Dr. Selvamani R ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಅವಶ್ಯಕಗಳು ಸಿಗುವುದೇ ಪರಿಸರದಿಂದ. ಹೀಗಾಗಿ ಸುಸ್ಥಿರ ಬದುಕಿಗೆ ಪರಿಸರವನ್ನು ಸಂರಕ್ಷಿಸುವು ಅಗತ್ಯ. ಪರಿಸರ ಸಂರಕ್ಷಣೆ ಎನ್ನುವುದು ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬರ ಹೊಣೆಗಾಗಿಕೆಯೂ ಆಗಿದೆ. ಪರಿಸರ ಸಂರಕ್ಷಣೆಯಲ್ಲಿ ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್. ಪಾತ್ರ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ಹೇಳಿದರು.
ನಗರದ ಆಚಾರ್ಯ ತುಳಸಿ ಕಾಲೇಜಿನಲ್ಲಿ ಎನ್.ಎಸ್.ಎಸ್. ವತಿಯಿಂದ ಹಮ್ಮಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಶಿಬಿರದಲ್ಲಿ ಆ:23 ರ ಬುಧವಾರ ಬೆಳಿಗ್ಗೆ ಪಾಲ್ಗೊಂಡು ಸೈನಿಕ ಪಾರ್ಕನಲ್ಲಿ ಸಸಿ ನೆಟ್ಟ ನಂತರ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಗೆ ನಾವು ಸ್ವಯಂ ಪ್ರೇರಿತರಾಗಿ ಗಿಡ, ಮರಗಳನ್ನು ಬೆಳೆಸಬೇಕಿದೆ. ಇದು ಸದ್ಯ ಆಗಬೇಕಾದ ತುರ್ತು ಕಾರ್ಯವಾಗಿದೆ. ಆಪ್ತರ ಸಂತೋಷ ಕ್ಷಣಗಳಿಗೆ ಕಾರಣರಾಗಲು ನಾವು ಸವಿನೆನಪಿಗಾಗಿ ಉಡುಗೊರೆ ನೀಡುತ್ತೇವೆ. ಇದರ ಜೊತೆಗೆ ಪರಿಸರಕ್ಕೆ ಪೂರಕವಾಗುವಂತೆ ಒಂದು ಗಿಡ ನೆಟ್ಟು ಪೋಷಿಸಿದಾಗ ಪರಿಸರ ಸಂರಕ್ಷಣೆಗೆ ವ್ಯಯಕ್ತಿಕ ಜವಾಬ್ದಾರಿ ಮೆರೆದಂತೆ ಆಗುತ್ತದೆ. ಪ್ರತಿಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತನ್ನಿಂತಾನೆ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ ಎಂದರು.
ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಬಿಸಾಡುವುದರಿಂದ ಅದು ಕಸವಾಗಿ ಮಾರ್ಪಟ್ಟು ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಅನಿವಾರ್ಯವಾಗಿ ಬಳಕೆ ಮಾಡಿದರೂ ಪುನರ್ ಬಳಕೆಯಾಗದಂತಹಾ ಪ್ಲಾಸ್ಟಿಕ್ ಬಳಸಬೇಕು. ಇದರಿಂದ ಪರಿಸರ ಹಾನಿಯನ್ನು ಆಂಶಿಕವಾಗಿ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಮರುಬಳಕೆ ಜೊತೆಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಮೂಲಕ ಪರಿಸರ ಪ್ರಜ್ನೆ ಮೆರೆಯಬಹುದಾಗಿದೆ. ಕಾಂಪೋಸ್ಟ್ ಪ್ರಕ್ರಿಯೆಯೂ ಪರಿಸರಕ್ಕೆ ಪೂರಕ. ಮನೆಯ ಮುಂದೆ ಗುಂಡಿ ತೋಡಬೇಕು. ಅದಕ್ಕೆ ಬೇರ್ಪಡಿಸಿದ ಹಸಿ, ಒಣ ಕಸವನ್ನು ತ್ಯಾಜ್ಯ ಗುಂಡಿಯಲ್ಲಿ ಹಾಕುವುದರಿಂದ ಅದು ಕೆಲವು ದಿನಗಳ ಬಳಿಕ ಗೊಬ್ಬರವಾಗುತ್ತದೆ. ಅದನ್ನು ಕೃಷಿಗೆ ಬಳಕೆ ಮಾಡಬಹುದಾಗಿದೆ ಎಂದರು.
ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ಕಡಿಮೆ ಬಳಕೆ ಮಾಡುತ್ತೇವೆಯೋ ಅಷ್ಟು ಪರಿಸರಕ್ಕೆ ಒಳ್ಳೆಯದು. ಜಲ ವಿದ್ಯುತ್ ನಂತಹಾ ಅತ್ಯಮೂಲ್ಯ ಸಂಪನ್ಮೂಲಗಳನ್ನು ನಾವು ಯೋಚಿಸಿ, ಯೋಜಿಸಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು. ಪ್ರತಿಯೊಂದೂ ನೈಸರ್ಗಿಕ ಸಂಪನ್ಮೂಲವೂ ಕೂಡ ನಮ್ಮ ಜೀವನದಲ್ಲಿ ಮಹತ್ವದ್ದಾಗಿದ್ದು, ಇವುಗಳ ಮಿತವಾದ ಬಳಕೆ ನಮ್ಮ ಮತ್ತು ಪರಿಸರದ ಸುಸ್ಥಿರ ಬದುಕಿಗೆ ಪೂರಕ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ ಎನ್.ಎಸ್.ಎಸ್. ಸ್ವಯಂ ಸೇವಕರು ಸೈನಿಕ ಪಾರ್ಕ್ ಸ್ವಚ್ಛತೆ ಮಾಡಿ ಇಲ್ಲಿ ಗಿಡಗಳನ್ನು ನೆಟ್ಟಿರುವುದು ಬಹಳ ಉತ್ತಮ ಕೆಲಸವಾಗಿ. ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ ನಾಗರಾಜ ಪರಿಸರ ಇವರ ನೇತೃತ್ವದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Dr. Selvamani R ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ ನಾಗರಾಜ ಪರಿಸರ, ಪ್ರಾಂಶುಪಾಲರಾದ ಪ್ರೊ ಮಮತಾ ಪಿ ಆರ್, ರಾಸೇಯೋ ಅಧಿಕಾರಿಗಳಾದ ಪ್ರೊ ಕೆ ಎಂ ನಾಗರಾಜು, ಪ್ರೊ ಜಗದೀಶ್ ಎಸ್ ಮತ್ತು ಮಂಜುನಾಥ್ ಎನ್ ಮತ್ತಿರರು ಉಪಸ್ಥಿತರಿದ್ದರು.