Uttaradi Math ಮಹಾತ್ಮರು, ಜ್ಞಾನಿಗಳು ಹಾಗೂ ಸಂತರ ನಿಂದೆ ಮಾಡುವುದು ಬಹಳ ದೊಡ್ಡ ಪಾಪ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಇಂತಹ ಕೆಲಸಗಳಿಂದ ದುರಾತ್ಮರಿಗೆ ಸಂತೋಷ ಸಿಗಬಹುದು. ಆದರೆ ಇದರಿಂದ ದೇವರ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಮಾಡಿದ್ದ ಅಲ್ಪಸ್ವಲ್ಪ ಪುಣ್ಯಗಳು, ಸಂಪತ್ತು, ಆಯುಷ್ಯ ಕ್ಷೀಣವಾಗುತ್ತದೆ. ಎಲ್ಲ ಪುರುಷಾರ್ಥವೂ ನಾಶವಾಗುತ್ತದೆ. ಹೀಗಾಗಿ ನಾವು ಮಹಾತ್ಮರಿಗೆ ಅಪಚಾರ ಮಾಡಬಾರದು ಎಂದರು.
ಹಲವು ಕ್ಷೇತ್ರಗಳಿಂದ ಗೌರವ :
ಪೇಟ್ ದ್ವಾರಕಾ ಮತ್ತು ದ್ವಾರಕಾದಿಂದ ಶ್ರೀಕೃಷ್ಣನ, ಕಂಚಿ ಕ್ಷೇತ್ರದಿಂದ ವರದರಾಜ ಸ್ವಾಮಿ, ನೀರಾ ನರಸಿಂಹ ಕ್ಷೇತ್ರದಿಂದ, ಮೈಸೂರಿನಲ್ಲಿರುವ ಧನ್ವಂತರಿ ದೇವರು, ಕೊಲ್ಹಾಪುರದ ಲಕ್ಷ್ಮೀದೇವಿಯ ಪ್ರಸಾದವನ್ನು ಶ್ರೀಗಳಿಗೆ ಸಮರ್ಪಿಸಿದರು.
ಇದೇ ವೇಳೆ ಸಾಂಗ್ಲಿಯಲ್ಲಿರುವ ಶ್ರೀ ಸತ್ಯವ್ರತ ತೀರ್ಥರ, ರಾಜಮಹೇಂದ್ರಿಯಲ್ಲಿರುವ ಶ್ರೀ ಸತ್ಯಜ್ಞಾನ ತೀರ್ಥರು ಹಾಗೂ ಶ್ರೀ ಸತ್ಯಾಧೀಶ ತೀರ್ಥರ, ಮೈಸೂರಿನಲ್ಲಿರುವ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟ ತೀಥರು, ಕರ್ನೂಲಿನಿಂದ ಶ್ರೀ ಸತ್ಯನಿಧಿ ತೀರ್ಥರು, ಕೋಲ್ಪುರದಿಂದ ಶ್ರೀ ಸತ್ಯಪೂರ್ಣ ತೀರ್ಥರು, ರಾಣೇಬೆನ್ನೂರಿನಿಂದ ಶ್ರೀ ಸತ್ಯಾಭಿಜ್ಞ ತೀರ್ಥರ ಮೂಲ ಬೃಂದಾವನ ಕ್ಷೇತ್ರದಿಂದ ಶೇಷವಸ್ತ್ರವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
Uttaradi Math ಪಂಡಿತ ಶ್ರೀನಿಧಿ ಆಚಾರ್ಯ, ರಾಘವಾಚಾರ್ಯ ಮಿಟ್ಟಿ ಪ್ರವಚನ ನೀಡಿದರು. ಈ ವೇಳೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ಲಕ್ಷ್ಮೀನರಸಿಂಹಾಚಾರ್ಯ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ ಮೊದಲಾದವರಿದ್ದರು.