವರನ್ನು ಸನ್ಮಾನಿಸಲಾಯಿತು.
Ganesh Chaturthi ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ನಿವೃತ್ತ ಉಪತಹಶೀಲ್ದಾರ್ ಪ್ರಭಾಕರ್ ಗೋಖಲೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಕಾರ್ಯದರ್ಶಿ ರಾಜೇಂದ್ರ ಜೈನ್, ಉಪಾಧ್ಯಕ್ಷ ಯು.ಎಸ್. ಶರತ್ ಸ್ವಾಮಿ, ಖಜಾಂಚಿ ದತ್ತಾತ್ರೇಯ, ಪ್ರಮುಖರಾದ ಎಂ.ಬಿ. ನಾಗರಾಜ, ಮಂಜುನಾಥ ಗುತ್ತಿ, ವಿಜಯಗೌಳಿ, ವಿ. ವೀರಭದ್ರ, ಶಿವಯೋಗಿ ಸ್ವಾಮಿ, ಅನೀಲ್, ನಮಾಮಿಇಂದ್ರ, ಅಭಿ ಹೊಯ್ಸಳ, ರಾಜಣ್ಣ, ಗಿರೀಶ್, ವಿನಯ್, ಸುರೇಶ್ ಗೌಡ ಕುಪ್ಪೆ, ಮುತ್ತು, ಸೇರಿದಂತೆ ಇತರರಿದ್ದರು.