Inner Wheel Club of Shimoga East ಶುದ್ಧ ಆಮ್ಲಜನಕ ಎಲ್ಲರಿಗೂ ದೊರೆಯಲು ಹೆಚ್ಚು ಹೆಚ್ಚು ಸಸಿಗಳನ್ನು ನೆಡುವ ಜತೆಯಲ್ಲಿ ಪೋಷಣೆ ಮಾಡಬೇಕು. ಜಾಗತಿಕ ತಾಪಮಾನ ಕಡಿಮೆ ಮಾಡುವ ದೃಷ್ಠಿಯಿಂದಲೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹೇಳಿದರು.
ಶಿವಮೊಗ್ಗ ನಗರದ ಶುಶ್ರೂಷಕರ ಕ್ವಾಟರ್ಸ್ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಹಾಗೂ ಶರಾವತಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ನಗರೀಕರಣದ ಯೋಜನೆಯಿಂದ ಕಾಂಕ್ರೀಟ್ ಪರಿಸರ ನಿರ್ಮಾಣ ಆಗುತ್ತಿದ್ದು, ಪರಿಸರ ಮರೆಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕು ಎಂದು ತಿಳಿಸಿದರು.
ಇನ್ನರ್‌ವ್ಹೀಲ್ ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಾಯು ಮಾಲಿನ್ಯವು ಹೆಚ್ಚಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಇದರಿಂದ ಪರಿಸರ ತುಂಬಾ ಹಾನಿಯಾಗುತ್ತದೆ. ಎಲ್ಲರೂ ಜಾಗೃತರಾಗಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಶ್ವೇತಾ ಆಶಿತ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ಬೇರೆ ಬೇರೆ ಬಡಾವಣೆಗಳಲ್ಲಿ ಸಸಿಗಳನ್ನು ನೆಡುವ ಜತೆಯಲ್ಲಿ ಪೋಷಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಸಿ ನೆಡುವ ಜತೆಯಲ್ಲಿ ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
Inner Wheel Club of Shimoga East ಅರಣ್ಯ ಇಲಾಖೆ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು. ಡಾ. ಕಡಿದಾಳ್ ಗೋಪಾಲ್, ಇನ್ನರ್‌ವ್ಹೀಲ್ ಶಿವಮೊಗ್ಗ ಕಾರ್ಯದರ್ಶಿ ವಾಗ್ದೇವಿ ಬಸವರಾಜ್, ಬಿಂದು ವಿಜಯ್‌ಕುಮಾರ್, ವೀಣಾ ಹರ್ಷ, ಪುಷ್ಪಾ ಶೆಟ್ಟಿ, ವಿಜಯ ರಾಯ್ಕರ್, ಸುಮಾ ಮಂಜುನಾಥ್, ಅನೂಪ್, ಕೆ.ಜಿ.ರಾಮಚಂದ್ರರಾವ್, ಸೀತಾ ಲಕ್ಷ್ಮೀ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ಮಧುರಾ ಮಹೇಶ್, ಪೂರ್ಣಿಮಾ ನರೇಂದ್ರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.