Uttaradi Math ದೇವರನ್ನು ಸ್ತೋತ್ರ ಮಾಡುವುದೇ ಒಂದು ದೊಡ್ಡ ಸಂಪತ್ತು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಗುರುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಈ ಹಿನ್ನೆಲೆಯಲ್ಲಿ ವಸುದೇವ ತನಗೆ ಪುತ್ರೋತ್ಸವ ಆದ ಸಂದರ್ಭದಲ್ಲಿ ಸಂತೋಷದ ಬದಲು ದೇವರ ಸರ್ವೋತ್ತಮತ್ವದ ಕುರಿತು ಸ್ತೋತ್ರ ಮಾಡಿದ್ದಾನೆ. ಆ ಮೂಲಕ ಶ್ರೀಕೃಷ್ಣ ತನ್ನ ಮಗನಲ್ಲ ಆತ ತನ್ನನ್ನು ನಿಮಿತ್ತ ಮಾಡಿಕೊಂಡಿದ್ದಾನೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾನೆ ಎಂದರು.
ನನ್ನ ಒಡೆಯ ನನಗೆ ಮಾತ್ರ ಒಡೆಯ ಅಲ್ಲ, ಇಡೀ ಜಗತ್ತಿಗೆ ಒಡೆಯ. ಒಡೆಯ ಮಾತ್ರವಲ್ಲ ಜಗತ್ತನ್ನೇ ತನ್ನೊಳಗೆ ಇಟ್ಟುಕೊಂಡಿದ್ದಾನೆ. ಹೀಗೆ ಕಾರಾಗೃಹದ ಬಂಧನದ ಮೋಕ್ಷಕ್ಕಾಗಿ ವಸುದೇವ ದೇವರಲ್ಲಿ ಪ್ರಾರ್ಥನೆ ಮಾಡಿದ. ವಸುದೇವನಿಗೆ ಕಂಸನೆ0ಬ ಒಬ್ಬ ದೈತ್ಯ ಮಾತ್ರ ಎದುರಿಗಿದ್ದ. ನಮಗೆಲ್ಲ ಸುತ್ತಲು ವಿಷಯಗಳೆಂಬ ನೂರಾರು ದೈತ್ಯರಿದ್ದಾರೆ.
ಹೀಗಾಗಿ, ಎಲ್ಲರೂ ವಸುದೇವನ ರೀತಿಯಲ್ಲಿ ದೇವರ ಸ್ತೋತ್ರ ಮಾಡಿದರೆ ಸಂಸಾರವೆoಬ ಬಂಧನದಿoದ ದೂರವಾಗಲು ಸಾಧ್ಯ ಎಂದರು.
ಪ್ರವಚನ ನೀಡಿದ ಪಂಡಿತ ರಘೂತ್ತಮಾಚಾರ್ಯ ಅವರು ತೋತಾದ್ರಿ ಕ್ಷೇತ್ರದಿಂದ ತಂದಿದ್ದ ನಾರಾಯಣ ದೇವರ ಶೇಷವಸ್ತç ಮತ್ತು ಪ್ರಸಾದವನ್ನು ಶ್ರೀಗಳಿಗೆ ಸಮರ್ಪಿಸಿದರು.
Uttaradi Math ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಕೆ.ಎನ್. ಗುರುರಾಜ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.