DSS Chitradurga ಚಿತ್ರದುರ್ಗ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಕೆಲವರು ಮೃತಪಟ್ಟು ಅನೇಕ ಮಂದಿ ಅಸ್ವಸ್ಥರಾಗಿದ್ದು ಕೂಡಲೇ ಸ್ಥಳೀಯ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತುರ್ತು ಚಿಕಿತ್ಸೆ ಒದಗಿಸಿ ಜೀವ ಉಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಬಣ ಜಿಲ್ಲಾಡಳಿತ ಮೂಲಕ ಒತ್ತಾಯಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ದಸಂಸ ಪದಾಧಿಕಾರಿಗಳು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿರುವವರಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯ ಎ.ಕೆ.ಕಾಲೋನಿಯಲ್ಲಿ ಕಲುಷಿತ ನೀರು ಸೇವಿಸಿ ಐದು ಮಂದಿ ಮೃತಪಟ್ಟಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು ಇದಕ್ಕೆ ಕಾರಣರಾಗಿರುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
DSS Chitradurga ಶೋಷಿತ ಸಮುದಾಯಕ್ಕೆ ಸೇರಿದ ಕವಾಡಿಗರ ಹಟ್ಟಿಯ ಮಾದಿಗ ಜನಾಂಗದವರಿಗೆ ಈ ರೀತಿಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕಾಲೋನಿಯ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಿಲ್ಲ. ಇತ್ತೀಚೆಗೆ ಗ್ರಾಮದಲ್ಲಿ ಅಂತರ್ಜಾತಿಯ ವಿವಾಹವಾಗಿರುವುದು ಪ್ರಕರಣಕ್ಕೆ ಮೆಲುಕು ಹಾಕಿದಂತೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಕಲುಷಿತ ನೀರು ಸೇವನೆಯಿಂದ ಜೀವ ಕಳೆದುಕೊಂಡ ಅಮಾಯಕ ಕುಟುಂಬಗಳಿಗೆ ತಲಾ ೨೫ ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಒದಗಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಂಪೂರ್ಣ ಉಚಿತವಾಗಿ ನೀಡಬೇಕು, ಎಲ್ಲಾ ವಾಟರ್ ಟ್ಯಾಂಕ್‌ಗಳನ್ನು ಸ್ವಚ್ಚಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಬೇಕು, ತನಿಖೆಯನ್ನು ಕೂಲಂ ಕುಶವಾಗಿ ನಡೆಸಲು ಉನ್ನತ ಮಟ್ಟದ ಸಮಿತಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಚಿಕ್ಕಕುರುಬರಹಳ್ಳಿ ಈಶಣ್ಣ, ಶೃಂಗೇರಿ ತಾಲ್ಲೂಕು ಅಧ್ಯಕ್ಷ ಹನುಮಂತ, ಸಂಘಟನಾ ಕಾರ್ಯದರ್ಶಿ ಪಿ.ಎ.ಜಾರ್ಜ್, ಎನ್.ಶ್ರೀಕಾಂತ್, ಮುಖಂ ಡರುಗಳಾದ ಮೈಲಾರಿ, ಚೈತ್ರ ಮತ್ತಿತರರು ಹಾಜರಿದ್ದರು.