Uttaradi Math ದೇವರು ಮಾಡಿದ ಅನಂತ ಉಪಕಾರದ ಸ್ಮರಣೆಯನ್ನು ಎಲ್ಲರೂ ಮಾಡಲೇಬೇಕು ಎಂದು ಉತ್ತರಾದಿ ಮಠಾ ಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಕೃಷ್ಣಾವತಾರದಲ್ಲಿ ದೇವಕಿಯ ಗರ್ಭದಲ್ಲಿ ಬಂದು ಕಂಸಾದಿಗಳ ಸಂಹಾರ ಮಾಡಿ ಬಹಳ ದೊಡ್ಡ ಉಪಕಾರ ಮಾಡಿದ್ದಾನೆ. ಇಷ್ಟೇ ಉಪಕಾರ ಮಾಡಿದ್ದಲ್ಲ. ಅನಂತವಾದ ಉಪಕಾರ ಮಾಡಿದ್ದಾನೆ. ದೇವರ ಬಗ್ಗೆ ಅಲ್ಪವಾದ ವರ್ಣನೆ ಮಾಡಬಾರದು ಎಂದರು.
ಭಾಗವತ ಎಂದರೆ ಕೃಷ್ಣನ ಪ್ರತಿಮೆ :
ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಬದರೀ ಆಚಾರ್ಯ, ಭಾಗವತ, ಗೀತಾದಿಗಳ ಶ್ರವಣದಿಂದ ಜೀವನವಿಡೀ ವರ್ಣನೆ ಮಾಡಿದರೂ ಮುಗಿಯದಷ್ಟು ಪುಣ್ಯ ಲಭಿಸುತ್ತದೆ. ಭಾಗವತ ಎಂದರೆ ಕೃಷ್ಣನ ಪ್ರತಿಮೆ ಇದ್ದಂತೆ ಎಂದರು.
ಭಾಗವತದ ಮೊದಲೆರಡು ಸ್ಕಂದಗಳು ಕೃಷ್ಣನ ಪಾದಗಳು, ಮೂರು ಹಾಗೂ ನಾಲ್ಕನೇ ಸ್ಕಂದಗಳು ತೊಡೆಗಳು, ಪಂಚಮ ಸ್ಕಂದ ನಾಭಿ, ಷಷ್ಠ ಸ್ಕಂದ ಹೃದಯ, ಸಪ್ತಮ ಮತ್ತು ಅಷ್ಟಮ ಬಾಹುಗಳು, ನವಮ ಸ್ಕಂದ ಕಂಠ, ದಶಮ ಸ್ಕಂದ ಮುಖವಿದ್ದಂತೆ. ಏಕಾದಶ ಸ್ಕಂದ ಹಣೆಯ ಮೇಲಿನ ಭಾಗ ಮತ್ತು ದ್ವಾದಶ ಸ್ಕಂದ ಶಿಖವಿದ್ದಂತೆ. ಒಂದೊ0ದು ಸ್ಕಂದದ ಶ್ರವಣದಿಂದ ಒಂದು ಪಾಪದ ಪರಿಹಾರ ಮತ್ತು ಪುಣ್ಯ ಸಾಧನವನ್ನು ಹೇಳಿದ್ದಾರೆ ಎಂದರು.
ಪ0ಡಿತರಾದ ಹೈದರಾಬಾದ್‌ನ ವಾಸುದೇವಾಚಾರ್ಯ ನಂಬಿ, ಬದರೀ ಆಚಾರ್ಯ ಪ್ರವಚನ ನೀಡಿದರು.
Uttaradi Math ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ ಸವಣೂರು ಮೊದಲಾದವರಿದ್ದರು.