Teachers’ Day ಆಧುನಿಕತೆ-ಯಾಂತ್ರಿಕತೆಯ ಹಿನ್ನೆಲೆಯಲ್ಲಿ ಶಿಕ್ಷಕರು ಅತ್ಯಂತ ಸಂಕಷ್ಟದ ಪರಿಸ್ಥಿಯಲ್ಲಿದ್ದು ಅವರು ಅನಿವಾರ್ಯವಾಗಿ ಮಕ್ಕಳಿಗೆ ಸ್ವಾಭಿಮಾನದ ನೆಲೆಗಳನ್ನು ತಿಳಿಸಿಕೊಡಬೇಕಾಗಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಪ್ರಸ್ತುತ ಆಲೋಚನಾ ಕ್ರಮಗಳಲ್ಲಿ ವ್ಯತ್ಯಾಸವಿದೆ. ಆಧುನಿಕತೆ ವೇಗದಲ್ಲಿ, ಯಾಂತ್ರಿಕತೆಯ ಭರಾಟೆಯಲ್ಲಿ ವಿವೇಕ, ಪರಂಪರೆ ಮರೆ ಮಾಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರಿಗೆ ಪಾಠ ಮಾಡಲು ನೂರಾರು ಸವಾಲುಗಳಿವೆ. ಇಂತಹ ಸಂಕಷ್ಟ ಸ್ಥಿತಿಯನ್ನು ಎದುರಿಸಲು ಆತ್ಮಸ್ಥೈರ್ಯ ಮತ್ತು ವಿವೇಕವನ್ನು ಶಿಕ್ಷಕರು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಮಕ್ಕಳಿಗೆ ಸ್ವಾಭಿಮಾನವನ್ನು ಕಲಿಸಬೇಕಿದೆ.
ಸತ್ಯದ ಆವಿಷ್ಕಾರ ಮಾಡಿಸಿಕೊಡಬೇಕಿದೆ. ಕಾರುಣ್ಯದ ತಂತುಗಳನ್ನು ಹುಡುಕಿಕೊಡಬೇಕಿದೆ. ಸಹಜತೆಯನ್ನು ರೂಪಿಸಿಕೊಡಬೇಕಿದೆ. ಹಕ್ಕಿಯ ಹಾಡು, ಧನ-ಕರುಗಳ ಸಪ್ಪಳ, ಅಪ್ಪನ ಹಾಡು, ಕೊರಳಿನ ಗಂಟೆ ಮಕ್ಕಳಿಗೆ ಕೇಳಿಸಬೇಕು. ಬರಡುತನ, ಕ್ರೌರ್ಯ, ಹಿಂಸೆ, ದುಷ್ಟತನದಿಂದ ದೂರ ತರಬೇಕಿದೆ.
ಮಾನವೀಯತೆಯ ಕಥೆಗಳನ್ನು ಕಟ್ಟಿಕೊಡಬೇಕಾದ ಅನಿವಾರ್ಯತೆ ಇದ್ದು, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಅಕ್ಷರ ಕಲಿತು ವೀರರಾಗಬೇಕು, ಜಾಣನಾಗಬೇಕು. ಪುಣ್ಯವಂತರಾಗಬೇಕು. ಅಕ್ಷರ ಅಹಂಕಾರ ನೀಡಬಾರದು. ಅಕ್ಷರ ವಿವೇಕ, ವಿಜ್ಞಾನ,ವೈಶಿಷ್ಟ್ಯ, ಕಾರುಣ್ಯವನ್ನು ನೀಡಬೇಕು.
ಬಹುತ್ವದ ಗುಣ ಹೊಂದಿರುವ ನಮ್ಮ ದೇಶದಲ್ಲಿ ನಮ್ಮ ಪರಂಪರೆ, ಸಂಸ್ಕoತಿ ಮತ್ತು ನೆಲದ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕ್ಷಕ ಮನಸ್ಸು ಮಾಡಿದರೆ ಎಷ್ಟೆತ್ತರಕ್ಕಾದರೂ ಬೆಳೆಯಬಹುದು ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ನೋಡಿದರೆ ತಿಳಿಯುತ್ತದೆ. ಅವರು ಎಷ್ಟೇ ಎತ್ತರಕ್ಕೇರಿದರೂ ಶಿಕ್ಷಕನ ಗೌರವ ಸ್ಥಾನ ಉಳಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಜಾಗತಿಕ ಮಟ್ಟದಲ್ಲಿ ಭಾರತ ಎತ್ತರದ ಸ್ಥಾನಕ್ಕೆ ತಲುಪಿದೆ. ಎಲ್ಲೆಡೆ ಹೆಸರು ಮಾಡುತ್ತಿದೆ. ಜಾಗತಿಕ ಸ್ಪರ್ಧೆಗೆ ನಮ್ಮ ಯುವಜನತೆಯನ್ನು ತಯಾರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು ಶಿಕ್ಷಣ ಕ್ಷೇತ್ರದಲ್ಲಿ, ಪದೇ ಪದೇ ಬದಲಾವಣೆ ಕೈಗೊಂಡರೆ ಮಕ್ಕಳಿಗೆ ತೊಂದರೆ ಆಗುತ್ತದೆ ಆದ್ದರಿಂದ ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.
ಶಿಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಅವರ ಸ್ವಾಭಿಮಾನದ ಬದುಕಿನ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಶಿವಮೊಗ್ಗ್ಗ ಜಿಲ್ಲೆ ಅಭಿವೃದ್ದಿಯ ಪಥದಲ್ಲಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನತೆ, ವಿದ್ಯಾರ್ಥಿಗಳ ಸ್ಪರ್ಧೆಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ರಾಜ್ಯ-ಕೇಂದ್ರ ಸರ್ಕಾರದಿಂದ ಆಗುತ್ತಾ ಇವೆ ಎಂದರು.
ವಿಧಾನ ಪರಿಷತ್ ಶಾಸಕರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಕ್ಕಳಿಗೆ ಮೊದಲು ಜೀವನದ ಶಿಕ್ಷಣ ಕಲಿಸಬೇಕಿದೆ. ಅದಕ್ಕೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದ್ದು ಪಠ್ಯಪುಸ್ತಕದ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದರು.
Teachers’ Day ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಎಷ್ಟೇ ಸಮಸ್ಯೆಗಳಿದ್ದರೂ ಪ್ರಾಥಮಿಕ ಹಂತದಿಂದ ಕಾಲೇಜಿನ ಶಿಕ್ಷಣದವರೆಗೆ ಶಿಕ್ಷಣ ನೀಡುವಲ್ಲಿ ಅವರು ಎಲ್ಲೂ ಎಡವಿಲ್ಲ. ಸ್ವಸ್ಥ ಸಮಾಜ ಕಟ್ಟುವ ಶಕ್ತಿ ಇದ್ದರೆ ಅದು ಶಿಕ್ಷಕರಿಲ್ಲಿದೆ ಎಂದ ಅವರು ಸಂಸ್ಕಾರ ಕಲಿತ ಮಕ್ಕಳು ಎಂದೂ ಭ್ರಷ್ಟರಾಗುವುದಿಲ್ಲ ಎಂದರು.
ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ 38 ಶಿಕ್ಷಕರುಗಳಿಗೆ ಪ್ರಶಸ್ತಿ ನೀಡಿ ಹಾಗೂ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ 80 ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಶಿಕ್ಷಕರ ದಿನಾಚರಣೆ ಹಿನ್ನೆಲೆ ಕಳುಹಿಸಿದ್ದ ಸಂದೇಶವನ್ನು ವಿಷಯ ಪರಿವೀಕ್ಷಕ ಸತೀಶ್ ಅವರು ವಾಚಿಸಿದರು.
ವಿಧಾನಸಭಾ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಲಿಕೆ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಲಕ್ಷ್ಮೀ ಶಂಕರನಾಯ್ಕ, ಸದಸ್ಯರಾದ ಹೆಚ್.ಸಿ.ಯೋಗೇಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೆÇಲೀಸ್ ವರಿμÁ್ಟಧಿಕಾರಿ ಮಿಥುನ್ ಕುಮಾರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ವೈ.ಹೆಚ್.ನಾಗರಾಜ್, ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.