Uttaradi Mutt ಚಂದಿರನ ಅಂಗಳದಲ್ಲಿ ನೌಕೆ ಇಳಿಸಿದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುವಂತಹುದ್ದು. ವಿಜ್ಞಾನಿಗಳ ಈ ಸಾಧನೆಗೆ ಕೋಟಿ ಕೋಟಿ ಅಭಿನಂದನೆಗಳು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಸಂತಸ ವ್ಯಕ್ತಪಡಿಸಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡುತ್ತಿರುವ ಸಂದರ್ಭದಲ್ಲಿ ಶ್ರೀಗಳು ಈ ಸಂಬಂಧ ವಿಶೇಷ ಸಂದೇಶ ನೀಡಿದರು.
ಭಾರತೀಯರಾದ ನಮ್ಮೆಲ್ಲರಿಗೂ ಕೂಡ ಚಂದ್ರಯಾನದ ಯಶಸ್ವಿ ಬಹಳ ಸಂತೋಷದ ಸಂಗತಿ. ಚಂದ್ರಯಾನ-3 ಭಾರತ ದೇಶಕ್ಕೆ ದೊಡ್ಡ ವಿಜಯ ತಂದುಕೊಟ್ಟಿದೆ. ಭಾರತೀಯ ವಿಜ್ಞಾನಿಗಳು ಹಗರಲಿರುಳೂ ಪರಿಶ್ರಮ ಕೊಟ್ಟು, ತಮ್ಮೆಲ್ಲ ಬುದ್ಧಿಶಕ್ತಿ ಉಪಯೋಗಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
140 ಕೋಟಿ ಭಾರತೀಯರ ಪ್ರಶಂಸೆಗೆ ನಮ್ಮ ವಿಜ್ಞಾನಿಗ ಗಳ ಪಾತ್ರರಾಗಿದ್ದು, ಅವರಿಗೆ ದೇವರುಗಳು ಅನುಗ್ರಹ ಮಾಡಲಿ, ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದರು.
Uttaradi Mutt ಖಗೋಳದಲ್ಲಿ ವಿಜ್ಞಾನಿಗಳು ಇನ್ನೂ ಅನೇಕ ಸಂಶೋಧನೆಗಳನ್ನು ಮಾಡಿದರೆ ನಮಗೆ ಹೆಚ್ಚಿನ ಸಂತೋಷ ಆಗುತ್ತದೆ. ಕಾರಣ ಇಡೀ ಜಗತ್ತು, ಎಲ್ಲ ಗ್ರಹಗಳನ್ನು ಸೃಷ್ಟಿಸಿದ್ದು ದೇವರು. ಇಂತಹ ಸಂಶೋಧನೆಗಳಿಂದ ದೇವರ ಅಪರಿಮಿತವಾದ ಶಕ್ತಿ ಮತ್ತು ಅದ್ಭುತ ಸೃಷ್ಟಿಯ ಕೌಶಲ್ಯ ಸಾಮಾನ್ಯರಿಗೂ ತಿಳಿಯುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಜಗತ್ತಿನ ಮುಂದೆ ಭಾರತದ ಸ್ಥಾನ ಈಗ ಇನ್ನೂ ಎತ್ತರಕ್ಕೇರಿದೆ. ಭಾರತ ಘನ ಸರ್ಕಾರ ಇಂತಹ ಸಂಶೋಧನೆಗಳಿಗೆ ವಿಶೇಷ ಶಕ್ತಿ, ಪ್ರೋತ್ಸಾಹ ನೀಡಲಿ ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಪಂಡಿತ ಆನಂದಾಚಾರ್ಯ ಗುಮಾಸ್ತೆ ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.