Sri Uttaradi Math ಇಂದ್ರಿಯಗಳು ಕುದುರೆ ಇದ್ದಂತೆ. ದೇಹವೆಂಬ ರಥವನ್ನು ಎಳೆಯುವುದು ಈ ಕುದುರೆಗಳೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ
ಶುಕ್ರವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶ ನೀಡಿದರು.
ಶರೀರ ಎಂಬ ರಥವನ್ನು ಮುಂದೆ ನಡೆಸುವುದು ಇಂದ್ರಿಯಗಳು. ಹೀಗಾಗಿ ಇಂದ್ರಿಯಗಳನ್ನು ಉಪನಿಷತ್ತುಗಳಲ್ಲಿ ಕುದುರೆಗೆ ಹೋಲಿಸಿದ್ದಾರೆ. ಇಂತಹ ಇಂದ್ರಿಯಗಳನ್ನು ನಿಗ್ರಹಿಸಬೇಕು. ನಿಗ್ರಹಿಸದಿದ್ದರೆ ಕುದುರೆ ಅಡ್ಡಾದಿಡ್ಡಿಯಾಗಿ ಓಡಿದರೆ ಪಾಪಸಾಧನಕ್ಕೆ ಕಾರಣವಾಗುತ್ತದೆ ಎಂದರು.
ನೋಡಬಾರದ್ದು ನೋಡಿದರೆ, ಕೇಳಬಾರದ್ದು ಕೇಳಿದರೆ, ದೇವರ ನಿಂದೆ, ನಾಸ್ತಿಕ್ಯದವಾದ ಇವೆಲ್ಲವೂ ಇಂದ್ರಿಯಗಳಿಗೆ ರೋಗ ಇದ್ದಂತೆ. ಇಂತಹ ರೋಗಗಳು ಬಾರದಂತೆ ಇಂದ್ರಿಯಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರು.
ಪ್ರವಚನ ನೀಡಿದ ಪಂಡಿತ ಸರ್ವಜ್ಞಾಚಾರ್ಯ ಕಲ್ಲಾಪುರ, ವಾಯುವಿನ ಸಂಚಾರ ಆದಾಗ ದುರ್ಗಂಧವೂ ಬರುತ್ತದೆ, ಸುಗಂಧವೂ ಬರುತ್ತದೆ. ಆದರೆ ವಾಯು ನಿರ್ವಿಕಾರ. ಅದೇ ರೀತಿ ಯೋಗಿಯಾದವನು ಪದಾರ್ಥ ಸಂಪರ್ಕವನ್ನು ಪಡೆದರೂ ಜೀವನದಲ್ಲಿ ವಿಕಾರ ಹೊಂದಬಾರದು. ಜಲದಿಂದ ನಾವು ಶುದ್ಧರಾಗುತ್ತೇವೆ. ಅದೇರೀತಿ ನಮ್ಮನ್ನು ನೋಡಿದರೆ ಒಬ್ಬರು ಶುದ್ಧಿಯಾಗುವಂತೆ ಬದುಕಬೇಕು ಎಂದರು.
ಪ0ಡಿತ ಬಿಂದುಮಾಧವಾಚಾರ್ಯ ಜೋಷಿ ಪ್ರವಚನ ನೀಡಿದರು.
ಶ್ರೀರಂಗ ಕ್ಷೇತ್ರದಿಂದ ತಂದಿದ್ದ ಶೇಷವಸ್ತ್ರ ಹಾಗೂ ಪ್ರಸಾದವನ್ನು ಶ್ರೀಪಾದಂಗಳವರಿಗೆ ಸಮರ್ಪಿಸಲಾಯಿತು.
Sri Uttaradi Math ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ವಿದ್ಯಾ ಶಾಚಾರ್ಯ ಗುತ್ತಲ, ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ಯ, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಮೊದಲಾದವರಿದ್ದರು