Uttaradi Mutt ನಾವು ಜೀವಾತ್ಮಘಿ, ಭಗವಂತ ಪರಮಾತ್ಮ. ಭಗವಂತ ಸ್ವಾಮಿ, ನಾವು ದಾಸ ಎಂಬ ಭಾವನೆ, ಎಚ್ಚರ ಸದಾಕಾಲ ನಮಗೆ ಇರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ನಾವು ಮೋಕ್ಷ ಪಡೆಯಬೇಕಾದರೆ, ಆ ಪರಮ ಸುಖವನ್ನು ಪಡೆಯಬೇಕಾದರೆ ದೇವರೊಂದು ಕಡೆ ನಾವೊಂದು ಕಡೆ ಇರಬಾರದು. ಭಕ್ತಿ ಎಂಬ ಸ್ನೇಹದೊಂದಿಗೆ ದೇವರೊಂದಿಗೆ ನಾವು ಸೇರಬೇಕು. ಭಕ್ತಿಯನ್ನು ಹುಟ್ಟಿಸಿಕೊಳ್ಳುವುದು ಸುಲಭವಲ್ಲ. ಒಂದೇ ದಿನಕ್ಕೆ ಆಗುವಂಥದ್ದಲ್ಲ. ನಿರಂತರ ಪ್ರಯತ್ನ ಅವಶ್ಯ ಎಂದರು.
ಜಡ ವಸ್ತುಗಳೇ ದೇವರಲ್ಲ :
ಪ್ರವಚನ ನೀಡಿದ ಪಂಡಿತ ಆದ್ಯ ವರದಾಚಾರ್ಯ, ಕೇವಲ ಜಡವಾದ ನೀರು ಪವಿತ್ರದಾಯಕ ಆಗುವುದಿಲ್ಲ. ನೀರಿನಲ್ಲಿ ಸನ್ನಿಹಿತರಾಗಿರುವ ಅಭಿಮಾನಿ ದೇವತೆಗಳು ನಮ್ಮನ್ನು ಪವಿತ್ರರನ್ನಾಗಿ ಮಾಡುತ್ತಾರೆ. ಮಣ ್ಣನಿಂದ, ಕಲ್ಲಿನಿಂದ, ಲೋಹಗಳಿಂದ ನಿರ್ಮಾಣವಾದ ಜಡವಾದ ಪ್ರತಿಮೆಗಳೇ ದೇವರಲ್ಲ. ಆ ಪ್ರತಿಮೆಗಳಲ್ಲಿ ದೇವರ ಸನ್ನಿಧಾನ ಇದೆ ಎಂದು ತಿಳಿದುಕೊಳ್ಳಬೇಕು ಎಂದರು.
Uttaradi Mutt ನಾವು ಸಜ್ಜನರನ್ನು ಹೊಂದುವುದಿಲ್ಲ ನೇರವಾಗಿ ದೇವರನ್ನು, ದೇವತೆಗಳನ್ನು ಹೊಂದುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಜ್ಞಾನಿಗಳ ದರ್ಶನ ಮತ್ತು ಗುರುಗಳು ಮಾತ್ರ ನಮ್ಮಲ್ಲಿರುವ ಅನ್ಯಥಾ ಜ್ಞಾನವನ್ನು ಪರಿಹಾರ ಮಾಡಲು ಸಾಧ್ಯ. ಗುರು ಇಲ್ಲದಿದ್ದರೆ ಹರಿವ ನೀರನ್ನೇ ತೀರ್ಥವೆಂದು ಭಾವಿಸುತ್ತೇವೆ, ಶಿಲೆಯನ್ನೇ ದೇವರೆಂದು ಭಾವಿಸುತ್ತೇವೆ. ಹೀಗಾಗಿ ಸರಿಯಾದ ತಿಳುವಳಿಕೆಗೆ ಗುರುಗಳ ಉಪದೇಶ ಎಲ್ಲರಿಗೂ ಅವಶ್ಯ ಎಂದರು.
ಪಂಡಿತ ಶ್ರೀನಿವಾಸಾಚಾರ್ಯ ಕೊರಲಹಳ್ಳಿ ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.
ರೈತರು ಇರುವುದಕ್ಕೇ ಬದುಕಿದ್ದೀರಿ: ಸತ್ಯಾತ್ಮ ಶ್ರೀ
ಇಷ್ಟೆಲ್ಲಾ ಸಾಫ್ಟ್ ವೇರ್ ಬೆಳೆದರೂ, ಬೇರೆ ಬೇರೆ ಲೌಖಿಕ ಆಮಿಷವಿದ್ದರೂ ಅದರ ಕಡೆ ಕಣ್ಣು ಹಾಕದೆ ಹೊಲಗಳಲ್ಲಿ ಬೆಳೆಗಳನ್ನು ಬೆಳೆದು ಅದರ ಸರಿಯಾದ ವಿನಿಯೋಗ ಆಗುವ ರೀತಿಯಲ್ಲಿ ರೈತರು ಶ್ರಮ ಹಾಕಿದ್ದರಿಂದಲೇ ಇವತ್ತು ಎಲ್ಲರೂ ಊಟ ಕಾಣುವಂತಾಗಿದೆ ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಇದೇ ನಮ್ಮ ಜೀವನದ ವೃತ್ತಿ ಎಂಬ ದೀಕ್ಷೆ ಅವರಲ್ಲಿ ಇರುವುದರಿಂದಲೇ ಎಲ್ಲರ ಹೊಟ್ಟೆ ತುಂಬುತ್ತಿದೆ. ರೈತರು ಇರುವುದಕ್ಕೇ ಬದುಕಿದ್ದೀರಿ. ಮೊಬೈಲ್‌ಗಳಲ್ಲಿ ಬೇಕಾದಷ್ಟು ಆಹಾರ ಪದಾರ್ಥಗಳ ವಿಡಿಯೋಗಳಿವೆ. ಹೇಗೆ ಮಾಡುವ ಬಗ್ಗೆ ಮಾಹಿತಿ ಸಿಗಲಿದೆ. ಆದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ? ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.