Rashtrotthana Vidyalaya ಭಾರತ ದೇವಭೂಮಿ, ಸಾಕ್ಷಾತ್ ಪರಮಾತ್ಮನೇ ಈ ಭೂಮಿಯಲ್ಲಿ ಅವತರಿಸಿದ್ದಾನೆ. ಇಂತಹ ಭೂಮಿಯಲ್ಲಿ ಜನಿಸಲು ನಮಗೆ ಅವಕಾಶ ದೊರೆತ ದೊಡ್ಡ ಪುಣ್ಯ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
28ನೇ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಪಾದಂಗಳವರು ಸಮೀಪದ ರಾಷ್ಟ್ರೊತ್ಥಾನ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳನ್ನುದ್ದೇಶಿಸಿ ಅವರು ಮಾತನಾಡಿದರು.
ಭರತ ಭೂಮಿಯಲ್ಲಿ ಅನೇಕ ಜ್ಞಾನಿಗಳು ಅವತರಿಸಿದ್ದಾರೆ. ಈ ಭೂಮಿ ಜಗತ್ತಿಗೆ ಅನೇಕ ಕೊಡುಗೆಯನ್ನು ನೀಡಿದೆ. ವೇದ, ಯೋಗ, ಆಯುರ್ವೇದ, ವಿಜ್ಞಾನ ಎಲ್ಲವೂ ಜಗತ್ತಿಗೆ ಭಾರತದ ಶ್ರೇಷ್ಠವಾದ ಕೊಡುಗೆಗಳಾಗಿವೆ ಎಂದರು.
ಇಡೀ ಜಗತ್ತನ್ನೇ ಸೃಷ್ಟಿಸಿದ್ದು ದೇವರು. ಆದರೆ ಆತ ತನ್ನ ಅವತಾರಕ್ಕೆ ಆಯ್ಕೆ ಮಾಡಿಕೊಂಡಿದ್ದು ಭಾರತವನ್ನು. ಹೀಗಾಗಿ ನಮ್ಮ ದೇಶ ಪುಣ್ಯ ಭೂಮಿಯಾಗಿದೆ. ಇದೇ ಭೂಮಿಯಲ್ಲಿ ರಾಮ – ಕೃಷ್ಣರು ಓಡಾಡಿದ್ದಾರೆ. ಅನೇಕ ಸಾಧು ಸಂತರು ಅವತರಿಸಿದ್ದಾರೆ. ಋಷಿಗಳು ಇಲ್ಲಿ ತಪಸ್ಸು ಆಚರಿಸಿ ಆತ್ಮೋದ್ಧಾರ ಮಾಡಿಕೊಂಡಿದ್ದಾರೆ ಎಂದರು.
ಭಾರತದ ಹಿರಿಮೆಯನ್ನು ಎಲ್ಲ ಮಕ್ಕಳೂ ತಿಳಿದುಕೊಳ್ಳಬೇಕು. ದೇಶಕ್ಕಾಗಿ ಬದುಕಬೇಕು. ಪ್ರಾಮಾಣಕವಾಗಿ, ನಿಷ್ಠೆಯಿಂದ ಇದ್ದರೆ ಅದೇ ನೀವು ದೇಶಕ್ಕೆ ಸಲ್ಲಿಸುವ ಸೇವೆ. ದೇವರಲ್ಲಿ ಪ್ರಾರ್ಥನೆ ಮತ್ತು ನಿಮ್ಮ ಗುರಿಯೆಡೆಗೆ ಪ್ರಯತ್ನ ಸದಾ ಇರಲಿ ಎಂದು ಭಕ್ತ ಪ್ರಹ್ಲಾದನ ಕಥೆಯನ್ನು ಹೇಳಿ ಉದಾಹರಿಸಿದರು.
Rashtrotthana Vidyalaya ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯದ ಕಾರ್ಯದರ್ಶಿ ರಾಜಾರಾಂ, ಶಾಲಾ ಸಮಿತಿ ಸದಸ್ಯರಾದ ಎಸ್.ಡಿ. ಸಿದ್ದಪ್ಪ, ಎಸ್.ಹೆಚ್. ಹನುಮಂತಪ್ಪ, ಮುಖ್ಯಶಿಕ್ಷಕ ಎನ್. ಆನಂದ್, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ರಾಷ್ಟ್ರೋತ್ಥಾನ ವಿದ್ಯಾಲಯದ ಶಿಕ್ಷಕರು ಮತ್ತು ಸಿಬ್ಬಂದಿ ಹಾಗೂ ಪೋಷಕರು ಹಾಜರಿದ್ದರು.
ಸಂಜೆ ಸಭಾ ಕಾರ್ಯಕ್ರಮ :
ಚಾತುರ್ಮಾಸ ಸಭಾಂಗಣದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಪಂಡಿತ ರಾಮಚಂದ್ರಾಚಾರ್ಯ ಸಿರಿಗೆ ಪ್ರವಚನ ನೀಡಿದರು. ಶ್ರೀ ಸತ್ಯಾತ್ಮ ತೀರ್ಥರು ಆಶೀರ್ವಚನ ನೀಡಿದರು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಕೆ.ಎನ್. ಗುರುರಾಜ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಅನಿಲ್ ರಾಮಧ್ಯಾನಿ, ಮುರಳಿ, ಧೃವಾಚಾರ್, ಗೋಪಿನಾಥ ನಾಡಿಗ್, ಗುರುರಾಜ ಕಟ್ಟಿ, ಶ್ರೀನಾಥ ನಗರಗದ್ದೆ ಮೊದಲಾದವರಿದ್ದರು.