District Court ಹೆಂಡತಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ ಗಂಡ ಮತ್ತು ಆತನ ಗೆಳೆಯರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಮತ್ತು ತಲಾ ರೂ.1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ನಗರದ ವೆಂಕಟೇಶ್ವರ ನಗರದ 5ನೇ ಕ್ರಾಸ್ ನಿವಾಸಿ ಕೃಷ್ಣಮೂರ್ತಿರವರ ಮಗ ಕಾರ್ತಿಕ್ ಕೆ ವಯಸ್ಸು 28 ವರ್ಷ ಇವರು ಶ್ರೀರಾಮನಗರದ ವಾಸಿ ಆರ್.ಪೊನ್ನುಸ್ವಾಮಿ ಇವರ ಸಾಕುಮಗಳು ರೇವತಿ, 21 ವರ್ಷ ಶಿವಮೊಗ್ಗ ಇವರನ್ನು ದಿನಾಂಕ: 04-09-2017 ರಂದು ಮದುವೆಯಾಗಿದ್ದರು.
ಪತ್ನಿ ರೇವತಿ ಕಾರ್ತಿಕನೊಂದಿಗೆ ಜಗಳ ಆಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ತನ್ನ ಪತ್ನಿ ರೇವತಿಯು ತನ್ನ ಮನೆಯ ಎದುರು ಇರುವ ವಿಜಯ ಎಂಬುನನ್ನು ಪ್ರೀತಿಸುತ್ತಿದ್ದರಿಂದ ಮನೆ ಬಿಟ್ಟು ಹೋಗಿರುತ್ತಾಳೆಂದು ಆರೋಪಿ ಕಾರ್ತಿಕ ತನ್ನ ಗೆಳೆಯರಾದ 2ನೇ ಆರೋಪಿ ಭರತ್ ವಿ, 23 ವರ್ಷ, 3ನೇ ಆರೋಪಿ ಸತೀಶ್ 26 ವರ್ಷ ಮತ್ತು 4ನೇ ಆರೋಪಿ ಸಂದೀಪ 21 ವರ್ಷ ಇವರೊಂದಿಗೆ ಸೇರಿಕೊಂಡು ತನ್ನ ಪತ್ನಿ ಮತ್ತು ವಿಜಯನನ್ನು ವಡ್ಡಿನಕೊಪ್ಪಕ್ಕೆ ಕರೆಸಿಕೊಂಡು ಮಚ್ಚು, ಲಾಂಗು ಮತ್ತು ಕಲ್ಲಿನಿಂದ ಕೊಲೆ ಮಾಡಿರುತ್ತಾರೆ.
District Court ಈ ಬಗ್ಗೆ ಶಿವಮೊಗ್ಗ ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಮಹಾಂತೇಶ್ ಬಿ ಹೊಳಿ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ರವರು ತನಿಖೆ ಪೂರೈಸಿ ಆರೋಪಿಗಳಾದ ಕಾರ್ತಿಕ್, ಭರತ್, ಸತೀಶ್, ಸಂದೀಪ್ ಇವರುಗಳ ವಿರುದ್ದ ಭಾ.ದಂ.ಸಂಹಿತೆ ಕಲಂ 302, 120(ಬಿ)ಸಹವಾಚಕ 34 ರಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಶಿವಮೊಗ್ಗದ ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿ ವಿಚಾರಣೆ ನಡೆದು, ಆರೋಪಗಳು ದೃಢಪಟ್ಟಿರುವುದರಿಂದ 3 ಆರೋಪಿತರಿಗೆ 1ನೇ ಮತ್ತು 3ನೇ ಅಪರ ಜಿಲ್ಲಾ ಮತ್ತು ನ್ಯಾಯಾಧೀಶರಾದ ಕೆ.ಎಸ್. ಮಾನು ರವರು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ 3ನೇ ಆರೋಪಿ ಸತೀಶ್ ಬಿನ್ ಗೋವಿಂದರಾಜ ತಲೆಮರೆಸಿಕೊಂಡಿರುವುದರಿಂದ ಈತನನ್ನು ಪ್ರಕರಣದಿಂದ ಪ್ರತ್ಯೇಕಿಸಿ, ಪ್ರತ್ಯೇಕ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು ಈತನ ಮೇಲಿನ ವಿಚಾರಣೆ ಬಾಕಿ ಇರುತ್ತದೆ.
ಸರ್ಕಾರಿ ಅಭಿಯೋಜಕರಾದ ಜೆ.ಶಾಂತರಾಜ್ ಸರ್ಕಾರದ ಪರವಾಗಿ ಸಾಕ್ಷಿಗಳ ವಿಚಾರಣೆ ಮಾಡಿ ವಾದವನ್ನು ಮಂಡಿಸಿದ್ದರೆಂದು ತಿಳಿಸಿದೆ.