Saturday, November 23, 2024
Saturday, November 23, 2024

Book Review ಮೇರಿಕೋಂ ವ್ಯಕ್ತಿತ್ವ ಯಶೊಗಾಥೆ”ಗಟ್ಟಿಗಿತ್ತಿ”-ಪುಸ್ತಕ ಪರಿಚಯ

Date:

Book Review ಮನುಷ್ಯ ಏನನ್ನಾದರೂ ಸಾಧಿಸಬೇಕೆಂದು ನಿರ್ಧರಿಸಿದರೆ, ಜಗತ್ತಿನ ಯಾವ ಶಕ್ತಿಯೂ ಅವನ/ಳನ್ನು ತಡೆಯಲಾಗುವುದಿಲ್ಲ’ಎಂಬ ಮಾತಿಗೆ ದುಷ್ಟಾಂತದಂತೆ ಬದುಕಿದ ಸಾಧಕರು ನಮ್ಮ ನಡುವೆ ಇದ್ದಾರೆ.

ಅವರಲ್ಲಿ ಭಾರತ ಕಂಡ ಶ್ರೇಷ್ಠ ಬಾಕ್ಸಿಂಗ್‌ಪಟು ‘ಮೇರಿ ಕೋಮ್’ ಸಹ ಒಬ್ಬರು. ನಿರ್ಲಕ್ಷ್ಯಕ್ಕೊಳಗಾದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರವೆಂಬ ಅತ್ಯಂತ ಹಿಂದುಳಿದ ರಾಜ್ಯದ ಕುಗ್ರಾಮಕ್ಕೆ ಸೇರಿದ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳು ಪ್ರಪಂಚವೇ ನಿಬ್ಬೆರಗಾಗುವಂತೆ ಕ್ರೀಡೆಯಲ್ಲಿ ಸಾಧನೆ ಮಾಡಿದ್ದು, ಆ ಮೂಲಕ ದೇಶ-ವಿದೇಶದ ಕೋಟ್ಯಾಂತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಿ ನಿಂತಪರಿ ಬಲು ರೋಚಕ.

ಆ ಯಶೋಗಾಥೆಯ ಅಕ್ಷರ ರೂಪದ ಆತ್ಮಕಥನವೇ ‘ಅನ್ ಬ್ರೇಕೆಬಲ್’ ಹೊತ್ತಿಗೆ. ಆಂಗ್ಲಭಾಷೆಯಲ್ಲಿ ಪ್ರಕಟವಾದ ಈ ಪುಸ್ತಕವನ್ನು ಕನ್ನಡದ ಖ್ಯಾತ ಬರಹಗಾರ ವಿಶ್ವೇಶ್ವರಭಟ್ಟರು ‘ಗಟ್ಟಿಗಿತ್ತಿ’ ಎಂಬ ಹೆಸರಿನಲ್ಲಿ ಕನ್ನಡಾನುವಾದಿಸಿದ್ದಾರೆ. ಇದನ್ನು ಮೈಸೂರಿನ ಧಾತ್ರಿ ಪ್ರಕಾಶನದವರು ಅಚ್ಚುಕಟ್ಟಾಗಿ, ಅಪರೂಪದ ಫೋಟೋಗಳೊಂದಿಗೆ ಪ್ರಕಟಿಸಿದ್ದಾರೆ. ಪುಸ್ತಕವು ಒಂದೇ ಗುಕ್ಕಿನಲ್ಲಿ ಓದಿಸಿಕೊಳ್ಳುತ್ತದೆ.
ಪುಸ್ತಕದ ಮೊದಲ ಮೂರು ಅಧ್ಯಾಯಗಳು ಮೇರಿಕೋಮ್ ಕಳೆದ ಬಾಲ್ಯವನ್ನು, ಆಕೆಯ ಮೊಂಡುತನ, ದುಡುಕುಗಳನ್ನು, ಒಂದು ತುತ್ತಿನ ಊಟಕ್ಕೂ ಪರೆದಾಡುವ ತಂದೆ-ತಾಯಿ, ಮಗಳನ್ನು ಬೆಳೆಸಲು ಪಡುವ ಪರಿಪಾಟಲುಗಳನ್ನು ಚಿತ್ರಿಸುತ್ತದೆ. ಅದರಲ್ಲೂ, ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸಲು ತಂದೆಯು ವಿರಾಮವಿಲ್ಲದೆ ದುಡಿಯುವುದು ಹಾಗೂ ತಾಯಿಯು ಕುಟುಂಬದ ಪಾಲನೆಯ ಜೊತೆಗೆ, ರಾತ್ರಿಪೂರ ಬಟ್ಟೆ ಹೊಲೆದು ಮಕ್ಕಳ ಅಗತ್ಯಗಳನ್ನು ಈಡೇರಿಸುವ ಪುಟಗಳು ಕಣ್ಣಾಲೆಗಳಲ್ಲಿ ಕಂಬನಿ ತರಿಸುತ್ತವೆ. ಅವರು ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಉನ್ನತ ಕನಸು ಕಟ್ಟಿಕೊಟ್ಟು, ಸಂಸ್ಕಾರ ನೀಡಿದರು.

Book Review ನಾಲ್ಕನೇ ಅಧ್ಯಾಯದಿಂದ ಆಕೆಯು ಬಾಕ್ಸಿಂಗ್ ಪಯಣದಲ್ಲಿ ಎದುರಿಸಿದ ಏರುಪೇರುಗಳನ್ನು, ಯಶ-ಅಪಯಶಸ್ಸುಗಳನ್ನು ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತದೆ. ಜೀವನ ಹಲವು ತಿರುವುಗಳನ್ನು ಪಡೆದು ಆಕೆಯನ್ನು ಬಾಕ್ಸಿಂಗ್ ಕ್ರೀಡೆಯ ಮಡಿಲಿಗೆ ತಂದು ಎಸೆದಿರುತ್ತದೆ. ಯಾವುದೇ ಕನಿಷ್ಠ ಸೌಲಭ್ಯಗಳೂ ಇಲ್ಲದ, ಗಾಡ್ ಫಾದರ್ ಹೊಂದಿಲ್ಲದ ಮೇರಿಕೋಮ್ ತನ್ನ ಬುದ್ದಿವಂತಿಕೆಯಿಂದ ತರಬೇತುದಾರರನ್ನು ಪಡೆದದ್ದು, ಹರಿದ ಶೂ ಗಳಲ್ಲಿ ಅಭ್ಯಾಸ ನಡೆಸಿದ್ದು, ‘ಯಶಸ್ಸು ಹೂವಿನ ಹಾದಿಯಲ್ಲ, ಮುಳ್ಳಿನ ಪೊದೆಯಲ್ಲಿನ ಪಯಣ’ವೆಂಬುದನ್ನು ನಮಗೆ ಅರಿವಾಗುವಂತೆ ಮಾಡುತ್ತದೆ. ಪುಸ್ತಕ, ಕೇವಲ ಮೇರಿಕೋಮ್‌ರ ಜೀವನವನ್ನು ಕಣ್ಣಮುಂದೆ ತರುವ ಪುಟಗಳು ಮಾತ್ರವಾಗಿರದೆ, ಭಾರತದಲ್ಲಿ ಈಶಾನ್ಯ ರಾಜ್ಯಗಳ ಜನರು, ಅದರಲ್ಲೂ ಕೋಮ್ ಬುಡಕಟ್ಟು ಸಮುದಾಯ ಎದುರಿಸುತ್ತಿರುವ ಅಸಮಾನತೆಗಳು, ಕ್ರೀಡೆಗಳಲ್ಲಿ ನಡೆಯುವ ಭ್ರಷ್ಟಾಚಾರ, ಸ್ವ-ಜನಪಕ್ಷಪಾತ, ಲಿಂಗ ತಾರತಮ್ಯ, ಇವೇ ಮೊದಲಾದ ಹಲವು ಮಗ್ಗಲುಗಳನ್ನು ಬಿಡಿಬಿಡಿಯಾಗಿ ಅನಾವರಣಗೊಳಿಸುತ್ತದೆೆ.

ಮುಖ್ಯವಾಗಿ, ಮೇರಿಕೋಮ್‌ಳ ಬದುಕು ಇಷ್ಟವಾಗುವುದು, ಒಬ್ಬ ಮಹಿಳೆಯಾಗಿ ಆಕೆಯ ದೃಢ ಸಂಕಲ್ಪ, ಕಠಿಣ ಪರಿಶ್ರಮ, ಛಲದ ಮುಂದೆ ಮಾನವ ನಿರ್ಮಿತ ಸಣ್ಣತನಗಳು ನಗಣ್ಯವಾಗುವುದು. ಎಲ್ಲವನ್ನು ಮೀರಿ ಮುನ್ನಡೆದರೆ ನಿಜವಾದ ಪ್ರತಿಭೆ ಗೆಲ್ಲುತ್ತದೆ, ಯಶಸ್ಸು ದೊರೆಯುತ್ತದೆನ್ನುವುದು.
ನಿಜವಾಗಿಯೂ ಈ ಪುಸ್ತಕದ ಹೀರೋ ಆಕೆಯ ಪತಿ ‘ಅನ್‌ಲೇರ್’. ಆತ ಓದಿಕೊಂಡಿದ್ದು ಕಾನೂನು ಪದವಿ. ಮನೆತನವೂ ಸ್ಥಿತಿವಂತವಾಗಿದ್ದೇ.

ನಾಯಕತ್ವಗುಣ ಆತನ ರಕ್ತದಲ್ಲೇ ಬಂದಿತ್ತು ಅನ್ನಿಸುತ್ತೆ. ವಿದ್ಯಾರ್ಥಿ ದೆಸೆಯಲ್ಲೇ ಆತ ಮುಖಂಡನಾಗಿ ಗುರ್ತಿಸಿಕೊಂಡಿದ್ದ. ಮುಂದೆ ಅತ ಆದಾಯ ತೆರಿಗೆ ಇಲಾಖೆಯಲ್ಲಿ ದೊಡ್ಡ ಹುದ್ದೆಯನ್ನು ಪಡೆಯಲೂ ಯಶಸ್ವಿಯಾದ. ಆದರೆ, ಮೇರಿಕೋಮ್‌ಳೊಂದಿಗೆ ಪ್ರೀತಿಗೆ ಬಿದ್ದ ಆತ, ಆಕೆಯ ಮನಸ್ಸನ್ನು ಗೆಲ್ಲಲು ಯಶಸ್ವಿಯಾದ. ಆಕೆಯ ಪೋಷಕರಿಗೆ ಈತನು ಮೊದಲು ಒಪ್ಪಿಗೆಯಾಗಿಲ್ಲ. ಆದರೆ, ಮೇರಿಕೋಮ್‌ಳನ್ನು ನಿಜವಾಗಿ ಪ್ರೀತಿಸಿದ್ದ ಆತ ಎಷ್ಟೇ ಕಷ್ಟವಾದರೂ ಆಕೆಯನ್ನು ವರಿಸಲು ನಿರ್ಧರಿಸಿದ್ದ. ಅದೊಂದು ದಿನ ಆಕೆಯ ತಂದೆಯ ಮುಂದೆ ನಿಂತು, ‘ನಿಮ್ಮ ಮಗಳ ಬಾಕ್ಸಿಂಗ್ ಕ್ರೀಡೆಯ ಸಾಧನೆಗಾಗಿ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ’ ಎಂದು ಹೇಳಿಬಿಟ್ಟ. ಅಷ್ಟೇ ಅಲ್ಲ; ಆತ ತನ್ನ ಕೆಲಸಕ್ಕೆ ರಾಜಿನಾಮೆಯನ್ನೂ ಕೊಟ್ಟುಬಿಟ್ಟ. ಮುಖ್ಯವಾಗಿ, ಆಕೆಯು ಎರಡು ಮಕ್ಕಳ ತಾಯಿಯಾದ ಸಂದರ್ಭದಲ್ಲಿ ಆತ ತೋರಿದ ಪ್ರೀತಿ, ಕಾಳಜಿ, ಪಾಲನೆ; ಮಕ್ಕಳಾದ ನಂತರ ಇನ್ನು ಕ್ರೀಡಾಲೋಕಕ್ಕೆ ತಿಲಾಂಜಲಿ ಇಡಬೇಕೆಂದು ಸ್ವತಃ ಮೇರಿಕೋಮ್ ಮನಸ್ಸುಮಾಡಿದಾಗ ಆತ, ಆಕೆಗೆ ತುಂಬಿದ ಧೈರ್ಯ ನಿಜಕ್ಕೂ ಶ್ಲಾಘನೀಯ. ಆತ ಮೇರಿಯ ಅನುಪಸ್ಥಿತಿಯಲ್ಲಿ ನಿಜಕ್ಕೂ ಎರಡು ಮಕ್ಕಳನ್ನು ತಾಯಿಯಾಗಿ ಪಾಲನೆಗೈದ.

ಮೇರಿಕೋಮ್‌ಗೆ ಕಷ್ಟದಲ್ಲಿ ಗೆಳೆಯನಾಗಿ, ಸಹಾಯಕನಾಗಿ, ಸಲಹೆಗಾರನಾಗಿ ಸೋತಾಗ ಕಣ್ಣೀರೊರೆಸುವ, ಮತ್ತೆ ಹೊಸ ಹುರುಪನ್ನು ತುಂಬುವ ಸಖನಾಗಿ ಸದಾಕಾಲ ಆಕೆಯು ಎಲ್ಲೇ ಹೋದರೂ ಜೊತೆಗಿರುತ್ತಾನೆ. ಇಲ್ಲಿಯವರೆಗೂ ಆಕೆಯ ಪ್ರತೀ ಯಶಸ್ಸಿನ ಹಿಂದೆಯೂ ಬೆನ್ನೆಲುಬಾಗಿದ್ದಾನೆ. ಮೇರೀ ಕೋಮ್‌ಳ ಯಶಸ್ಸಿನಲ್ಲಿ ತನ್ನ ಯಶಸ್ಸನ್ನು ಕಾಣುವ ಆತನ ನಿಸ್ವಾರ್ಥಗುಣ ಎಲ್ಲಾ ಪುರುಷರಿಗೆ ಮಾದರಿ ಎಂದರೆ ತಪ್ಪಾಗಲಾರದು.

ಈ ಪುಸ್ತಕದಲ್ಲಿ ಒಬ್ಬ ಹೆಣ್ಣುಮಗಳು ಬಾಕ್ಸಿಂಗ್‌ನಂತಹ ಸಾಹಸ, ಆಕ್ರಮಣಶೀಲ ಆಟದಲ್ಲಿ ತೊಡಗಿದಾಗ ದಯೆ-ದಾಕ್ಷಿಣ್ಯವಿಲ್ಲದೆ ಒಡೆದಾಡುವಾಕೆ, ಹೊರಗೆ ತನ್ನ ಮಕ್ಕಳಿಗೆ ತಾಯಿಯ ಪ್ರೀತಿಯನ್ನು ಕೊಡಲಾಗಲಿಲ್ಲವೆಂಬ, ಕುಟುಂಬದೊಂದಿಗೆ ದೂರವಿದ್ದೇನೆಂಬ ಕೊರಗಿನಿಂದ, ರಾತ್ರಿಯಿಡೀ ಮಗುವಂತೆ ಅಳುವ ಮೂಲಕ ವ್ಯಕ್ತಿ ಎಷ್ಟೇ ಮೇಲಕ್ಕೆ ಏರಿದರೂ ಕೂಡ ಹೇಗೆ ಕೌಟುಂಬಿಕ ಸೆಳೆತಗಳ ಸಂವೇದನಾಶೀಲತೆಯನ್ನು ಉಳಿಸಿಕೊಳ್ಳುತ್ತಾಳೆಂಬುದು ತಿಳಿಯುತ್ತದೆ.

ಆದರೆ, ಮೇರಿಕೋಮ್ ವಿಶಿಷ್ಟವಾಗಿ ಕಾಣುವುದು ಆಕೆ ಮತ್ತೆ ತನ್ನ ಗುರಿಯನ್ನು ನೆನೆದು ಆಟಕ್ಕೆ ಅಣಿಯಾಗುವ ಪರಿಯಿಂದ. ನಿಜಕ್ಕೂ ಕುಟುಂಬ ಕಾರಣದಿಂದ ಸುಲಭವಾಗಿ ಸೋಲನ್ನಪ್ಪುವ, ನಿಷ್ಕಿçಯವಾಗುವ ಮನಸ್ಸುಗಳಿಗೆ ಆಕೆಯ ದಿಟ್ಟತನ ಸ್ಪೂರ್ತಿಯಾಗುತ್ತದೆ. ಮತ್ತೊಮ್ಮೆ ದಿಗ್ಬçಮೆಯನ್ನೂ ಮೂಡಿಸುತ್ತದೆ.
ಮೇರೀ ಕೋಮ್ ತನ್ನ ತಂದೆ ತಾಯಿಯ ಕನಸನ್ನು ನನಸು ಮಾಡಿದವಳು. ಕೂಲಿಮಾಡುತ್ತಿದ್ದ ತನ್ನ ತಂದೆ ತಾಯಿಗೆ ಎಲ್ಲಾ ರೀತಿಯ ಭೌತಿಕ ಐಶ್ವರ್ಯವನ್ನು ಕೊಡುವುದರ ಜೊತೆಗೆ ಮುಖ್ಯವಾಗಿ, ಒಬ್ಬ ಯಶಸ್ವಿ ಕ್ರೀಡಾಪಟುವಾಗಿ ದೇಶವನ್ನು ಪ್ರತಿನಿಧಿಸಿ ತಂದೆ ತಾಯಿಯ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದು ಹೆಮ್ಮೆಯ ಹೆಣ್ಣುಮಗಳಾದವಳು.

ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೂ ‘ಸೋಲನ್ನು ಹೃದಯಕ್ಕೆ ತೆಗೆದುಕೊಳ್ಳದೇ, ಗೆಲುವನ್ನು ತಲೆಗೆ ಹತ್ತಿಸಿಕೊಳ್ಳದೇ’ ಸಮಾನಚಿತ್ತದಿಂದ ಬದುಕಿದವಳು. ‘ಹತ್ತಿದ ಏಣಿಯನ್ನು ಒದೆಯುವ’ ಜನರೇ ತುಂಬಿರುವ ಇಂದಿನ ದಿನಗಳಲ್ಲಿ ಕ್ರೀಡಾ ಬದುಕಿನಲ್ಲಿ ಯಶಸ್ಸು, ಪಡೆದಮೇಲೂ ತನ್ನಂತಹ ಬಡಕುಟುಂಬದ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕ್ರೀಡಾ ಅಕಾಡೆಮಿಯನ್ನು ಕಟ್ಟಿಕೊಂಡು ಉಚಿತವಾಗಿ ತರಬೇತಿಯನ್ನು ನೀಡಿ ಅವರ ಏಳ್ಗೆಗೆ ದುಡಿಯುತ್ತಿರುವುದು, ಕೋಟ್ಯಾಂತರ ಮಕ್ಕಳ ಹಕ್ಕುಗಳಿಗೆ ಹೋರಾಡುತ್ತಿರುವುದು ಆಕೆಯನ್ನು ವಿಶೇಷ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇವೆಲ್ಲಾ ಆಕೆಯ ಸಮಾಜಮುಖಿ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ.
ಈ ನಡುವೆ ಅಧ್ಯಾಯವೊಂದು ಅಕೆಯ ಗ್ಲಾಮರ್ ಜಗತ್ತನ್ನು ಅನಾವರಣಗೊಳಿಸುತ್ತದೆ. ಯಶಸ್ಸಿನ ಹಿಮಾಲಯವನ್ನು ಮುಟ್ಟಿದ ನಂತರ ಆಕೆಯನ್ನು ಗುರ್ತಿಸಿದ ಹಲವು ಪ್ರಖ್ಯಾತ ಕಂಪನಿಗಳು ರಾಯಬಾರಿಯನ್ನಾಗಿ ಮಾಡಿಕೊಂಡವು.

ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆದರು, ಜನಪ್ರಿಯ ಸಿನೆಮಾ, ಕ್ರೀಡಾಪಟುಗಳು, ರಾಜಕಾರಣಿಗಳ ಸಖ್ಯ ದೊರೆಯಿತು. ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಹಲವು ದೇಶಗಳನ್ನು ಸುತ್ತಾಡುವ ಅವಕಾಶ ಪಡೆದರು. ಆದರೂ, ಮೇರಿಕೋಮ್ ‘ನನ್ನ ಕುಟುಂಬದೊಂದಿಗೆ ಕಳೆದಾಗ ಸಿಗುವ ಸುಖ ಬೇರೆಲ್ಲೂ ಸಿಕ್ಕಿಲ್ಲ ಎನ್ನುತ್ತಾ.. ಯಾವುದೇ ದೇಶದ ಯಾವುದೇ ಐಶಾರಾಮಿ ಹೋಟೆಲ್‌ಗಳು ನನ್ನ ಮನೆಯಷ್ಟು ನೆಮ್ಮದಿಯನ್ನು ಕೊಟ್ಟಿಲ್ಲ’ ಎಂಬ ಮಾತು ಹಲವು ಐಹಿಕ ಭೋಗಗಳ ನಡುವೆಯೂ ಕುಟುಂಬದೊಂದಿಗೆ ನೆಮ್ಮದಿ ಬದುಕನ್ನು ಹರಸುವ ಆಕೆ ಇನ್ನಷ್ಟು ಆಪ್ತವಾಗುತ್ತಾಳೆ.

ಪುಸ್ತಕದ ಕೊನೆಗೆ ಆಕೆ ಜಗತ್ತಿಗೆ ನೀಡುವ ಸಂದೇಶ ಇಷ್ಟೇ: ‘ಬದುಕಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ನಿಮ್ಮಲ್ಲಿರಲಿ’. ಏನಾದರೂ ಸಾಧಿಸಬೇಕೆಂದು ಮುಂದಡಿಯಿಡುವವರಿಗೆ, ಈಕೆಯ ಮಾತಿಗಿಂತ ಬೇರೆ ಯಶೋಮಂತ್ರ ಬೇಕೆ?

ಆನಂದ ಎನ್.ಎಲ್,
ಸಹಾಯಕ ಪ್ರಾಧ್ಯಾಪಕರು
ಸಮಾಜಕಾರ್ಯ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ.

ಪುಸ್ತಕದ ಹೆಸರು : ಗಟ್ಟಿಗಿತ್ತಿ – ಭಾರತದ ಪ್ರಥಮ ಮಹಿಳಾ ಬಾಕ್ಸರ್ ಮೇರಿಕೋಮ್ ಆತ್ಮಕಥನ
ಲೇಖಕರು : ವಿಶ್ವೇಶ್ವರ ಭಟ್
ಮೊದಲ ಮುದ್ರಣ : ಜನವರಿ 2019
ಪ್ರಕಾಶನ : ಧಾತ್ರಿ ಪ್ರಕಾಶನ, ಮೈಸೂರು
ಪುಟಗಳು : 172
ಬೆಲೆ : 175 ರೂ.ಗಳು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...