Friday, November 22, 2024
Friday, November 22, 2024

Shivamogga Smart City ಸ್ಮಾರ್ಟ್ ಸಿಟಿ ಸಾರ್ವಜನಿಕ ಸ್ಪಂದನ:ಅಪೂರ್ಣ ಕಾಮಗಾರಿಗಳ ಬಗ್ಗೆ ಅಸಮಾಧಾನ

Date:

Shivamogga Smart City ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಟಾನಗೊಳಿಸಲಾಗಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದಿ: 12-09-2023 ರಂದು ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಮತ್ತು ಪರಿಹಾರಾತ್ಮಕ ಕ್ರಮಗಳ ಬಗ್ಗೆ ಸಭೆ ನಡೆಸಲಾಯಿತು.

ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಣ್ಣ ಗೌಡ ಮಾತನಾಡಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ 930 ಕೋಟಿ ಮಂಜೂರಾಗಿದೆ. 71 ಕಾಮಗಾರಿಗಳ ಪೈಕಿ 66 ಕಾಮಗಾರಿಗಳು ಭೌತಿಕವಾಗಿ ಮತ್ತು ಆರ್ಥಿಕವಾಗಿ ಪೂರ್ಣಗೊಂಡಿದೆ. 5 ಕಾಮಗಾರಿಗಳು ಪ್ರಗತಿಯಲ್ಲಿವೆ. 6.0 ಚ.ಕಿ.ಮೀ ನ್ನು ಎಬಿಡಿ ಏರಿಯಾ ಅಭಿವೃದ್ದಿಗೆ ಪರಿಗಣಿಸಲಾಗಿದೆ.

ದಿ: 03-09-2020 ರಿಂದ 01-06-2022 ರವರೆಗೆ ಒಟ್ಟು 952 ಅಹವಾಲು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ದಿ: 01-06-2022 ರಿಂದ ಪ್ರಸ್ತುತದವರೆಗೆ 1408 ಅಹಲವಾಲು ಸ್ವೀಕರಿಸಿದ್ದು 1385 ವಿಲೇವಾರಿಯಾಗಿದ್ದು 23 ಬಾಕಿ ಉಳಿದಿದೆ ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ಸ್ವೀಕರಿಸಲಾಗುವ ಅಹವಾಲುಗಳನ್ನು ವರ್ಗೀಕರಿಸಿ ಕ್ರಿಯಾಯೋಜನೆ ರೂಪಿಸಿ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಗ್ರಾಹಕ ಹಿತರಕ್ಷಣೆ ಒಕ್ಕೂಟದ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಸ್ಮಾರ್ಟ್‍ಸಿಟಿ ಕಾಮಗಾರಿಗಳ ಕುರಿತು ನಾಗರೀಕರಲ್ಲಿ ಅನೇಕ ದೂರುಗಳಿವೆ. ಸಮಸ್ಯೆ ಪರಿಹಾರಕ್ಕೆ ಮೊದಲು ಸ್ಥಳವೀಕ್ಷಣೆ ಆಗಬೇಕು. ಹಲವಾರು ವಿಷಯಗಳಲ್ಲಿ ಸ್ಪಷ್ಟತೆ ಇಲ್ಲ. ಸ್ಮಾರ್ಟ್‍ಸಿಟಿ ಕಾಮಗಾರಿಗಳಿಗೆ ಸ್ಮಾರ್ಟ್‍ಸಿಟಿಯಿಂದ 5 ವರ್ಷಗಳ ನಿರ್ವಹಣೆ ಇದೆ ಎಂದಿದ್ದು, ಕಾಲಾವಧಿಯನ್ನು ತಿಳಿಸಬೇಕು. ಹಾಗೂ ಭಾಗೀದಾರರ ಸಭೆಗಳು ನಡೆದಿಲ್ಲ. ಆದ್ದರಿಂದ ಅನೇಕ ಸಮಸ್ಯೆಗಳು ತಲೆದೋರಿವೆ ಎಂದರು.

ಸ್ಮಾರ್ಟ್‍ಸಿಟಿ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಉತ್ತರಿಸಿ, ದಿ: 03-6-2023 ರಿಂದ 5 ವರ್ಷಗಳ ಕಾಲ ಪಾರ್ಕ್ ಹೊರತುಪಡಿಸಿ ಇನ್ನುಳಿದ ಕಾಮಗಾರಿಗಳಿಗೆ ಸ್ಮಾರ್ಟ್‍ಸಿಟಿ ವತಿಯಿಂದ ನಿರ್ವಹಣೆ ಇದೆ ಎಂದರು.

ನಾಗರೀಕ ಹಿತ ರಕ್ಷಣಾ ವೇದಿಕೆಯ ಜನಾರ್ಧನ ಪೈ ಮಾತನಾಡಿ, ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ಗ್ರೀನ್ ಅರ್ಬನೈಸೇಷನ್ ಕೈಗೊಳ್ಳಲಾಗಿದೆ. ಎಲ್ಲಿ ಗಿಡಗಳನ್ನು ನೆಡಲಾಗಿದೆ. ಗಿಡಗಳು ಯಾವ ಸ್ಥಿತಿಯಲ್ಲಿವೆ. ಕಾರ್ಯಪಾಲಕ ಇಂಜಿನಿಯರ್ 8600 ಗಿಡಗಳು ಇದ್ದಾವೆ ಎನ್ನುತ್ತಿದ್ದು, ಅದರ ಬಗ್ಗೆ ಭೌತಿಕ ಪರಿಶೀಲನೆ ಆಗಬೇಕು. ಲಕ್ಷ್ಮಿ ಟಾಕೀಸ್ ರಸ್ತೆಯಲ್ಲಿ ಸಾರ್ವಜನಿಕರು ಬೇಡವೆಂದರೂ ಉಪಯೋಗವಿಲ್ಲದ ಸೈಕಲ್ ಪಾಥ್ ನಿರ್ಮಿಸಲಾಗಿದೆ. ಸರ್ವೇ ವರದಿ ಪಡೆಯುವ ವೇಳೆ ಇಲ್ಲಿ ಪಾಥ್ ಬೇಡ ಎಂದಿದ್ದೆವು. ಹಾಗೂ ಸ್ಮಾರ್ಟ್‍ಸಿಟಿ ಕೇಬಲ್ ಕೆಲಸದಲ್ಲಿ ಕಳಪೆ ವೈರ್ ಬಳಕೆಯಾಗಿದ್ದು, ಜನರು ಭಯದಲ್ಲಿದ್ದಾರೆ. ಅನಾಹುತಗಳು ಸಂಭವಿಸಿದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದರು.

ಚನ್ನಪ್ಪ ಲೇಔಟ್‍ನ ನಾಗರಿಕರು ಮಾತನಾಡಿ, ತಮ್ಮ ಭಾಗದಲ್ಲಿ ಒಂದು ಕಾಂಕ್ರಿಟ್ ಭರಿತವಾದ ಕಂಬ ಇದ್ದು ಅತ್ಯಂತ ಅಪಾಯಕಾರಿಯಾಗಿದೆ. ಹಾಗೂ ಯುಜಿಡಿ ಕಾಮಗಾರಿಗೆ ಮನೆ ಮುಂದೆ ನೆಲ ಅಗೆಯುತ್ತಾರೆ ಅದನ್ನು ಮುಚ್ಚುವುದಿಲ್ಲ. ಮತ್ತೆ 15 ದಿನಗಳಾದರೂ ಕಸ ತೆಗೆದಕೊಂಡು ಹೋಗುವುದಿಲ್ಲವೆಂದು ದೂರಿದರು.

ರವೀಂದ್ರನಗರದ ವಕೀಲರಾದ ಸೋಮಣ್ಣ ಮಾತನಾಡಿ, ತಮ್ಮ ವಾರ್ಡ್‍ನಲ್ಲಿ ಸ್ಮಾರ್ಟ್‍ಸಿಟಿ ಕೆಲಸ ಪೂರ್ಣಗೊಂಡಿಲ್ಲ. ಯುಜಿಡಿ ಕೆಲಸ ಅಪಾಯಕಾರಿಯಾಗಿದೆ. 24*7 ನೀರು ಇರಲಿ 2 ಗಂಟೆ ಕೂಡ ನೀರು ಬರುವುದಿಲ್ಲ ಎಂದರು.

ವಕೀಲರಾದ ಚಂದ್ರಕಾಂತ್ ಮಾತನಾಡಿ, ಗಾರ್ಡನ್ ಏರಿಯಾದಲ್ಲಿ ಯಾವ ರಸ್ತೆಯೂ ಸರಿ ಇಲ್ಲ. ನೀರಿನ ಪೈಪ್‍ಗಳು ಒಡೆದು ಹೋಗಿವೆ. ಇಲ್ಲಿ ಅಸಮರ್ಪಕವಾಗಿ ಚರಂಡಿ ಕೆಲಸ ಮಾಡಲಾಗಿದೆ. ಗುತ್ತಿಗೆದಾರರು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಿಲ್ಲವೆಂದರು.

12 ನೇ ವಾರ್ಡಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಹೆಚ್ಚಿದೆ. ಸಣ್ಣಪುಟ್ಟ ಮಳೆ ಬಂದರೂ ಜನರು ಪೇಚಾಡುವ ಸ್ಥಿತಿ ಇದೆ. ಅಂಗಳಯ್ಯನ ಕೇರಿಗೆ ಮೂಲಭೂತ ಸೌಕರ್ಯಗಳನ್ನು ಒಗದಿಸಬೇಕೆಂದರು.

ಪಾಲಿಕೆ ಸದಸ್ಯೆ ಸುರೇಖಾ ಮುರಳಿಧರ್ ಮಾತನಾಡಿ, ಸದರಿ ವಾರ್ಡ್ ಶೇ.100 ಸ್ಮಾರ್ಟ್‍ಸಿಟಿ ವ್ಯಾಪ್ತಿಗೆ ಬರುತ್ತದೆ. ಆದರೆ 3 ಮುಖ್ಯ ರಸ್ತೆಗಳ ಕೆಲಸ ಆಗದೆ ಬಾಕಿ ಇದೆ. ಇವುಗಳನ್ನು ಹೇಗೆ ಅಭಿವೃದ್ದಿಪಡಿಸಬೇಕೆಂದರು.

ರವಿಕಿಶನ್ ಮಾತನಾಡಿ, ಸೀನಪ್ಪಶೆಟ್ಟಿ ವೃತ್ತದಿಂದ ರೈಲ್ವೇ ಸ್ಟೇಷನ್‍ವರೆಗಿನ ರಸ್ತೆ ತುಂಬ ಚೇಂಬರ್‍ಗಳಿವೆ. ಹಲವಾರು ಕಡೆ ಬ್ಯಾರಿಕೇಡ್ ಹಾಕಿದ್ದು, ದಿನದಿಂದ ದಿನಕ್ಕೆ ಈ ಬ್ಯಾರಿಕೇಡ್ ಬದಲಾಯಿಸಲಾಗುತ್ತಿರುತ್ತದೆ. ದ್ವಿಚಕ್ರ ವಾಹನ ಸವಾರರಿಗೆ ಇದು ಸವಾಲಾಗಿದೆ. ಎಂದರು.

ಸಂಬಂಧಿಸಿದ ಅಧಿಕಾರಿ ಮನೋಜ್ ಮಾತನಾಡಿ, ಸದರಿ ರಸ್ತೆಯಲ್ಲಿ 55 ಚೇಂಬರ್‍ಗಳಿದ್ದು, 20 ಚೇಂಬರ್ ಸಮಸ್ಯೆ ಇತ್ತು. 8 ನ್ನು ಸರಿಪಡಿಸಲಾಗಿದೆ. ಉಳಿದವನ್ನು ಸರಿಪಡಿಸಲಾಗುತ್ತಿದೆ ಎಂದರು.

ಡಾ.ಶ್ರೀನಿವಾಸನ್ ಮಾತನಾಡಿ, ವಿನೋಬನಗರದಲ್ಲಿ ರಸ್ತೆಯಲ್ಲಿ ಅಂಗಡಿ ಮುಗ್ಗಟ್ಟಿನವರು ತಮ್ಮ ವಸ್ತು ಪ್ರದರ್ಶನಕ್ಕೆ ಇಟ್ಟಿದ್ದು, ನಡೆಯಲಿಕ್ಕೆ ದಾರಿ ಇಲ್ಲದಂತಾಗಿದೆ ಎಂದರು.

Shivamogga Smart City ಬಸವನಗುಡಿಯ ರೇಖಾ ಮಾತನಾಡಿ, ತಮ್ಮ ಪ್ರದೇಶದಲ್ಲಿ ಯುಜಿಡಿ ಕೆಲಸ ಕಳಪೆಯಾಗಿದೆ ಹಾಗೂ ಅವೈಜ್ಞಾನಿಕವಾಗಿದೆ. ಮಳೆ ಬಂದರೆ ನೀರು ಮನೆ ಒಳಗೆ ನುಗ್ಗುತ್ತದೆ. ಸ್ಮಾರ್ಟ್‍ಸಿಟಿ ಕಾಮಗಾರಿಗೂ ಮುನ್ನ ಈ ರೀತಿ ಆಗುತ್ತಿರಲಿಲ್ಲ. ಹಾಗೂ ಕನ್ಸರ್ವೆನ್ಸಿಯೂ ಅವೈಜ್ಞಾನಿವಕಾಗಿ ಆಗಿದ್ದು ಹೊಸದಾಗಿ ಮಾಡಬೇಕಿದೆ. ಸಮರ್ಪಕ ಯೋಜನೆ ಇಲ್ಲದೆ ಕೆಲಸ ಮಾಡಿದ್ದಾರೆ. ಸಮಸ್ಯೆ ಕುರಿತು ಇಂಜಿನಿಯರ್‍ಗಳಿಗೆ ಕರೆ ಮಾಡಿದರೆ ಮತ್ತೊಬ್ಬರ ಮೇಲೆ ಹೇಳುತ್ತಾರೆ. ಸರಿಯಾದ ಸ್ಪಂದನೆ ಇಲ್ಲ ಎಂದು ದೂರಿದ ಅವರು ಮುಂದೆ ಮಾಡುವ ಕೆಲಸವನ್ನಾದರೂ ಸಮರ್ಪಕವಾಗಿ ಮಾಡುವಂತೆ ಹಾಗೂ ತಪ್ಪುಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಬಾಪೂಜಿನಗರದ ನಾಗರೀಕರು ತಮ್ಮ ವಾರ್ಡ್‍ನಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. 24*7 ನೀರಿನ ಸಂಪರ್ಕ ಹಾಳಾಗಿದೆ. ನೀರಿನ ಸಂಪರ್ಕವಿಲ್ಲದೆ 6 ತಿಂಗಳಾಯಿತು. ಅತ್ಯಂತ ಸಮಸ್ಯೆಯಾಗಿದೆ ಎಂದರು.

ಮೋಹನ್ ಮಾತನಾಡಿ, ಸ್ಮಾರ್ಟ್ ಸಿಟಿ ಅನುಷ್ಟಾನಗೊಂಡಿರುವ ಪ್ರತಿ ವಾರ್ಡಿನಲ್ಲಿ ಸ್ಥಳ ಪರಿಶೀಲನೆ ಆಗಬೇಕೆಂದರು. ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಟಾನಗೊಂಡಿರುವ ವ್ಯಾಪ್ತಿಯ ಜನರು ಅನೇಕ ದೂರುಗಳನ್ನು ಸಲ್ಲಿಸಿದರು.

ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಣ್ಣ ಗೌಡ ಮಾತನಾಡಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಜನರ ಅಭಿಪ್ರಾಯ ಸಂಗ್ರಹಿಸಿ ಪೂರ್ಣಗೊಳಿಸಲಾಗುವುದು. ತೊಂದರೆ ಇರುವೆಡೆ ಸಾಧ್ಯವಾದಷ್ಟು ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ನಾಗರೀಕರು ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ವರ್ಗದ ಅಭಿಯಂತರರು, ತಾಂತ್ರಿಕ ಅಧಿಕಾರಿಗಳು, ಪಾಲಿಕೆ, ಮೆಸ್ಕಾಂ ಅಧಿಕಾರಿಗಳು, ನೀರು ಸರಬರಾಜು ಮತ್ತು ಒಳಚರಂಡಿ, ಜಲ ಮಂಡಳಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡು ಪರಿಹಾರಾತ್ಮಕ ಕ್ರಮಗಳ ಕುರಿತು ಚರ್ಚಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...