Rotary Club Shivamogga ಸಂವೇದನಾಶೀಲ ಮನಸ್ಥಿತಿಯನ್ನು ಕಳೆದುಕೊಳ್ಳುತ್ತಿರುವ ಯುವಸಮೂಹ ತಮ್ಮನ್ನು ತಾವೇ ಗುರುತಿಸಿಕೊಳ್ಳಲು ಸಾಧ್ಯವಾಗದೇ ಮಾನಸಿಕ ಅಸ್ಪಷ್ಟತೆಗೆ ಗುರಿಯಾಗುತ್ತಿದೆ ಎಂದು ಸಂಶೋಧಕ, ಸಾಮಾಜಿಕ ಕಾರ್ಯಕರ್ತ ಹಾಗೂ ಶಿಕ್ಷಣ ತಜ್ಞ ಸಮನ್ವಯ ಕಾಶಿ ಆತಂಕ ವ್ಯಕ್ತಪಡಿಸಿದರು.
ಗಂಗೋತ್ರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಸಹಯೋಗದಲ್ಲಿ ಆಯೋಜಿಸಿದ್ದ “ಮೌಲ್ಯಾಧಾರಿತ ಶಿಕ್ಷಣ-ಒಂದು ಸಂವಾದ “ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಮೌಲ್ಯಗಳು ನಾಶಗೊಳ್ಳುವ ಹಂತಕ್ಕೆ ಬಂದಿರುವುದು ಹಾಗೂ ಶಿಕ್ಷಣವಂತರೇ ಇಂದಿನ ಅಪ್ರಾಮಾಣಿಕವಾಗಿ ಬದುಕುತ್ತಿರುವುದು ಇಂದಿನ ದುರಂತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬದುಕನ್ನು ರೂಪಿಸುವ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದೆ. ಮೌಲ್ಯಗಳನ್ನು ಸಮಾಜ ಹೇಳಿಕೊಡಬೇಕಾದ ಪಾಠವಾಗಿತ್ತು. ಆದರೆ, ಸಮಾಜ, ಕುಟುಂಬ ಹಾಗೂ ವ್ಯಕ್ತಿಗಳ ನಡುವಿನ ಸಮನ್ವಯತೆ ತಪ್ಪಿ ಹೋಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದ ಮೌಲ್ಯಗಳನ್ನು ರೂಪಿಸಿಕೊಳ್ಳುವ ಯಾವುದೇ ಸನ್ನೀವೇಶವನ್ನು ನಾವು ಸೃಷ್ಟಿ ಮಾಡುವಲ್ಲಿ ವಿಫಲರಾಗಿದ್ದೇವೆ. ಭ್ರಮೆಗಳ ನಡುವೆ ಬದುಕುವಂತೆ ಮಾಡಿದ ಪರಿಸರವನ್ನು ಹೆಚ್ಚು ಪ್ರೀತಿಸುತ್ತಲೇ ನಮಗೆ ನಾವೇ ದ್ರೋಹ ಮಾಡಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದೇವೆ ಎಂದು ಅಭಿಪ್ರಾಯಪಟ್ಟರು.
ನಮ್ಮಗಳ ನಡುವಿನ ಸ್ನೇಹ, ಪ್ರೀತಿ, ವಿಶ್ವಾಸ, ಮೌಲ್ಯ, ನೀತಿ, ನೈತಿಕತೆ ವಿಚಾರದ ಬಗ್ಗೆ ಅರ್ಥವನ್ನೆ ಮಾಡಿಕೊಳ್ಳದಷ್ಟು ಯುವ ಸಮೂಹ ದುರ್ಬಲವಾಗಿದೆ. ಮತ್ತೊಬ್ಬರ ಹಿಂಸೆಯಲ್ಲಿ ನಾವು ಸುಖ ಕಾಣುವ ಹಂತಹ ಬಂದು ನಿಂತಿದ್ದೇವೆ. ಹಿಂಸೆ ಮತ್ತು ಶಾಂತಿಯ ನಡುವಿನ ಅಂತರ ಬಹಳಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಶಿಕ್ಷಣದ ಮೌಲ್ಯಗಳು ವಿದ್ಯಾರ್ಥಿಯೊಬ್ಬನ ಜೀವನ ರೂಪಿಸಬೇಕಾದ ಅವಶ್ಯಕತೆಯಲ್ಲಿ ಪ್ರಮುಖವಾದದು ಎಂಬ ಸಂಗತಿ ಇಂದು ಮರೆಯಾಗಿ ಹೋಗಿದೆ. ಅಂತಹ ಮೌಲ್ಯಗಳ ಬಗ್ಗೆ ನಮಗೆ ಕನಿಷ್ಠ ಪ್ರಜ್ಞೆಯನ್ನು ಉಳಿಸಿಕೊಳ್ಳಲು ಮುಂದೆ ಬಾರದ ವ್ಯವಸ್ಥೆಯನ್ನು ನಾವೇ ರೂಪಿಸಿಕೊಂಡಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ನಾವು ಗಳಿಸುವುದಕ್ಕಿಂತಹ ಕಳೆದುಕೊಳ್ಳುವುದೇ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ವ್ಯವಸ್ಥೆಯಲ್ಲಿ ಯಾರನ್ನು ನಾವು ಮಾದರಿಯನ್ನಾಗಿ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಇಂದಿನ ವಿದ್ಯಾರ್ಥಿಗಳು ಇದ್ದಾರೆ. ನಾಲ್ಕು ದಶಕಗಳ ಹಿಂದೆ ಪ್ರತಿ ವಿದ್ಯಾರ್ಥಿಗಳಿಗೂ ಮಾದರಿಯಾದ ವ್ಯಕ್ತಿತ್ವ ರೂಪಿಸಿಕೊಳ್ಳುವ ಶಿಕ್ಷಣ ದೊರಕುತ್ತಿತ್ತು. ಈಗ ಸಾಮಾಜಿಕ ಜಾಲತಾಣದ ಭ್ರಮೆಗಳ ನಡುವೆ, ಸುಳ್ಳುಗಳನ್ನು ಸತ್ಯ ಎಂದು ನಂಬುವ ವಾಸ್ತವವಲ್ಲದ ಸಮಾಜದ ವ್ಯವಸ್ಥೆಗೆ ನಾವು ಸುಲಭದ ತುತ್ತಾಗಿ ಪರಿಣಮಿಸಿದ್ದೇವೆ. ಇನ್ನೊಬ್ಬರನ್ನು ಮೆಚ್ಚಿಸುವ ಬದುಕು ಪ್ರತಿದಿನವೂ ತನ್ನತನವನ್ನು ಕಳೆದುಕೊಳ್ಳುವ ಅಂಚಿಗೆ ಬಂದು ನಿಂತಿದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಮನುಷ್ಯನೊಬ್ಬ ತನ್ನತನವನ್ನು ಕಂಡುಕೊಳ್ಳುತ್ತಲೇ ಸಂವೇದನೆ, ಗುರಿ, ಹಾಗೂ ಬುದಕಿನ ಸ್ಪಷ್ಟತೆಯನ್ನು ಪಡೆದುಕೊಳ್ಳುತ್ತಾನೆ ಎಂಬ ಸಂಗತಿಗಳೇ ಮರೆಮಾಚಿ ಹೋಗಿವೆ. ವೇಗದ ಬದುಕಿನಲ್ಲಿ ಸಂಬಂಧಗಳು ಶಿಥಿಲಗೊಂಡಿವೆ, ಕುಟುಂಬದ ನಡುವೆಯೇ ನಾವು ಸುಳ್ಳುಗಳ ಪಾತ್ರಧಾರಿಗಳಂತೆ ಬದುಕುತ್ತಿದ್ದೇವೆ. ಇದು ನಮ್ಮೊಳಗಿನ ಕ್ರಿಯಾಶೀಲತೆಯನ್ನು ಕೊಂದು ಹಾಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷ ರೇಣುಕಾರಾಧ್ಯ ಪ್ರಾಸ್ತಾವಿಕ ಮಾತನಾಡಿದರು. ಗಂಗೋತ್ರಿ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಬಿ.ಬಿ.ಸಮ್ರೀನ್ ನಿರೂಪಿಸಿ, ಕ್ಲಬ್ ಅಧ್ಯಕ್ಷೆ ರೋ.ರೂಪಾಪುಣ್ಯಕೋಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಹಿರಿಯ ಸದಸ್ಯರಾದ ರೋ.ಲಕ್ಷ್ಮಿನಾರಾಯಣ, ರೋ.ರಾಜಶೇಖರ್, ರೋ.ಲಕ್ಷ್ಮಿನಾರಾಯಣ, ಗಂಗೋತ್ರಿ ಕಾಲೇಜಿನ ಉಪನ್ಯಾಸಕರಾದ, ಡಾ.ಬಸವರಾಜ್, ವಿದ್ಯಾಶ್ರೀ, ಅಹಮದ್ ಷರೀಫ್, ಶ್ವೇತಾ, ಶ್ರೀಕಾಂತ್, ಅಮಿತ್, ಅಖಿಲೇಶ್, ಡಾ.ರಚನಾ ಹಾಗೂ ಇತರರು ಇದ್ದರು.