Friday, September 27, 2024
Friday, September 27, 2024

Sandesh Javali ಹೊಸತನದ ಸಂದೇಶ ನೀಡಿದ ಸಂದೇಶ್ ಜವಳಿ

Date:

Sandesh Javali ರಂಗಭೂಮಿ ಮೂಲತಃ ಸಮಷ್ಟಿಯ ಕಲೆ. ಲಲಿತಕಲೆಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಈ ರಂಗಭೂಮಿ ಕ್ರಿಯಾಶೀಲತೆಯ ಸಂಕೇತವೂ, ಸೃಜನಶಿಲತೆಯ ಪ್ರತೀಕವೂ ಹೌದು. ವ್ಯಕ್ತಿಯ ಅಂತಃಸ್ಸತ್ವವನ್ನು ಗಟ್ಟಿಗೊಳಿಸಿ ವ್ಯಕ್ತಿತ್ವ ವಿಕಾಸಕ್ಕೆ ಸಹಾಯಕವಾದುದು. ಅದರಲ್ಲಿ ರಂಗಾಯಣವನ್ನು ನಾವು ನೋಡುವುದಾದರೆ ಕರ್ನಾಟಕದ ಪ್ರಾತಿನಿಧಿಕ ರೆಪರ್ಟರಿಯನ್ನಾಗಿ ರೂಪಿಸಬೇಕೆಂಬ ಮಹತ್ತರ ಉದ್ದೇಶವನ್ನು ಹೊಂದಿದ್ದು ಅದರಲ್ಲಿ ಶಿವಮೊಗ್ಗ ರಂಗಾಯಣವು ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ವಿಭಿನ್ನ ಮತ್ತು ವೈಶಿಷ್ಟ್ಯತೆಯ ಕಾರ್ಯಕ್ರಮಗಳಿಂದಲೇ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ, ಹೇಗೆ ರಥಕ್ಕೆ ಒಬ್ಬ ಒಳ್ಳೆಯ ಸಾರಥಿ ಇದ್ದರೆ ಚೆನ್ನವೋ ಹಾಗೆಯೇ ರಂಗಾಯಣಕ್ಕೂ ಒಳ್ಳೆಯ ಸಾರಥಿಯ ಆಗಮನವಾಯಿತು. ಅವರೇ ಸಂದೇಶ್ ಜವಳಿಯವರು. ತೀರ್ಥಹಳ್ಳಿಯಲ್ಲಿ ನಟಮಿತ್ರರು ಎಂಬ ತಂಡವನ್ನು ಕಟ್ಟಿ ಸಾಕಷ್ಟು ರಂಗದ ಕಾರ್ಯಗಳನ್ನು ಮಾಡಿ ಅನುಭವವಿದ್ದ ಇವರಿಗೆ ತಮ್ಮ ಕನಸನ್ನು ಸಾಕಾರಗೊಳಿಸುವ ವೇದಿಕೆಯಾಗಿ ಪರಿಣಮಿಸಿತು. ಅದರ ಫಲವಾಗಿ ರಂಗತೋರಣಕ್ಕೆ ಕಲಶಪ್ರಾಯದಂತೆ ಕೆಲಸಗಳಾದವು. ಅವುಗಳನ್ನು ನಾವು ನೋಡುವುದಾದರೆ
ಬಹುಮುಖಿ ರಾಷ್ಟ್ರೀಯ ರಂಗೋತ್ಸವ 2020 – ಮಲೆನಾಡಿನ ರಂಗಾಸಕ್ತರಿಗೆ ಹಾಗೂ ಹೊಸತನ ರಂಗಾಸಕ್ತರಿಗೆ ವಿನೂತನ ಅನುಭವ ನೀಡಿದ್ದೆ ಅಲ್ಲದೆ ದೇಶದ ವಿವಿಧ ಭಾಗಗಳ ರಂಗಭೂಮಿಯ ಭಾಷೆ, ಸಂಸ್ಕೃತಿಯ ಪರಿಚಯ ಮಾಡಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು.
ಇದಾದ ಕೆಲವೇ ದಿನಗಳಲ್ಲಿ ಕೋವಿಡ್ ಆಗಮನವಾಗಿ ಜಗತ್ತನ್ನೇ ಆವರಿಸಿದ ಕರೋನ ಪಿಡುಗಿನ ಕರಿ ನೆರಳು ರಂಗಭೂಮಿಯ ಮೇಲು ಆವರಿಸಿದಾಗ ಅದರಿಂದ ಧೃತಿಗೆಡದೆ ತಂತ್ರಜ್ಞಾನದ ಸಹಾಯದಿಂದ ಹತ್ತು ಹಲವು ಕಾರ್ಯಕ್ರಮ ಆಯೋಜಿಸಿ ನಿರಂತರತೆ ಮುಂದುವರಿಸುವ ನಿಟ್ಟಿನಲ್ಲಿ ಹುಟ್ಟಿದ ವಿನೂತನ ಕಾರ್ಯಕ್ರಮಗಳೇ ರಂಗಾಯಣ ಕಥಾ ಪಯಣ. ಇದರಲ್ಲಿ ಹೆಸರಾಂತ ಪ್ರಸಿದ್ಧ ಕಲಾವಿದರು ರಂಗಭೂಮಿಗೆ ಸಂಬಂಧಿಸಿದ ನಾಟಕ -ಕಥೆ – ಕವನ ಇವುಗಳನ್ನು ಆನ್ಲೈನ್ ಮೂಲಕ ವಾಚಿಸಿ ಸಂವಾದ ನಡೆಸಿಕೊಟ್ಟರು.
ರಂಗಭೂಮಿ ಕುರಿತಾದ ರಾಜ್ಯಮಟ್ಟದ ರಸಪ್ರಶ್ನೆ ಮತ್ತು ಕುಟುಂಬ ನಾಟಕ ಸ್ಪರ್ಧೆ – ಸಂಸಾರ ರಂಗಸಾರ. ರಂಗಶಕ್ತಿಯುಳ್ಳ ಕುಟುಂಬ ಮನೆಯನ್ನೇ ರಂಗವೇದಿಕೆ ಮಾಡಿಕೊಂಡು ಕುಟುಂಬ ಸದಸ್ಯರನ್ನೇ ನಟರನ್ನಾಗಿ ಪರಿವರ್ತಿಸಿ ಮನೆಯ ವಸ್ತುಗಳನ್ನೇ ಪರಿಕರವಾಗಿ ಬಳಸಿ ನಾಟಕ ಸಿದ್ಧಪಡಿಸುವಂತೆ ಮಾಡಿದ್ದು ಆಸಕ್ತಿದಾಯಕ ವಿಷಯವೇ ಸರಿ.
72ನೇ ಗಣರಾಜ್ಯೋತ್ಸವದ ನವದೆಹಲಿಯ ಪೆರೇಡ್ ಗೆ ವಿಜಯನಗರ ಸಂಸ್ಥಾನದ ಸ್ತಬ್ಧ ಚಿತ್ರದಲ್ಲಿ ಶಿವಮೊಗ್ಗ ರಂಗಾಯಣದ ಕಲಾವಿದರು ಭಾಗವಹಿಸಿದ್ದು ಕೂಡ ಹೆಮ್ಮೆಯ ಸಂಗತಿ.
Sandesh Javali ಅವರು ತಾನಾಗಬೇಕೆಂದು ಬಯಸಿದ್ದನ್ನು ಕಲಾವಿದರಲ್ಲಿ ಕಂಡು ತೃಪ್ತಿ ಪಟ್ಟುಕೊಂಡವರು. ಅದಕ್ಕೆ ಸಾಕ್ಷಿಯಾಗಿ ಯಕ್ಷಗಾನ ಅಭಿನಯ, ಯೋಗಾಸನ, ನವರಸ ಮೈಮ್, ಕಳರಿಪಯಟ್ಟು ಇವುಗಳ ತರಗತಿ ಆರಂಭಿಸಿದ್ದು ರಂಗಭೂಮಿಯತ್ತ ಕ್ರಿಯಾಶೀಲರಾಗಿ ರಂಗಾಯಣದ ಕಲಾವಿದರು ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು.
ಪರಿಸರದ ಭಾಗವಾಗಿರುವ ಜೀವ ವೈವಿಧ್ಯವನ್ನು ಎಲ್ಲರೂ ಪ್ರೀತಿಸುವಂತೆ ಪ್ರೇರಣೆ ಕೊಟ್ಟ ನಾಟಕ ಹಕ್ಕಿಕತೆ. ನಾಟಕ ಪ್ರೇಕ್ಷಕರ ದೃಷ್ಟಿಕೋನವನ್ನು ಬದಲಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿತು ಕೂಡ.
ನಂತರ ಅತಿ ಹೆಚ್ಚು ಪ್ರದರ್ಶನ ನೀಡಿ ಯಶಸ್ವಿಯಾದ ನಾಟಕವೇ ಚಾಣಕ್ಯ ಪ್ರಪಂಚ. ಇಲ್ಲಿ ನಾಟಕದ ಕಲಾವಿದರು ನಿಜದ ಪಾತ್ರಗಳಾಗಿ ಕಾಡುವುದು ವಿಶೇಷ.
ರಂಗಾಸಕ್ತರ ರಂಗದಾಹಕ್ಕೆ ಅಮೃತ ಉಣಿಸಿದ್ದು ‘ರಂಗಾಮೃತ’. ಇದರಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ನಾಟಕಗಳಿಂದ ನಮ್ಮ ದೇಶದ ಕುರಿತು ಇನ್ನಷ್ಟು ಪ್ರೀತಿ ಉಕ್ಕಿಸುವ ಪ್ರಯತ್ನವನ್ನು ಮಾಡಿದರು.
ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಡಿ ಅಮೃತ ಮಹೋತ್ಸವ ಆಚರಣೆ. ಈಸೂರಿನ ಹೋರಾಟದ ಕಥೆ ಈಸೂರ ಕೊಡೆವು ನಾಟಕ ಮಲೆನಾಡಿನ ಸ್ವಾತಂತ್ರ್ಯದ ಕಿಚ್ಚಿನ ಕಥೆಗಳು ಜನರನ್ನು ತಲುಪಿತು.
ರಾಜ್ಯದ ನಾನಾ ಭಾಗಗಳಲ್ಲಿ ರಂಗತೇರನ್ನು ಕೊಂಡೊಯ್ದು ಶಿವಮೊಗ್ಗ ರಂಗಾಣದ ಕೀರ್ತಿಪತಾಕೆ ಎಲ್ಲೆಡೆ ಹಾರಾಡುವಂತೆ ಮಾಡಿದರು.
ಸರ್ವರಿಗೂ ಸಂವಿಧಾನ ಯೋಜನೆಯಡಿ ಸಂವಿಧಾನದ ಅರಿವು ಮತ್ತು ಆಶಯಗಳನ್ನು ತಿಳಿಸಲೆಂದೇ ವಿ ಧ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶನ ರಂಗಾಸಕ್ತರ ಆಸಕ್ತಿ ಹೆಚ್ಚಿಸಿ ನಾಟಕ ಪ್ರೇಮಿಗಳ ಪ್ರೀತಿ ಗಳಿಸಿತು.
ರಂಗ ಶಿಕ್ಷಣವು ಅರಿವಿನ ತೋರಣವಾಗಿ ಮಾಡಿ ಕ್ರಮಬದ್ಧ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ ಚಿಣ್ಣರ ಉತ್ಸವದಿ ಶಿವಮೊಗ್ಗ ರಂಗಾಯಣ ಎನ್ನುವ ಪರಿಕಲ್ಪನೆಯೊಂದಿಗೆ ಮಕ್ಕಳಲ್ಲಿರುವ ಪ್ರತಿಭೆಗೆ ನೀರೆರೆದು ಪೋಷಿಸುವ ಕಾರ್ಯವಾಯಿತು.
ಕಟೀಲು ಅಶೋಕ್ ಪೈ ಕಾಲೇಜಿನ ಸಹಯೋಗದೊಂದಿಗೆ ಮೂರು ತಿಂಗಳ ಅವಧಿಗೆ ರಂಗ ಶಿಕ್ಷಣ ನೀಡುವ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿ ವಿದ್ಯಾರ್ಥಿಗಳ ರಂಗದ ಅರಿವನ್ನು ವಿಸ್ತರಿಸಿತು.
ಸಿಮೆಂಟ್ ಶಿಲ್ಪ ಶಿಬಿರದಲ್ಲಿ ಸಂಸ್ಕೃತಿಯ ರಂಗವಲ್ಲಿಯನ್ನು ಹಾಕಿದಂತಾಗಿ ಜನಪ್ರಿಯ ನಾಟಕಗಳು ಮಹೋನ್ನತ ದೃಶ್ಯ ಇತ್ಯಾದಿಗಳು ರಂಗಾಯಣ ಶಿವಮೊಗ್ಗ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಭಾಗಿತ್ವದಲ್ಲಿ ಆಯೋಜಿಸಿ ತಮ್ಮ ಕಲಾತ್ಮಕ ಸ್ಪರ್ಶಗಳಿಂದ ಶಿಬಿರಕ್ಕೆ ನಾವಿನ್ಯತೆ ತಂದು ಕೊಡುವಂತಾಯಿತು.
ಆರ್ಟ್ ಗ್ಯಾಲರಿಗೆ ಪ್ರೇಕ್ಷಕರ ಹೃನ್ಮನ ಸೆಳೆಯುವ ಚುಂಬಕ ಶಕ್ತಿ ಇರುವುದನ್ನು ಗಮನಿಸಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮ್ಯೂರಲ್ ಆರ್ಟ್ ಕಲಾಕೃತಿಯನ್ನು ಅನಾವರಣಗೊಳಿಸುವ ಆರ್ಟ್ ಗ್ಯಾಲರಿಯ ಸ್ಥಾಪನೆ ಎಲ್ಲರನ್ನೂ ಸೆಳೆಯಿತು.
ವಾರಾಂತ್ಯದ ನಾಟಕ ಎನ್ನುವ ಸುಗ್ಗಿ, ಮಹಿಳೆಯರಿಗೆಂದೇ ಆಯೋಜಿಸಿದ ‘ಜೀವನ್ಮುಖಿ’, ವಿಶ್ವ ರಂಗಭೂಮಿ ದಿನದ ಅದ್ದೂರಿ ರಂಗ ವೈಭವ, ಮಾಲತಿ ರಂಗೋತ್ಸವ ಎಲ್ಲರೊಳಗೂ ರಂಗ ಪ್ರೀತಿಯನ್ನು ಉಕ್ಕಿಸುವಲ್ಲಿ ಯಶಸ್ವಿಯಾಯಿತು.
ಯುವಕರಲ್ಲಿ ರಂಗಾಸಕ್ತಿ ಬೆಳೆಸಿದರೆ ಅವರೇ ಮುಂದಿನ ರೂವಾರಿಗಳಾಗುತ್ತಾರೆ ಎನ್ನುವ ಆಶಯದೊಂದಿಗೆ ‘ ಕಾಲೇಜು ರಂಗೋತ್ಸವ ‘ ಆಯೋಜನೆಯಾಗಿ ಯುವ ರಂಗಪಯಣ ಯುವ ಮನಸ್ಸುಗಳ ರಂಗನಡಿಗೆಗೆ ಎಲ್ಲರೂ ಜೊತೆಯಾಗೋಣ ಎನ್ನುವ ಸಂದೇಶದಲ್ಲಿ ಮೂಡಿದ ಕಾರ್ಯಕ್ರಮ ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆಯನ್ನು ನಿರ್ಮಿಸಿ ಕೊಟ್ಟಿತು.
ರಂಗಾಯಣಕ್ಕೆ ಹೊಸ ಭಾಷ್ಯ ಬರೆದ ರಂಗ ಭೀಷ್ಮ ಬಿ.ವಿ ಕಾರಂತರು ಎಲ್ಲ ಕಾಲಕ್ಕೂ ಸ್ಪೂರ್ತಿ, ಶಕ್ತಿ ಅವರ ನೆನಪಿನಲ್ಲಿ ವಿಚಾರ ಸಂಕಿರಣವು ಒಳಗೊಂಡಂತೆ ನಾಟಕ ಆಯೋಜಿಸಿ ರಂಗಾಸಕ್ತರ ಗಮನ ಸೆಳೆದವರು ಸಂದೇಶ್ ಜವಳಿ ಅವರು.
ನವರಾತ್ರಿಯಲ್ಲಿ ಆಯೋಜಿಸಿದ ರಂಗದಸರಾ ರಂಗೋಲಿ ಒಪ್ಪಿಸಿದ ಹಾಗಿತ್ತು. ಒಂದು ಅನನ್ಯ ಪ್ರಯೋಗವಾಗಿ ಹೊರಹೊಮ್ಮಿದ್ದು ಚಿತ್ರಪಟ ರಾಮಾಯಣ. ಅದು ಮೊದಲ ಯಕ್ಷ ರಂಗ ಪ್ರಯೋಗವಾಗಿ ಜನಮನ ಸೆಳೆಯಿತು.
ಇವುಗಳೇ ಅಲ್ಲದೆ ಶಿವಮೊಗ್ಗ ರಂಗಾಯಣದ ಸಮಗ್ರ ಮಾಹಿತಿ ನೀಡುವ ವೆಬ್ಸೈಟ್ ಸಿದ್ಧಗೊಂಡು ಕೈ ಬೆರಳ ತುದಿಯಲ್ಲೇ ರಂಗಾಯಣದ ಮಾಹಿತಿ ದೊರೆಯುವಂತಾಯಿತು. ರಂಗಭೂಮಿ ಮತ್ತು ಸಾಹಿತ್ಯಕ್ಕೂ ಇರುವ ನಂಟು ಗಮನಿಸಿ, ಕಲಾವಿದರಾಗಬೇಕಾದವರು ಹೆಚ್ಚಿನ ಅಧ್ಯಯನ ನಡೆಸಲು ಸುಖ ಓದಿನ ಹಸಿವಿಗೆ ಔತಣ ನೀಡುವಂತೆ ಸುಸಜ್ಜಿತ ಗ್ರಂಥಾಲಯ ಆರಂಭವಾಯಿತು.
ಮೈಸೂರು ರಂಗಾಯಣದಲ್ಲಿ ಬಿ . ವಿ. ಕಾರಂತರ ಆಶಯದಂತೆ ಪ್ರಾರಂಭವಾದ ವನರಂಗದಂತೆ ಶಿವಮೊಗ್ಗದಲ್ಲೂ ಬಯಲು ರಂಗ ಮಂದಿರ ಆರಂಭವಾಗಬೇಕೆಂಬ ಕನಸು ಹೊತ್ತು ಅದನ್ನು ನಿರ್ಮಿಸುವ ಪ್ರಯತ್ನವನ್ನು ಮಾಡಿದರು.
ಬಿವಿ ಕಾರಂತರ ಆಶಯಗಳು ನಿರ್ದೇಶಕರಾದ ಶ್ರೀಯುತ ಜವಳಿಯವರಲ್ಲಿ ಪ್ರತಿಧ್ವನಿಸುವಂತೆ ಕಂಡು, ಶಿವಮೊಗ್ಗ ರಂಗಾಯಣವು ನಿರಂತರ ರಂಗ ಚಟುವಟಿಕೆಗಳಿಂದ ರಂಗಕಾಶಿ ಎನಿಸಿಕೊಳ್ಳಲು ಸಾಧ್ಯವಾಯಿತು. ಶಿವಮೊಗ್ಗದ ರಂಗಾಯಣವು ಸದಾ ಹರಿಯುವ ಜೀವಂತ ನದಿಯಾದ ರಂಗಭೂಮಿಯ ಚಲನಶೀಲತೆ ಮತ್ತು ಕ್ರಿಯಾಶೀಲತೆಯ ದ್ಯೋತಕವಾಗುವಂತೆ ಮಾಡಿ ರಂಗ ಪಯಣದ ನಿರಂತರತೆಗೆ ಇವರ ಕೊಡುಗೆ ಅಪಾರ, ಕಾರ್ಯಗಳು ಅವಿಸ್ಮರಣೀಯ.
ಎಲ್ಲೋ ಊರಿನ ಮೂಲೆಯಲ್ಲಿದ್ದ ಸುವರ್ಣ ಸಾಂಸ್ಕೃತಿಕ ಭವನವು ಜನರನ್ನು ತನ್ನತ್ತ ಸೆಳೆಯುವಲ್ಲಿ, ಸದಾ ಚಟುವಟಿಕೆಗಳಿಂದ ಆಕರ್ಷಣೀಯ ಕೇಂದ್ರವಾಗುವಲ್ಲಿನ ಯಶಸ್ಸಿಗೆ ಜವಳಿಯವರ ಕಾರ್ಯ ಶ್ಲಾಘನೀಯ. ರಂಗ ಚಟುವಟಿಕೆಗಳಿಗೆ ಸ್ಪೂರ್ತಿಯ ಹೆಮ್ಮರವಾದ ಮುಂಬರುವ ನಿರ್ದೇಶಕರಿಗೆ ದಾರಿದೀಪವಾದ ಶ್ರೀಯುತರ ಕಾರ್ಯ ಎಲ್ಲರಿಗೂ ಮಾದರಿಯಾಗಲಿ. ಸಾಂಸ್ಕೃತಿಕ ತವರೂರಾದ ಶಿವಮೊಗ್ಗ ರಂಗಾಯಣದ ಕಾರಣದಿಂದಲೂ ಇನ್ನೊಂದು ಗರಿಯನ್ನು ತನ್ನ ಮುಡಿಗೆರಿಸಿಕೊಂಡಿದೆ. ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಮ್ ಎಂಬಂತೆ ಉತ್ಸಾಹಶೀಲರಾದ ವ್ಯಕ್ತಿಗಳಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ರಂಗಾಯಣದ ನಿರ್ದೇಶನವನ್ನು ಮಾಡಿ ಸಾರ್ಥಕತೆಗೈದ ಶ್ರೀ ಸಂದೇಶ ಜವಳಿಯವರಿಗೆ ಶಿವಮೊಗ್ಗ ನಗರದ ರಂಗಾಸಕ್ತರೂ ಹಾಗೂ ಸಮಸ್ತ ಜನತೆಯ ಪರವಾಗಿ, ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ.
-ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...