Basavakendra Shivamogga ಮನುಷ್ಯ ಜೀವನದಲ್ಲಿ ಕಾಣಲು ಶ್ರದ್ಧೆ, ನಿಷ್ಠೆ, ಅವದಾನ, ಅನುಭವ, ಆನಂದ ಹಾಗೂ ಸಮರಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಬಸವಕೇಂದ್ರದ ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಶಿವಾನುಭವ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಆಚರಿಸುವ ಶಿವಾನುಭವಗೋಷ್ಠಿಯು ಭಕ್ತರ ಮನೆ ಮನಗಳನ್ನು ಬೆಳಗುವ ಶ್ರೇಷ್ಠ ಕಾರ್ಯವಾಗಿದೆ ಎಂದು ತಿಳಿಸಿದರು.
ಮಾಹೇಶ್ವರ ಸ್ಥಲ ವಿಷಯ ಕುರಿತು ಸಾಹಿತಿ, ಪ್ರಕಾಶಕ ಗಿರಿಮಲ್ಲನವರ ಮಾತನಾಡಿ, ಶರಣರು ಸಂಸಾರದಿಂದ ಶೂನ್ಯದವರೆಗೆ ಸಾಗುವ ಸಾಧನೆಯ ಪಥವನ್ನು ಷಟಸ್ಥಲ ಎಂದು ಕರೆದರು.
ಮಾಹೇಶ್ವರ ಸ್ಥಲದಲ್ಲಿರುವ ಸಾಧಕರು ಗುರುವಿನಲ್ಲಿ ವಿಶೇಷವಾಗಿ ನಿಷ್ಠೆ ಭಕ್ತಿಯುಳ್ಳವರಾಗಿರುತ್ತಾರೆ ಎಂದರು.
ಮಾಹೇಶ್ವರ ಸ್ಥಲದಲ್ಲಿ ಗುರುಲಿಂಗವೇ ಮುಖ್ಯವಾಗಿದೆ. ಮಾಹೇಶ್ವರ ಸ್ಥಲದಲ್ಲಿ ದೀಕ್ಷಾಬದ್ಧನಾದ ಸಾಧಕನು ತನ್ನ ಸ್ವಾರ್ಥವನ್ನೆಲ್ಲಾ ಬದಿಗೊತ್ತಿ ಸಮಾಜದಲ್ಲಿ ಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು ಹೇಳಿದರು.
Basavakendra Shivamogga ಶಿವಾನುಭವ ಸಪ್ತಾಹದ ಎರಡನೇ ದಿನದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ಶಿವಾನುಭವ ಗೋಷ್ಠಿಗಳಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ಭಕ್ತರ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮಕ್ಕಳೊಂದಿಗೆ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಬಸವಕೇಂದ್ರ ನಿರಂತರವಾಗಿ ಅನೇಕ ವರ್ಷಗಳಿಂದ ಸಪ್ತಾಹ ನಡೆಸುತ್ತ ಬಂದಿದ್ದು, ಉಪನ್ಯಾಸಕರ ಮುಖಾಂತರ ಭಕ್ತರಿಗೆ ಮಹತ್ತರ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಕಾರ್ಯದರ್ಶಿ ಚಂದ್ರಶೇಖರ್ ತೆಲಗಿನಹಾಳ್, ಸಂಗಮೇಶ್ ಮಠದ್, ವಾಣಿ, ಚಂದ್ರಪ್ಪ ಶೆಟ್ಟಿ, ಮಂಜುನಾಥ್, ದೇವಕುಮಾರ್, ಪುಷ್ಪಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.