Adichunchanagiri Education Trust ವಿದ್ಯಾರ್ಥಿಗಳು ಬದುಕಿನ ರಕ್ಷಣೆಯ ಬಗ್ಗೆ ಹಾಗೂ ತಮ್ಮನ್ನು ಸಾಕಿ ಸಲಹಿದ ತಂದೆ ತಾಯಿಗಳ ಬಗ್ಗೆಯೂ ಕೂಡ ಚಿಂತನೆ ನಡೆಸಬೇಕೆಂದು ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಇಂಡಕ್ಷನ್ ಕಾರ್ಯಾಗಾರ ಹಾಗೂ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂದೆ ತಾಯಿಗಳು ನಿಮ್ಮ ಎಲ್ಲಾ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾರೆ. ಅತ್ಯಂತ ದುಬಾರಿ ಮೊತ್ತದ ಮೊಬೈಲನ್ನು ಕೂಡ ನಿಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಕೊಡಿಸುತ್ತಾರೆ. ಆ ಮೊಬೈಲ್‌ನ ರಕ್ಷಣೆಗೆ ಸಂಬಂಧಿಸಿದಂತೆ ನೀವುಗಳು ಸ್ಕ್ರೀನ್ ಗಾರ್ಡ್, ಕವರ್ ಎಲ್ಲವನ್ನೂ ಹಾಕುತ್ತೀರಿ ಮೊಬೈಲ್‌ನ ರಕ್ಷಣೆಗೆ ಕಾಳಜಿ ತೋರಿಸುವ ನೀವು. ನಿಮ್ಮ ಬದುಕಿನ ರಕ್ಷಣೆಗೂ ಕೂಡ ಗಮನ ಹರಿಸಬೇಕೆಂದು ಮಾರ್ಮಿಕವಾಗಿ ಹೇಳಿದರು.
Adichunchanagiri Education Trust ಜೀವನದ ಸಂಧ್ಯಾ ಕಾಲದಲ್ಲಿ ನಿಮಗೆ ಬದುಕು ನೀಡಿದ ತಂದೆ ತಾಯಿಗಳ ರಕ್ಷಣೆ ಹಾಗೂ ಪೋಷಣೆ ನಿಮ್ಮ ಮೇಲಿರುತ್ತದೆ. ಅದನ್ನು ಚಾಚು ತಪ್ಪದೇ ಮಾಡುವುದು ನಿಮ್ಮ ಕರ್ತವ್ಯ ಕೂಡ ಆಗಿರುತ್ತದೆ. ಆದರೆ ಆಧುನಿಕ ಬದುಕಿನಿಂದಾಗಿ ಇಂದು ಎಷ್ಟೋ ತಂದೆ ತಾಯಿಗಳು ವೃದ್ದಾಶ್ರಮ ಸೇರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇವಿನ ಬೀಜವನ್ನು ಬಿತ್ತಿ, ಮಾವಿನ ಫಸಲನ್ನು ನಿರೀಕ್ಷಿಸಲು ಸಾಧ್ಯವಿಲ್ಲವೋ ಅದೇ ರೀತಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಬಿತ್ತದೇ ಅವರುಗಳನ್ನು ಒಳ್ಳೆಯವರನ್ನಾಗಿ ರೂಪಿಸುವುದು ಕೂಡ ಕಷ್ಟ ಸಾಧ್ಯ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಒತ್ತಿ ಒತ್ತಿ ಹೇಳಬೇಕು. ಆ ಮೂಲಕ ವಿದ್ಯಾರ್ಥಿ ಸಮೂಹವನ್ನು ಉತ್ತಮ ಸತ್ಪ್ರಜೆಗಳಾಗಿ ರೂಪಸಿಬೇಕೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ, ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನಾನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಪೋಷಕರು ಹೇಳುವಂತಹ ಮಾತನ್ನು ಪಾಲಿಸಿದಾಗ ಉತ್ತಮ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ನಿಮ್ಮ ಭವಿಷ್ಯವನ್ನು ರೂಪಿಸುವುದಕ್ಕಾಗಿ ಮನೆಯಲ್ಲಿ ತಂದೆ ತಾಯಿಗಳೂ, ಶಾಲೆಯಲ್ಲಿ ಶಿಕ್ಷಕರು ಸದಾ ಶ್ರಮಿಸುತ್ತಿರುತ್ತಾರೆ. ಇದನ್ನು ನೀವುಗಳು ಗಮನಿಸಬೇಕು ಅಲ್ಲದೇ ಪ್ರತಿನಿತ್ಯ ನಿಮ್ಮ ಅಭ್ಯಾಸವನ್ನು ಮುಂದುವರಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿ ಮಹಾಸಂಸ್ಥಾನ ಮಠದ ಬ್ರಹ್ಮಚಾರಿಗಳಾದ ನಿಶ್ಚಲಾನಂದನಾಥ ಸ್ವಾಮಿಜಿಯವರು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ನಿರ್ದೇಶಕರಾದ ಹಿರಿಯಣ್ಣ ಹೆಗಡೆಯವರು, ಶಿವಮೊಗ್ಗ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಗುರುರಾಜ್ , ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಶಾಲೆ ಮತ್ತು ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಹೇಮಾ. ಎಸ್. ಆರ್., ಬಿಜಿಎಸ್ ಗುರುಪುರ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್, ಮತ್ತು ಗಣ್ಯರು ಹಾಗೂ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.